ಮತದಾನದ ಹಕ್ಕುಚಲಾಯಿಸಿ ಉತ್ತಮ ಜನ ಪ್ರತಿನಿಧಿಯನ್ನ ಆರಿಸುವ ಮೂಲಕ ದೇಶದ ಅಭಿವೃದ್ದಿಗೆ ಕೈ ಜೋಡಿಸಬೇಕು: ಮುನಿರಾಜು ಕರೆ
ಶಿಡ್ಲಘಟ್ಟ: 2024 ರ ಲೋಕಸಭಾ ಚುನಾವಣೆ ಹಿನ್ನೆಲೆ ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲೂ ಚುನಾವಣೆ, ಮತದಾನ ಕುರಿತು ಜನರಿಗೆ ವ್ಯಾಪಕವಾಗಿ ಅರಿವು ಮೂಡಿಸಲು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸ್ವೀಪ್ ಸಮಿತಿಯ ಅಧ್ಯಕ್ಷರಾದ ಜಿ. ಮುನಿರಾಜು ಅವರು ಮುಂದಾಗಿದ್ದಾರೆ. ಪ್ರತಿಯೊಬ್ಬರು ಚುನಾವಣೆಯಲ್ಲಿ ಭಾಗವಹಿಸಬೇಕು, ತಪ್ಪದೇ ಕಡ್ಡಾಯವಾಗಿ ಮತ ಚಲಾಯಿಸಬೇಕು. ಯಾವುದೇ ಆಸೆ ಆಮೀಷಗಳಿಗೆ ಒಳಗಾಗಬಾರದೆಂದು ಜನರಿಗೆ ಪ್ರಜಾಪ್ರಭುತ್ವದ ಕುರಿತು ವ್ಯಾಪಕ ಪ್ರಚಾರ ಮತ್ತು ಅರಿವು ಮೂಡಿಸುವ ಕಾರ್ಯಕ್ರಮಗಳು ಹಮ್ಮಿಕೊಳ್ಳುವ ಮೂಲಕ ಜಾಗೃತಿ ಅಭಿಯಾನ ನಡೆಸಿದರು.
ತಾಲ್ಲೂಕಿನ ಹಂಡಿಗನಾಳ ಗ್ರಾಮ ಪಂಚಾಯಿತಿ, ಮೇಲೂರು, ಭಕ್ತರಹಳ್ಳಿ, ವೈ ಹುಣಸೇನಹಳ್ಳಿ, ಮಳಮಾಚನಹಳ್ಳಿ, ಸೇರಿದಂತೆ ಹಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು, ಮತ್ತು ಸಿಬ್ಬಂದಿ, ಸಾರ್ವಜನಿಕರು ಒಳಗೊಂಡಂತೆ ರಂಗೋಲಿ ಸ್ಪರ್ದೆಯನ್ನು ಏರ್ಪಡಿ ರಂಗೋಲಿಯಲ್ಲಿ ಇ.ವಿ.ಎಂ, ಶಾಹಿ ಗುರುತು, ಮತದಾನ ಮಾಡುವ ವಿಧಾನದ ಕುರಿತು ವಿವರವಾಗಿ ತಿಳಿಸುವ ಮೂಲಕ ಜಾಗೃತಿಯನ್ನು ಮೂಡಿಸಲಾಯಿತು. ಇನ್ನೂ ಚುನಾವಣೆಯ ಪ್ರತಿಜ್ಞಾವಿಧಿಯನ್ನು ಬೋದಿಸಲಾಯಿತು.
ತಾ.ಪಂ ಕಾರ್ಯನಿರ್ವಹಕ ಅಧಿಕಾರಿ ಹಾಗೂ ಸ್ವೀಪ್ ಸಮಿತಿಯ ಅಧ್ಯಕ್ಷ ಜಿ. ಮುನಿರಾಜು ಅವರು ಮಾತನಾಡಿ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ದೇಶ ಭಾರತ. ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ 18 ವರ್ಷ ತುಂಬಿದ ಪ್ರತಿಯೊಬ್ಬ ಪ್ರಜೆಗೂ ಯಾವುದೇ ಜಾತಿ, ಧರ್ಮ, ಲಿಂಗ, ಬೇದ ಬಾವ ವಿಲ್ಲದೆ ಮತದಾನದ ಹಕ್ಕು ಕಲ್ಪಿಸಿದ್ದಾರೆ. ನಾವು ಮತ ಹಾಕುವ ಮೂಲಕ ಉತ್ತಮ ಜನಪ್ರತಿನಿಧಿಯನ್ನು ಆಯ್ಕೆ ಮಾಡುವ ಮೂಲಕ ದೇಶದ ಅಭಿವೃದ್ದಿಗೆ ಕೈ ಜೋಡಿಸಬೇಕು. ಚುನಾವಣೆಯಲ್ಲಿ ಭಾಗವಹಿಸುವುದು, ಮತದಾನ ಮಾಡುವುದು ನಮ್ಮ ಹಕ್ಕು. ಅದನ್ನು ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ಮತದಾನ ಮಾಡಬೇಕು ಕಳೆದ ಚುನಾವಣೆಗಿಂತ ಈ ಬಾರಿ ಹೆಚ್ಚು ಪ್ರಮಾಣದಲ್ಲಿ ಮತದಾನ ಮಾಡಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾ.ಪಂ. ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಮಹಿಳಾ ಸ್ವಸಹಾಯ ಸಂಘದ ಸದಸ್ಯರುಗಳು ಸೇರಿದಂತೆ ಸಾರ್ವಜನಿಕರು ಭಾಗವಹಿಸಿದ್ದರು.