ಚಿಂತಾಮಣಿ ಉಪ ವಿಭಾಗದ ವ್ಯಾಪ್ತಿಯಲ್ಲಿ ನಡೆದ ದಲಿತರ ಕುಂದುಕೊರತೆಗಳ ಸಭೆ.
ಚಿಂತಾಮಣಿ: ಹೊಟ್ಟೆ ತುಂಬಿರುವ ಜನ ಮನೆಯಲ್ಲಿದ್ದರೆ, ನೊಂದ ಜನರು ಪೊಲೀಸ್ ಠಾಣೆಗೆ ಬರುತ್ತಾರೆ. ಅಂತಹ ನೊಂದ ಜನರಿಗೆ ಕಾನೂನು ಮೂಲಕ ನ್ಯಾಯ ಕೊಡಿಸುವ ಕೆಲಸ ಪೊಲೀಸರು ಮಾಡುತ್ತಾರೆ. ಪೊಲೀಸರಿಗೆ ಯಾರೂ ಹಣ ಕೊಡುವ ಅಗತ್ಯವಿಲ್ಲ. ಸರ್ಕಾರ ಸಂಬಳ ಕೊಡುತ್ತದೆ. ಮೇಲ್ವರ್ಗ ಮತ್ತು ಕೆಳವರ್ಗ ಅಂತ ಹೇಳುವುದು ಬಿಡಬೇಕು. ಮೇಲ್ವರ್ಗದವರು ಎಂದರೆ ಮೇಲಿಂದ ಉದರಿರುವುದಿಲ್ಲ. ಗಂಡು- ಹೆಣ್ಣು ಎರಡೇ ಜಾತಿ ಇರುವುದು ಪೊಲೀಸರಿಗೆ ಜಾತಿಯಿಲ್ಲ ಕಾನೂನೇ ನಮ್ಮ ಜಾತಿ ಎಂದು ಚಿಂತಾಮಣಿ ಉಪ ವಿಭಾಗದ ಡಿ.ವೈ.ಎಸ್ಪಿ. ಪಿ ಮುರಳಿಧರ್ ಹೇಳಿದರು.
ಚಿಂತಾಮಣಿ ಉಪವಿಭಾಗದ ವ್ಯಾಪ್ತಿಯಲ್ಲಿ ಭಾನುವಾರದಂದು ಡಿವೈಎಸ್ಪಿ ನೇತೃತ್ವದಲ್ಲಿ ಕರೆದಿದ್ದ ದಲಿತರ ಕುಂದುಕೊರತೆಗಳ ಸಭೆಯಲ್ಲಿ ಸಂವಿಧಾನ ಶಿಲ್ಪಿ ವಿಶ್ವ ಜ್ಞಾನಿ ಬಾಬಾ ಸಾಹೇಬ್ ಡಾ ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರವಿಟ್ಟು ಪುಷ್ಪ ನಮನ ಸಲ್ಲಿಸಿ ಸಭೆಯನ್ನ ಪ್ರಾರಂಭಿಸಿದರು. ದಲಿತರ ಸಮಸ್ಯೆಗಳು, ಕುಂದುಕೊರತೆಗಳು ಆಲಿಸಿದ ಬಳಿಕ ಮಾತನಾಡಿದ ಅವರು ದಲಿತರ ಕೇರಿಗಳಲ್ಲಿ ಮದ್ಯಮಾರಾಟ ಮಾಡುತ್ತಿರುವುದು ಕಂಡು ಬಂದಲ್ಲಿ ಮುಲಾಜಿಲ್ಲದೆ ಅಂತಹವರ ವಿರುದ್ದ ಕಾನೂನು ಕ್ರಮ ಕೈಗೊಂಡು ಮದ್ಯದ ಅಂಗಡಿಗಳು ಬಂದ್ ಮಾಡಿಸುವುದಾಗಿ ಭರವಸೆ ನೀಡಿದರು.
ಸಮಾಜದಲ್ಲಿ ನಾವೆಲ್ಲರೂ ಉತ್ತಮ ವ್ಯಕ್ತಿಗಳಾಗಿ ಬುದ್ದ, ಬಸವ, ಅಂಬೇಡ್ಕರ್ ಅವರ ಆದರ್ಶಗಳು ನಾವೆಲ್ಲರೂ ಪಾಲಿಸಬೇಕು. ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವುದು ಎಸ್.ಸಿ. ಎಸ್.ಟಿ ಜನಾಂಗವೆಂದು ನಿರ್ಭಯವಾಗಿ ಹೇಳುತ್ತೇನೆ. ದಲಿತರು ಇಲಿಗಳಲ್ಲ, ದಲಿತರು ಹುಲಿಗಳು ಎಂದು ಉರುಪು ತುಂಬಿದರು.
ದಲಿತ ಮುಖಂಡರು ಮಾತನಾಡುತ್ತಾ ನಾವೆಲ್ಲರೂ ಅಂಬೇಡ್ಕರ್ ವಾದಿಗಳು ಬುದ್ದ, ಬಸವಣ್ಣ, ಅಂಬೇಡ್ಕರ್ ತತ್ವ ಸಿದ್ದಾಂತಗಳು ಪಾಲಿಸುವವರು, ನಾವೆಲ್ಲರೂ ಕಾನೂನಿಗೆ ತಲೆಬಾಗಬೇಕು ಗೌರವಿಸಬೇಕು. ಕಾನೂನನ್ನು ಪೂಜಿಸಬೇಕು ಆದರೆ ಪೊಲೀಸ್ ಠಾಣೆಯ ಬಳಿಯೇ ದೇವಸ್ಥಾನ ಕಟ್ಟಿದ್ದಾರೆ. ಪೊಲೀಸ್ ಠಾಣೆಯ ಬಳಿ ಹೋದಂತಹ ಸಂದರ್ಭದಲ್ಲಿ ದೇವರಿಗೆ ಪೂಜೆ ಸಲ್ಲಿಸಿ ಮೊದಲು ನಮಗೇ ಪ್ರಸಾದ ನೀಡುವಂತಾಗಿದೆ ಎಂದರು.
ಇದಕ್ಕೆ ಪ್ರತಿಕ್ರಯಿಸಿದ ಅವರು ಬೇರೆ ಸಮುದಾಯದವರು ದೊಡ್ಡ ದೊಡ್ಡ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ದಲಿತರು ತಮ್ಮ ಮಕ್ಕಳನ್ನ ಶಾಲೆಗಳಿಗೆ ಕಳುಹಿಸಿ ವಿದ್ಯಾಭ್ಯಾಸ ಕೊಡಿಸಬೇಕು. ಶಾಲೆ ಬಿಟ್ಟಿರುವ ಮಕ್ಕಳನ್ನು ಶಾಲೆಗೆ ಸೇರಿಸಿ ಅಂತಹ ಮಕ್ಕಳು ಇದ್ದಲ್ಲಿ ನಮ್ಮ ಗಮನಕ್ಕೆ ತಿಳಿಸಿದರೆ ನಾನೇ ಮುಂದೆ ನಿಂತು ವಿದ್ಯಾಭ್ಯಾಸ ಕೊಡಿಸುವ ಕೆಲಸ ಮಾಡುತ್ತೇನೆ. ವಿದ್ಯಾಭ್ಯಾಸದ ಮೂಲಕ ದೊಡ್ಡ ದೊಡ್ಡ ಹುದ್ದೆಗಳು ಅಲಂಕರಿಸಬಹುದು ಇದರ ಬಗ್ಗೆ ದಲಿತರು ಗಮನಹರಿಸಬೇಕು ಎಂದು ಕರೆ ನೀಡಿದರು.
ದಲಿತರ ಕುಂದುಕೊರತೆಗಳ ಸಭೆಯಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಎಂ. ಶ್ರೀನಿವಾಸ್ ಸೇರಿದಂತೆ ಪೊಲೀಸ್ ಅಧಿಕಾರಿಗಳು, ದಲಿತಮುಖಂಡರು ಹಾಜರಿದ್ದರು.