ಉನ್ನತ ಶಿಕ್ಷಣ ಸಚಿವರಿಂದ ಪರಿಭಾವಿತ ಅರಣ್ಯ ಪ್ರದೇಶಗಳ ಜಂಟಿ ಸರ್ವೆ ಅಳತೆ ಕಾರ್ಯದ ಪ್ರಗತಿ ಪರಿಶೀಲನೆ.
ಚಿಕ್ಕಬಳ್ಳಾಪುರ: ಕಂದಾಯ, ಅರಣ್ಯ ಇಲಾಖೆ ಸೇರಿದಂತೆ ಇತರ ಇಲಾಖೆಗಳ ಸಹಯೋಗದಲ್ಲಿ ಜಂಟಿ ಸಮೀಕ್ಷೆಯನ್ನು ನಡೆಸಿ ಜಿಲ್ಲೆಯಲ್ಲಿ 49,463 ಎಕರೆಯಷ್ಟು ಪರಿಭಾವಿತ ಅರಣ್ಯ ಪ್ರದೇಶದ ಸರ್ವೇ ಮಾಡಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ತಿಳಿಸಿದರು.
ಮಂಗಳವಾರ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಅಧಿಸೂಚಿತ ಪರಿಭಾವಿತ ಅರಣ್ಯ ಪ್ರದೇಶಗಳ ಜಂಟಿ ಸರ್ವೆ ಅಳತೆ ಕಾರ್ಯದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದು ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಪರಿಭಾವಿತ ಅರಣ್ಯವೆಂದು ಸರ್ಕಾರದಿಂದ ಘೋಷಣೆಯಾಗಿರುವ ಪ್ರದೇಶವದಲ್ಲಿ ಪ್ರಸ್ತುತ ವಾಸ್ತವದಲ್ಲಿರುವ ಸ್ವಾಭಾವಿಕ ಗಿಡ, ಮರ, ಕೆರೆ ಕುಂಟೆ, ಕಲ್ಲುಬಂಡೆ, ಲೀಸ್ ಲ್ಯಾಂಡ್, ಮುಜರಾಯಿ ಜಮೀನು, ಅರಣ್ಯ,ರೈತರ ಹಿಡುವಳಿ ಜಮೀನನ್ನು ಸರಿಯಾಗಿ ದೃಢೀಕರಿಸಲು ಅಧಿಕಾರಿಗಳು ಮರು ಸರ್ವೆ ಸಮೀಕ್ಷೆಯನ್ನು ಕೈಗೊಂಡು ಪುನರ್ ಪರಿಶೀಲಿಸುವ ಕಾರ್ಯ ಚಾಲನೆಯಲ್ಲಿದೆ ಜಿಲ್ಲೆಯ ಸುಮಾರು 49,463 ಎಕರೆಯಷ್ಟು ಪ್ರದೇಶವನ್ನು ಪರಿಭಾವಿತ ಅರಣ್ಯ ಪ್ರದೇಶವೆಂದು ಸರ್ಕಾರ 2022ರ ಮೇ ಮಾಹೆಯಲ್ಲಿ ಘೋಷಿಸಿರುತ್ತದೆ. ಈ ಮಧ್ಯೆ ಖಾಸಗಿ ಹಿಡುವಳಿ ಜಮೀನುಗಳನ್ನು ಮತ್ತು ಸರ್ಕಾರಿ ಜಾಗಳನ್ನು ಭೋಗ್ಯಕ್ಕೆ ನೀಡಿರುವಂತಹ ಜಮೀನುಗಳನ್ನು ಸಹ ಪರಿಭಾವಿತ ಅರಣ್ಯ ಪ್ರದೇಶವೆಂದು ಘೋಷಿಸಿರುವ ಬಗ್ಗೆ ರಾಜ್ಯದಾದ್ಯಂತ ದೂರು ಆಕ್ಷೆಪಣೆ ಅರ್ಜಿಗಳು ಸ್ವೀಕೃತವಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಪುನರ್ ಪರಿಶೀಲಿಸಲು ಅವಕಾಶ ಮಾಡಿಕೊಟ್ಟಿರುತ್ತದೆ. ಆ ಹಿನ್ನೆಲೆಯಲ್ಲಿ ಪರಿಭಾವಿತ ಅರಣ್ಯವೆಂದು ಅರಣ್ಯ ಇಲಾಖೆಯ ಅಂತರ್ಜಾಲ http://aranya.gov.in/aranyaacms ನಲ್ಲಿ ಪ್ರಚುರಪಡಿಸಿರುವ ದಾಖಲೆಗಳನ್ನು ಪಡೆದು ಕಂದಾಯ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳ ಸಮ್ಮುಖದಲ್ಲಿ ಜಿಲ್ಲೆಯಾದ್ಯಂತ ಮರು ಸಮೀಕ್ಷೆ ಮಾಡಿ ವರದಿ ನೀಡಲು ಜಿಲ್ಲಾಡಳಿತದ ಅಧಿಕಾರಿಗಳಿಗೆ ಸೂಚನೆಗಳನ್ನು ಈ ಹಿಂದೆಯೇ ನೀಡಲಾಗಿತ್ತು. ಅದರಂತೆ ಅಧಿಕಾರಿಗಳು ಜಂಟಿ ಸಮೀಕ್ಷೆಗಳನ್ನು ನಡೆಸಿರುವ ಕಾರ್ಯವು ಬಹುತೇಕ ಪೂರ್ಣಗೊಂಡಿದೆ . ಈ ಬಗ್ಗೆ ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದಾರೆ ಆ ಮಾಹಿತಿ ಆಧರಿಸಿ ಕೆಲವು ಪ್ರದೇಶಗಳ ದಾಖಲಾತಿಗಳಲ್ಲಿ ಕಾನೂನು ರೀತ್ಯಾ ಮರು ಮಾರ್ಪಾಡುಗಳನ್ನು ಮಾಡಲು ಸೂಚನೆಗಳನ್ನು ನೀಡಲಾಗಿದೆ. ಮರು ಮಾರ್ಪಾಡುಗಳನ್ನು ಕಾನೂನು ರೀತಿ ಅರಣ್ಯ ಇಲಾಖೆಯ ಸಹಯೋಗದಲ್ಲಿ ಇತರೆ ಇಲಾಖೆಗಳ ಅಧಿಕಾರಿಗಳು ಪರಿಶೀಲಿಸಿ ಮುಂದಿನ 10 ದಿನಗಳ ಒಳಗಾಗಿ ಜಿಲ್ಲಾಧಿಕಾರಿಗಳಿಗೆ ವರದಿ ನೀಡುವಂತೆ ತಿಳಿಸಲಾಗಿದೆ ಎಂದು ತಿಳಿಸಿದರು.
ಈ ಪರಿಭಾವಿತ ಅರಣ್ಯ ಪ್ರದೇಶದಲ್ಲಿ ಕೆರೆ ಕುಂಟೆ, ಹಿಡುವಳಿ ಜಮೀನು, ಕಲ್ಲುಬಂಡೆ, ಜಮೀನು ಅಥವಾ ಅರಣ್ಯ ಇದ್ದರೆ ವಾಸ್ತವ ಅಂಶಗಳನ್ನು ದಾಖಲೆಗಳಲ್ಲಿ ನಮೂದಿಸಿ ಷರಾ ಬರೆದು ದೃಢೀಕರಿಸಬೇಕು. ಈ ಕಾರ್ಯವು ಕರಾರುವಕ್ಕಾಗಿ ನಿಯಮಾವಳಿ ರೀತ್ಯ ಆಗಬೇಕು. ಪ್ರತಿ ತಾಲ್ಲೂಕುವಾರು, ಗ್ರಾಮವಾರು, ಸರ್ವೆ ನಂಬರ್ ವಾರು ಬಾಕಿ ಸಮೀಕ್ಷೆ ಮತ್ತು ಸರ್ವೆ ಆಗಬೇಕು. ಸಮೀಕ್ಷೆ ಆಗಿರುವುದಕ್ಕೆ ಜಿ.ಪಿ.ಆರ್.ಎಸ್ ಪೋಟೋಗ್ರಫಿ ಮಾಡಿ ದಾಖಲೆಗಳನ್ನು ಮೇಲಾಧಿಕಾರಿಗಳಿಗೆ ಸಲ್ಲಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆಗಳನ್ನು ಸಚಿವರು ನೀಡಿದರು.
ಅರ್ಜಿದಾರರು ಸುಮಾರು ವರ್ಷಗಳಿಂದ ಉಳುಮೆ ಮಾಡುತ್ತಿದ್ದು ಸದರಿ ಪ್ರದೇಶವನ್ನು ಪರಿಭಾವಿತ ಅರಣ್ಯವೆಂದು ಘೋಷಿಸಿರುವುದು ಹಾಗೂ ಅರ್ಜಿದಾರರಿಗೆ ಈಗಾಗಲೇ ಸರ್ಕಾರಿ ಜಮೀನುಗಳನ್ನು ಗುತ್ತಿಗೆಗೆ ನೀಡಿದ್ದು, ಅಂತಹ ಜಮೀನುಗಳನ್ನು ಪರಿಭಾವಿತ ಅರಣ್ಯವೆಂದು ಘೋಷಿಸಿರುವುದು ಆಕ್ಷೇಪಣೆಗಳಿಗೆ ಕಾರಣವಾಗಿರುತ್ತದೆ. ನಿಯಮಾವಳಿ ರೀತ್ಯ ಸ್ವಾಭಾವಿಕ ಗಿಡ ಮರಗಳು ಬೆಳೆದು ಅರಣ್ಯ ಪ್ರದೇಶವಿರುವ ಜಾಗವನ್ನು ಪರಿಭಾವಿತ ಅರಣ್ಯ ಪ್ರದೇಶವೆಂದು ಘೋಷಿಸಿರುವುದಕ್ಕೆ ನಮ್ಮ ತಕರಾರು ಏನು ಇರುವುದಿಲ್ಲ. ಆದರೆ ಅರಣ್ಯವಲ್ಲದ ಇತರೆ ಪ್ರದೇಶಗಳನ್ನು ಪರಿಭಾವಿತ ಅರಣ್ಯ ಪ್ರದೇಶದ ವ್ಯಾಪ್ತಿಗೆ ಸೇರ್ಪಡೆ ಮಾಡುವುದು ಸಮಂಜಸವಾಗಿರುವುದಿಲ್ಲ, ಅಂತಹ ಪರಿಭಾವಿತ ಅರಣ್ಯ ಪ್ರದೇಶವನ್ನು ಅರಣ್ಯ ವ್ಯಾಪ್ತಿಯಿಂದ ಕೈ ಬಿಡಲು ಕ್ರಮ ವಹಿಸಲು ತಜ್ಞರಿಂದ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಸಮಿತಿಗಳನ್ನು ರಚಿಸಲಾಗಿದೆ.ಸಮಿತಿಯ ಅಧಿಕಾರಿಗಳು ತಮ್ಮ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಿದರೆ ರೈತರಿಗೆ ನ್ಯಾಯ ದೊರಕಿಸಿಕೊಡಬಹುದು. ಆದ್ದರಿಂದ ಬಾಕಿ ಇರುವ ಸರ್ವೆ, ಸಮೀಕ್ಷೆ ಕಾರ್ಯವನ್ನು ಅತ್ಯಂತ ಜವಾಬ್ದಾರಿಯುತವಾಗಿ ತ್ವರಿತವಾಗಿ ಮಾಡಬೇಕು ಎಂದು ಕಟ್ಟುನಿಟ್ಟಿನ ಸೂಚನೆಗಳನ್ನು ಸಚಿವರು ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪಿ. ಎನ್ ರವೀಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ. ಟಿ ನಿಟಾಲಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್, ಅಪರ ಜಿಲ್ಲಾಧಿಕಾರಿ ಎನ್.ಭಾಸ್ಕರ್, ಜಿಲ್ಲಾ ಉಪವಿಭಾಗಾಧಿಕಾರಿ ಡಿ. ಎಚ್ ಆಶ್ವಿನ್, ಎಲ್ಲಾ ತಾಲ್ಲೂಕು ತಹಸೀಲ್ದಾರ್ ಗಳು, ಹಾಗೂ ವಿವಿಧ ಇಲಾಖೆಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸಿತರಿದ್ದರು.