ನವದೆಹಲಿ: ಅಬಕಾರಿ ನೀತಿ ಹಗರಣ ಕುರಿತಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರವಾಲ್ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕೇಜ್ರವಾಲ್ ಅವರ ಕಸ್ಟಡಿ ಅವಧಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಅವರನ್ನು ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ತನಿಖೆ ಮತ್ತು ನ್ಯಾಯದ ಹಿತಾಸಕ್ತಿಗಾಗಿ ಕೇಜ್ರವಾಲ್ ಅವರ ಕಸ್ಟಡಿ ಅಗತ್ಯವಿದೆ ಎಂದು ಈ ವೇಳೆ ಸಿಬಿಐ ವಾದಿಸಿತು.
ಆರೋಪಿಯ ವಿಚಾರಣೆ ನಡೆಸಿದ ರಜಾಕಾಲದ ನ್ಯಾಯಾಧೀಶರಾದ ಸುನೇನಾ ಶರ್ಮಾ, ಸಿಬಿಐ ಮನವಿಯನ್ನು ತಿರಸ್ಕರಿಸಿ ಕೇಜ್ರವಾಲ್ ಅವರನ್ನು ಜುಲೈ 12 ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ.
ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ನ್ಯಾಯಾಲಯದ ರಜಾಕಾಲದ ನ್ಯಾಯಾಧೀಶ ಅಮಿತಾಭ್ ರಾವತ್ ಅವರು ಈ ಹಿಂದೆ ಜೂನ್ 26 ರಂದು ಕೇಜ್ರವಾಲ್ ಅವರನ್ನು 3 ದಿನಗಳ ಕಾಲ ಸಿಬಿಐ ವಶಕ್ಕೆ ನೀಡಿದ್ದರು.
ಕೇಜ್ರವಾಲ್ ಪರ ವಿಚಾರಣೆಗೆ ಹಾಜರಾದ ಹಿರಿಯ ವಕೀಲ ವಿಕ್ರಮ್ ಚೌಧರಿ ವಾದ ಮಂಡಿಸಿ, ಆಗಸ್ಟ್ 2022 ರಿಂದ ಈ ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಹೇಳಿದರು.
ನನ್ನ ಕಕ್ಷಿದಾರರನ್ನು ಮಾರ್ಚ್ 21 ರಂದು ಇಡಿ ಬಂಧಿಸಿದೆ. ಮೇ 10 ರಂದು ಮೂರು ವಾರಗಳವರೆಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿತ್ತು ಎಂದು ಚೌಧರಿ ನ್ಯಾಯಾಲಯದ ಗಮನಕ್ಕೆ ತಂದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ಕೇಜ್ರವಾಲ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.