ನಕಲಿ ಕ್ಲಿನಿಕ್ ಗಳ ಮೇಲೆ ದಾಳಿ, ಎಫ್.ಐ.ಆರ್ ದಾಖಲಿಸಿ ಕ್ರಮಕ್ಕೆ ಮುಂದಾದ ಅಧಿಕಾರಿಗಳು.!
‘ಸಂವಿಧಾನ ಶಕ್ತಿ ನ್ಯೂಸ್’ ಶಿಡ್ಲಘಟ್ಟ: ತಾಲ್ಲೂಕಿನ ಹಲವು ಭಾಗಗಳಲ್ಲಿ ನಾಯಿ ಕೊಡೆಗಳಂತೆ ಖಾಸಗಿ ಕ್ಲಿನಿಕ್ ಗಳು ತಲೆ ಎತ್ತಿವೆ. ಅವುಗಳಿಗೆ ಸೂಕ್ತ ಪರವಾನಗಿ ಇದೆಯೋ, ಇಲ್ಲವೋ? ಆ ಕ್ಲಿನಿಕ್ ಗಳಲ್ಲಿ ಅರ್ಹತೆ ಹೊಂದಿರುವ ನಿಜವಾದ ವೈದ್ಯರು, ಜನರಿಗೆ ಔಷದಿ, ಜೊತೆಗೆ ಚಿಕಿತ್ಸೆ ನೀಡುತ್ತಿದ್ದಾರೋ, ಇಲ್ಲವೋ ಎಂಬುವುದು ಗೊತ್ತಿಲ್ಲ. ಇದನ್ನೆಲ್ಲಾ ಆರೋಗ್ಯ ಇಲಾಖೆ ಗಮನಿಸಿ ಕ್ರಮ ಕೈಗೊಳ್ಳಬೇಕಾಗಿರುತ್ತೆ, ಆದರೆ ಹಲವು ವರ್ಷಗಳಿಂದ ಜವಬ್ದಾರಿಯನ್ನೆ ಮರೆತು ನಿದ್ದೆಗೆ ಜಾರಿದ್ದ, ತಾಲ್ಲೂಕು ಆರೋಗ್ಯ ಇಲಾಖೆಯ ಅಧಿಕಾರಿಗಳು ಲೋಕಾಯುಕ್ತರ ಚಾಟಿಗೆ ಏಟಿಗೆ ಎಚ್ಚರಗೊಂಡು ಕರ್ತವ್ಯ ನಿರ್ವಹಿಸಲು ಮುಂದಾಗಿದ್ದಾರೆ.
ಹೌದು ತಾಲ್ಲೂಕಿನಲ್ಲಿ ಕಳೆದ ಒಂದು ತಿಂಗಳ ಹಿಂದೆಯಷ್ಟೇ ಚಿಕ್ಕಬಳ್ಳಾಪುರ ಜಿಲ್ಲಾ ಲೋಕಾಯುಕ್ತ ಅಧೀಕ್ಷಕರ ಆಂಟೋನಿ ಜಾನ್ ಅವರ ಅಧ್ಯಕ್ಷತೆಯಲ್ಲಿ ಸಾರ್ವಜನಿಕರ ಕುಂದುಕೊರತೆಗಳ ಸಭೆ ನಡೆದಿತ್ತು. ಸಭೆಯಲ್ಲಿ ತಾಲ್ಲೂಕು ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ಗುರುತರವಾದ ಗಂಭೀರ ಆರೋಪಗಳು ಸಾರ್ವಜನಿಕರೊಬ್ಬರು ದೂರು ಸಲ್ಲಿಸಿದ್ದರು. ಲೋಕಾಯುಕ್ತ ಅಧೀಕ್ಷಕರು ಯಾವುದೇ ಮುಲಾಜಿಲ್ಲದೆ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ ವೆಂಕಟೇಶ್ ಮೂರ್ತಿ ಅವರನ್ನ ಸಭೆಯಲ್ಲೆ ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು. ನಿಮ್ಮ ಅವಧಿಯಲ್ಲಿ ಎಷ್ಟು ನಕಲಿ ಕ್ಲಿನಿಕ್ ಗಳ ಮೇಲೆ ಕೇಸ್ ದಾಖಲು ಮಾಡಿದ್ದೀರಿ ಎಂದು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು.
ಐದು ವರ್ಷದ ಅವಧಿಯಲ್ಲಿ ಒಂದೂ ಕೇಸ್ ಮಾಡಿಲ್ಲ. ವಾರ್ನಿಂಗ್ ಮಾಡಿದ್ದೇನೆಂದು ತಿಳಿಸಿದ ತಾಲ್ಲೂಕು ಆರೋಗ್ಯಾಧಿಕಾರಿಯ ನಡೆಗೆ ಕೆಂಡಾಮಂಡಲರಾದ ಲೋಕಾಯುಕ್ತರು ಖಡಕ್ ಎಚ್ಚರಿಕೆ ನೀಡಿದ್ದರು.
ಲೋಕಾಯುಕ್ತರ ಚಾಟಿ ಏಟಿಗೆ ಎಚ್ಚತ್ತುಕೊಂಡಿರುವ ತಾಲ್ಲೂಕು ಆರೋಗ್ಯ ಇಲಾಖೆಯು, ನಕಲಿ ಕ್ಲಿನಿಕ್ ಗಳ ಪತ್ತೆಗೆ ಮುಂದಾಗಿದೆ. 17 ಡಿಸೆಂಬರ್ 2024 ರಂದು ತಾಲ್ಲೂಕಿನ ಬಶೆಟ್ಟಹಳ್ಳಿ ವೃತ್ತದಲ್ಲಿ ಸಾದಲಿ ಗ್ರಾಮದ ಎಸ್ ವಿ ಸಹದೇವ್ ಎಂಬುವವರು ಶ್ರೀ ಸಾಯಿ ಮೆಡಿಕಲ್ಸ್ & ಜನರಲ್ ಸ್ಟೋರ್ ನ ಮೊದಲನೇ ಮಹಡಿಯಲ್ಲಿ ಯಾವುದೇ ನಾಮಫಲಕವಿಲ್ಲದೆ ಹಾಗೂ ಸೂಕ್ತ ವಿದ್ಯಾರ್ಹತೆ ಪ್ರಮಾಣ ಪತ್ರ,ಹಾಗೂ ಕೆಪಿಎಂಇ. ಬೋರ್ಡ್ ನಲ್ಲಿ ನೋಂದಣಿ ಇಲ್ಲದೆ ಎಲ್ ಲೋಕನಾಥರೆಡ್ಡಿ ಎಂಬುವವರು ಜನರಿಗೆ ಔಷದಿ ನೀಡುತ್ತಿರುವುದು ಕಂಡು ಬಂದ ಹಿನ್ನೆಲೆ ಎಫ್.ಐ.ಆರ್ ದಾಖಲಿಸಿ ದೂಷಾರೋಪ ಪಟ್ಟಿಕೆ ಸಲ್ಲಿಕೆ ಮಾಡಿದ್ದಾರೆಂದು ಪತ್ರಿಕೆಗಳಿಗೆ ಮಾಹಿತಿ ನೀಡಿದ್ದಾರೆ.
ಜ. 06 ಸೋಮವಾರದಂದು ಬಶೆಟ್ಟಹಳ್ಳಿಯಲ್ಲಿ ಮತ್ತೊಂದು ನಕಲಿ ಕ್ಲಿನಿಕ್ ಮೇಲೆ ದಾಳಿ ನಡೆಸಿ ದಾಖಲೆಗಳು ಪರಿಶೀಲಿಸಿ ಪ್ರಕರಣ ದಾಖಲಿಸಿಸಲು ಕ್ರಮ ಕೈಗೊಂಡಿದ್ದಾರೆ ಮಾಹಿತಿ ನೀಡಿದ್ದಾರೆ.
ಅಂತೂ ಲೋಕಾಯುಕ್ತರ ಚಾಟಿ ಏಟಿಗೆ ಕರ್ತವ್ಯ ಮರೆತಿದ್ದ ತಾಲ್ಲೂಕು ಆರೋಗ್ಯ ಇಲಾಖೆಯ ಅಧಿಕಾರಿಗಳು ಎಚ್ಚತ್ತುಕೊಂಡು ತಮ್ಮ ಕರ್ತವ್ಯ ನಿರ್ವಹಿಸುವುದಕ್ಕೆ ಮುಂದಾಗಿದ್ದಾರೆ.
ವರದಿ: ಕೋಟಹಳ್ಳಿ ಅನಿಲ್ ಕುಮಾರ್ ಕೆ.ಎ