Monday, December 23, 2024
Homeಜಿಲ್ಲೆಮಹಿಳಾ ನೆರವಿಗೆ ಎಲ್ಲಾ ಕಚೇರಿಗಳಲ್ಲಿ ಆಂತರಿಕ ದೂರು ಸಮಿತಿ ಸ್ಥಾಪನೆ ಕಡ್ಡಾಯ: ಡಾ.ನಾಗಲಕ್ಷ್ಮಿ ಚೌದರಿ.

ಮಹಿಳಾ ನೆರವಿಗೆ ಎಲ್ಲಾ ಕಚೇರಿಗಳಲ್ಲಿ ಆಂತರಿಕ ದೂರು ಸಮಿತಿ ಸ್ಥಾಪನೆ ಕಡ್ಡಾಯ: ಡಾ.ನಾಗಲಕ್ಷ್ಮಿ ಚೌದರಿ.

ಚಿಕ್ಕಬಳ್ಳಾಪುರ : ಸರ್ಕಾರಿ ಅಥವಾ ಖಾಸಗಿ ಉದ್ಯೋಗ ಸ್ಥಳಗಳಲ್ಲಿ ಮಹಿಳಾ ಸಿಬ್ಬಂದಿ ಮೇಲಿನ ದೌರ್ಜನ್ಯ ತಡೆಗೆ ಕೇಂದ್ರ ಸರ್ಕಾರ ಜಾರಿ ಮಾಡಿರುವ ‘ಪಾಶ್’ 2013 ಕಾಯ್ದೆಯನ್ವಯ ಆಂತರಿಕ ದೂರು ಸಮಿತಿಗಳನ್ನು ಎಲ್ಲಾ ಕಚೇರಿಗಳಲ್ಲಿ ಕಡ್ಡಾಯವಾಗಿ ರಚಿಸುವ ಮೂಲಕ‌ ನೊಂದ ಹೆಣ್ಣು‌ಮಕ್ಕಳು, ಮಹಿಳೆಯರಿಗೆ ಸ್ಪಂದಿಸಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌದರಿ ಹೇಳಿದರು.

ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ಇಂದು ರಾಷ್ಟ್ರೀಯ ಮಹಿಳಾ ಆಯೋಗ ಮತ್ತು ಕರ್ನಾಟಕ ಮಹಿಳಾ ಆಯೋಗದ ಸಹಯೋಗದಲ್ಲಿ ಸರ್ಕಾರಿ ನೌಕರರಿಗೆ ಹಮ್ಮಿಕೊಂಡಿದ್ದ ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಹಾಗೂ ಮಾನಸಿಕ ಕಿರುಕುಳದಿಂದ ಮಹಿಳೆಯರ ರಕ್ಷಣೆ ಕುರಿತು ಅಧಿಕಾರಿಗಳು, ಸಿಬ್ಬಂದಿ ಮತ್ತು ಆಂತರಿಕ ದೂರು ನಿವಾರಣಾ ಸಮಿತಿಯ ಅಧ್ಯಕ್ಷರು, ಸಿಬ್ಬಂದಿಗಾಗಿ ಏರ್ಪಡಿಸಿದ್ದ ಒಂದು ದಿನದ ಕಾನೂನು ಅರಿವು ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲೆ ನಡೆಯುವ ಮಾನಸಿಕ ಮತ್ತು ದೈಹಿಕ ಕಿರುಕುಳಗಳನ್ನು ತಡೆಯುವ ದೃಷ್ಟಿಯಿಂದ ಪಾಶ್ 2013 ಕಾಯಿದೆಯನ್ನು ರಚಿಸಿದೆ. ಆದರೆ, ಇಂತಹ ಮಹತ್ವದ ಮತ್ತು ಗಂಭೀರ ಕಾಯಿದೆ ಬಗ್ಗೆ ಸಂಬಂಧಪಟ್ಟ ಮಹಿಳಾ ಸಿಬ್ಬಂದಿಗೆ ಮಾಹಿತಿ ಕೊರತೆ ಇದೆ. ಅದರಲ್ಲೂ ರಾಜ್ಯದಲ್ಲಿನ ಜಿಲ್ಲಾಡಳಿತಗಳ ಕಚೇರಿಗಳಲ್ಲೇ ಈ ಕಾಯಿದೆ ಅನ್ವಯ ಮಹಿಳೆಯರ ಆಂತರಿಕ ದೂರು ನಿವಾರಣಾ ಸಮಿತಿಗಳು ರಚನೆಯಾಗದಿರುವುದು ಜಿಲ್ಲಾಡಳಿತಗಳಿಗೆ ಮಹಿಳೆಯರ ಕುರಿತು ಇರುವ ನಿರಾಸಕ್ತಿಯ ಪಾರದರ್ಶಕತೆಯನ್ನು ಎತ್ತಿ ತೋರಿಸುತ್ತದೆ. ಈ ಕಾಯಿದೆಯನ್ನು ಸರ್ವೋಚ್ಛ ನ್ಯಾಯಾಲಯವೂ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಆದರೂ ಜಿಲ್ಲಾ ಮಟ್ಟದ ಸರ್ಕಾರಿ ಕಚೇರಿಗಳಲ್ಲೇ ಈ ದೂರು ಸಮಿತಿಗಳು ರಚನೆಯಾಗದಿರುವುದು ದುರದೃಷ್ಟಕರ. ಕೂಡಲೇ ಜಿಲ್ಲಾಡಳಿತಗಳು ಈ ನಿಷ್ಕ್ರಿಯತೆಯಿಂದ ಹೊರಬಂದು ಸಮಿತಿಗಳನ್ನು ಕೂಡಲೇ ರಚಿಸಬೇಕು. ಕೇವಲ ಯಾಂತ್ರಿಕವಾಗಿ, ನೆಪ ಮಾತ್ರಕ್ಕೆ ,ದಾಖಲೆಗಳಿಗೋಸ್ಕರ ಸಮಿತಿಗಳನ್ನು ರಚಿಸದೆ ನೈಜ ಕಳಕಳಿಯಿಂದ ಸಮಿತಿಗಳನ್ನು ರಚಿಸಿ ಸಮಿತಿಗಳ ರಚನೆಯ ಉದ್ದೇಶ ಹಾಗೂ ಪಾಶ್ 2013ರ ಕಾಯಿದೆಯ ಬಗ್ಗೆ ಹೆಚ್ಚು ಪ್ರಚಾರ ಮಾಡಿ‌ ಮಹಿಳಾ ಸಿಬ್ಬಂದಿಗೆ ಮಾಹಿತಿ ನೀಡಬೇಕು ಮತ್ತು ಅರಿವು ಮೂಡಿಸಬೇಕು. ಮಹಿಳಾ ದೌರ್ಜನ್ಯ, ಕಿರುಕುಳದ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಿದರೆ ಮಹಿಳಾ ಆಯೋಗ ಸಹಿಸುವ ಪ್ರಶ್ನೆಯೇ ಇಲ್ಲ. ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲೆ ನಡೆಯುವ ಯಾವುದೇ ರೀತಿಯ ದೌರ್ಜನ್ಯಗಳನ್ನು ಆಯೋಗ ಸಹಿಸುವ ಪ್ರಶ್ನೆಯೇ ಇಲ್ಲ. ಕಿರುಕುಳ ಮತ್ತು ದೌರ್ಜನ್ಯಕ್ಕೆ ಒಳಗಾದ ಮಹಿಳಾ ಸಿಬ್ಬಂದಿಯೂ ದೂರು ಕೊಡಲು ಧೈರ್ಯವಾಗಿ ಮುಂದೆ ಬರಬೇಕು. ಅದು ಸರ್ಕಾರ ಕಾನೂನಿನ‌ ಮೂಲಕ‌ ಮಹಿಳೆರಿಗೆ ನೀಡಿರುವ ಮಹತ್ವದ ಮತ್ತು ಪರಿಣಾಮಕಾರಿ ಹಕ್ಕು ಇದರ ಪ್ರಯೋಜನ ಪಡೆದು ಸುರಕ್ಷಿತವಾಗಿ ಕೆಲಸದ ವಾತವರಣವನ್ನು ತಾವೇ ರೂಪಿಸಿಕೊಳ್ಳುವ ಆತ್ಮಸ್ತೈರ್ಯ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾಯಿದೆ ಜಾರಿಯಾಗಿ ದಶಕ ಕಳೆದರೂ ಇನ್ನೂ ಅದರ ಬಗ್ಗೆ ಮಹಿಳಾ ಸಿಬ್ಬಂದಿಗೇ ಸೂಕ್ತ ಮಾಹಿತಿ ಇಲ್ಲದಿರುವುದು ಆಡಳಿತ ವರ್ಗಗಳ ನಿರ್ಲಕ್ಷ್ಯ ಮತ್ತು ನಿಷ್ಕ್ರಿಯತೆಗೆ ಹಿಡಿದ ಕನ್ನಡಿಯಾಗಿದೆ. ಆಯಾ ಕಚೇರಿ ಹಂತದಲ್ಲಿ, ಪೊಲೀಸ್ ಠಾಣೆಗಳಲ್ಲಿ ಮತ್ತು ಜಿಲ್ಲಾ ಮಟ್ಟದಲ್ಲಿ ಮಹಿಳಾ ಸಿಬ್ಬಂದಿಗೆ ನ್ಯಾಯ ದೊರೆತರೆ ಅವರು ಆಯೋಗದ ಬಾಗಿಲು ತಟ್ಟುವವರೆಗೂ ಬರುವ ಅಗತ್ಯವಾದರೂ ಏನಿದೆ ಎಂದು ಜಿಲ್ಲಾಡಳಿತವನ್ನು ಪ್ರಶ್ನಿಸಿದರು. ಕಾರ್ಯಾಗಾರದಲ್ಲಿ ಆಯೋಗದ ಕಾರ್ಯದರ್ಶಿ ಆರ್.ಲತಾ ಮತ್ತಿತರರು ಹಾಜರಿದ್ದರು. ಇದೇ ಸಂದರ್ಭದಲ್ಲಿ ಪಾಶ್ ಕಾಯಿದೆ 2013 ರ ಕುರಿತು ಮಾಹಿತಿ ನೀಡಿ ಅರಿವು ಮೂಡಿಸಲಾಯಿತು ಹಾಗೂ ಸಂವಾದ ನಡೆಸಲಾಯಿತು. ಕಾರ್ಯಾಗಾರದಲ್ಲಿನ ಎಲ್ಲಾ ವಿಷಯಗಳನ್ನು ಮಹಿಳಾ ಸಿಬ್ಬಂದಿಗೆ ತಲುಪಿಸುವಂತೆ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌದರಿ ತಿಳಿಸಿದರು.

ರಾಜ್ಯ ಮಹಿಳಾ ಆಯೋಗದ ಕಾರ್ಯದರ್ಶಿ ಆರ್.ಲತಾ ಅವರು ಮಾತನಾಡಿ ಸರ್ಕಾರಿ ಅಥವಾ ಖಾಸಗಿ ಕಚೇರಿಗಳಲ್ಲಿ ಕೆಲಸ ಮಾಡುವ ಸಂದರ್ಭಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ಹಾಗೂ ಮಾನಸಿಕ ದೌರ್ಜನ್ಯಗಳು ನಡೆದಾಗ ಅವುಗಳನ್ನು ಸಹಿಸಿಕೊಳ್ಳದೆ ಅದರ ವಿರುದ್ಧ ಹೋರಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಒಬ್ಬ ಮಹಿಳೆಯು ಮಗಳಾಗಿ, ಅಕ್ಕಳಾಗಿ, ಹೆಂಡತಿಯಾಗಿ, ತಾಯಿಯಾಗಿ ಎಲ್ಲಾ ಪಾತ್ರಗಳನ್ನು ನಿರ್ವಹಿಸುತ್ತಾಳೆ. ಒಂದು ದೇಶದ ಅಭಿವೃದ್ಧಿಯನ್ನು ಅಳೆಯಬೇಕಾದರೆ ಆ ದೇಶದಲ್ಲಿ ಮಹಿಳೆಯರನ್ನು ಯಾವ ರೀತಿ ಕಾಣುತ್ತಿದ್ದಾರೆ ಎಂಬುದರ ಮೇಲೆ ಅವಲಂಬಿತವಾಗಿದೆ ಎಂಬ ಸ್ವಾಮಿ ವಿವೇಕಾನಂದರ ಮಾತನ್ನು ನಾವೆಲ್ಲರೂ ಅರ್ಥ ಮಾಡಿಕೊಂಡು ಮಹಿಳೆಯರಿಗೆ ಸಮಾನ ಗೌರವ ಮತ್ತು ಅವಕಾಶಗಳನ್ನು ನೀಡುವ ಮೂಲಕ ದೇಶದ ಪ್ರಗತಿಯನ್ನು ಸಾಧಿಸಬೇಕು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯವು ಕೇವಲ ಸರ್ಕಾರಿ ಕಚೇರಿಗಳಲ್ಲದೆ ಖಾಸಗಿಯಾಗಿ ಕೆಲಸ ಮಾಡುವ ಸ್ಥಳದಲ್ಲಿಯೂ ಕಂಡುಬರುತ್ತವೆ. ಹೆಣ್ಣು ಉದ್ಯೋಗಕ್ಕೆ ಹೊರ ಹೋಗುವಂತಿಲ್ಲ, ಆ ಕೆಲಸ ಮಾಡುವಂತಿಲ್ಲ, ಗಂಡು ಎಲ್ಲಿ ಬೇಕಾದರೂ ಹೋಗಬಹುದು ಬರಬಹುದು ಎಂದು ನಮ್ಮ ಮನೆಗಳಲ್ಲಿರುವ ಮೂಢ ಭಾವನೆಯಿಂದಲೇ ಕೆಲವು ದೌರ್ಜನ್ಯಗಳು ಶುರುವಾಗುತ್ತವೆ.

ಈ ಹಿಂದೆ ಮಹಿಳೆಯರ ರಕ್ಷಣೆಗಾಗಿ ಯಾವುದೇ ಕಾಯ್ದೆಗಳು ರಚನೆಯಾಗಿರಲಿಲ್ಲ. ಆನಂತರದಲ್ಲಿ ಕಾಯ್ದೆಗಳು ರೂಪಿತಗೊಂಡಿವೆ. ಮಹಿಳೆಯರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.ಈ ವೇಳೆ ಬೇಟಿ ಬಚಾವೋ ಬೇಟಿ ಪಡಾವೋ ಎಂಬ ಸೆಲ್ಫಿ ಕೇಂದ್ರದಲ್ಲಿ ಚಿತ್ರಾವಳಿಗಳಿಗೆ ಗಣ್ಯರು ಸೆರೆಯಾದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಪ್ರಕಾಶ್ ಜಿ.ಟಿ ನಿಟ್ಟಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ, ಅಪರ ಜಿಲ್ಲಾಧಿಕಾರಿ ಡಾ. ಎನ್.ಭಾಸ್ಕರ್, ಸಂಪನ್ಮೂಲ ವ್ಯಕ್ತಿಗಳಾಗಿ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ರಿಷಿ ಮದನ್, ಬೆಂಗಳೂರು ಕ್ರೈಸ್ಟ್ ಯುನಿವರ್ಸಿಟಿ ಡಾ.ಎನ್ ಸ್ವಪ್ನ, ಬೆಂಗಳೂರು ಆಡಳಿತ ಸಿ.ಐ.ಡಿ ಘಟಕದ ಸಿ.ಜಿ ರೋಹಿತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ವೆಂಕಟೇಶ್ ರೆಡ್ಡಿ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Social Media Links
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!