ರಾಯಚೂರು : ಜಿಲ್ಲೆಯ ಸಿರವಾರ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಮಟನ್ ಊಟದ ನಂತರ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಭೀಮಣ್ಣ (60), ಅವರ ಪತ್ನಿ ಈರಮ್ಮ (54), ಮಗ ಮಲ್ಲೇಶ್ (19), ಮತ್ತು ಪುತ್ರಿ ಪಾರ್ವತಿ (17) ಮೃತಪಟ್ಟಿದ್ದಾರೆ. ಇನ್ನು ಕುಟುಂಬದ ಮತ್ತೊಬ್ಬ ಸದಸ್ಯೆ ಮಲ್ಲಮ್ಮ (18) ಗಂಭೀರ ಸ್ಥಿತಿಯಲ್ಲಿ ಇದ್ದು, ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ವಿವರ: ರಾಯಚೂರು, ಆಗಸ್ಟ್ 02: ರಾತ್ರಿ ಮಟನ್ ಊಟ ಮಾಡಿದ ಬಳಿಕ ಕುಟುಂಬದ ಎಲ್ಲಾ ಸದಸ್ಯರು ಮಲಗಿದ್ದರು. ಬೆಳಿಗ್ಗೆ ಏಳದ ಹಿನ್ನಲೆಯಲ್ಲಿ ಕಂಟಕ ಕಂಡುಬಂದಿದೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸಿರವಾರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮರಣದ ಶಂಕಿತ ಕಾರಣ: ಅಡುಗೆಯಲ್ಲಿ ಮಟನ್ ಮಾಡುವ ಸಂದರ್ಭದಲ್ಲಿ ಹಲ್ಲಿ ಬಿದ್ದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸಿರವಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ವರದಿ: ಅಮೃತ್ ಕುಮಾರ್