ಸಂಸತ್ ಸದಸ್ಯನಾಗಿ ಆಯ್ಕೆಯಾದರೆ ಕೋಲಾರದ ಜನರಿಗೆ ಕುಡಿಯಲು ಕಾವೇರಿ ತರುವುದಾಗಿ ಘೋಷಣೆ
ಶಿಡ್ಲಘಟ್ಟ : ಮತದಾನ ಕನ್ಯಾದಾನವಷ್ಟೆ ಶ್ರೇಷ್ಟವಾದದ್ದು, ಮತದಾರರು ಜಾಗೃತರಾಗಬೇಕು ಮತದಾರರು ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ಮತದಾನ ಮಾಡಿದರೆ ನನ್ನ ಗೆಲುವು ಖಚಿತವೆಂದು ಭಾವಿಸಿದ್ದೇನೆ. ಬೇರೆ ಬೇರೆ ರಾಜಕೀಯ ಪಕ್ಷಗಳು ಒಡ್ಡುವಂತಹ ಆಸೆ ಆಮಿಷಗಳಿಗೆ ಮಾರುಹೋದರೆ ನನಗೆ ಹಿನ್ನಡೆಯಾಗುತ್ತದೆ ಈ ಸತ್ಯವನ್ನು ನಾನು ಅರಿತುಕೊಂಡಿದ್ದೇನೆ. ನಾನು ಸಂಸತ್ ಸದಸ್ಯನಾಗಿ ಆಯ್ಕೆಯಾದರೆ 70 ವರ್ಷಗಳಿಂದ ಆಗದೆ ಇರುವ ಅಭಿವೃದ್ದಿ ಕೆಲಸಗಳಿಗೆ ಚಾಲನೆ ನೀಡುವ ಕೆಲಸ ಮಾಡುತ್ತೇನೆ. ಜೊತೆಗೆ ಕೋಲಾರದ ಜನತೆಗೆ ಕುಡಿಯಲು ಕಾವೇರಿ ನೀರು ತರುವ ಕೆಲಸ ಮಾಡುತ್ತೇನೆ ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಬೆಂಬಲಿತ ಕೋಲಾರ ಲೋಕಸಭಾ ಅಭ್ಯರ್ಥಿ ಡಾ ಎಂ. ವೆಂಕಟಸ್ವಾಮಿ ಹೇಳಿದರು.
ನಗರದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಕೋಲಾರ ಲೋಕಸಭಾ ಕ್ಷೇತ್ರ ಅಭಿವೃದ್ದಿಯಲ್ಲಿ ಬಾರೀ ಹಿಂದುಳಿದಿದೆ. ಕ್ಷೇತ್ರದ ಅಭಿವೃದ್ದಿಯ ಬಗ್ಗೆ ಜನರೇ ಹೇಳುತ್ತಿದ್ದಾರೆ. ಜಿ ವೈ ಕೃಷ್ಣನ್ 25 ವರ್ಷ ಸಂಸದರಾಗಿದ್ದರು, ಕೆಎಚ್ ಮುನಿಯಪ್ಪ 35 ವರ್ಷ, ಮತ್ತೊಬ್ಬ ಮುನಿಯಪ್ಪ ಒಂದು ಅವಧಿ ಇನ್ನೂ ಎಸ್. ಮುನಿಸ್ವಾಮಿ ಐದು ವರ್ಷ ಇವರೆಲ್ಲರೂ ಸಂಸದರಾಗಿದ್ದಾರೆ. ಆದರೆ ಕರ್ನಾಟಕ ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಹೋಲಿಸಿದರೆ ಕೋಲಾರ ಲೋಕಸಭಾ ಕ್ಷೇತ್ರ ಬಹಳ ಹಿನ್ನಡೆ ಅನುಭವಿಸಿದೆ. ತುಮಕೂರು ಜಿಲ್ಲೆ, ಬೆಂಗಳೂರಿನಲ್ಲಿ ನಾಲ್ಕು ಕ್ಷೇತ್ರಗಳಿದ್ದು ಅವೆಲ್ಲವೂ ಅಭಿವೃದ್ಧಿಯಾಗಿದೆ ಚಿಕ್ಕಬಳ್ಳಾಪುರ ಹಾಗೂ ಕೋಲಾರ ಎರಡು ಜಿಲ್ಲೆಗಳು ನಿರೀಕ್ಷೆಗಿಂತ ಹೆಚ್ಚು ಅಭಿವೃದ್ಧಿಯಾಗಿಲ್ಲ.
ನನ್ನಂತಹ ಹೋರಾಟಗಾರನೊಬ್ಬ ಸಂಸತ್ ಸದಸ್ಯನಾದರೆ ಇವರೆಲ್ಲರೂ 70 ವರ್ಷಗಳಲ್ಲಿ ಮಾಡದೇ ಇರತಕ್ಕಂತಹ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ಕೊಡುವಂತಹ ಕೆಲಸ ಪ್ರಾಮಾಣಿಕವಾಗಿ ಮಾಡುತ್ತೇನೆ. ಈ ಹಿಂದೆ ಎರಡು ಜಿಲ್ಲೆಗಳಿಗೆ ಸ್ವತಂತ್ರ ವಿಶ್ವವಿದ್ಯಾಲಯವಾಗಬೇಕೆಂದು ಹೋರಾಟ ಮಾಡಿದೆ ಅಂತಿಮವಾಗಿ ಸ್ನಾತಕೋತ್ತರ ಯೂನಿರ್ವಸಿಟಿಯಾಗಿದೆ. ಶ್ರೀನಿವಾಸಪುರ ತಾಲ್ಲೂಕು ನಮ್ಮೂರಿನ ಪಕ್ಕದಲ್ಲೆ ಜಾಗ ಹುಡುಕಿ ಗುದ್ದಲಿ ಪೂಜೆ ಮಾಡಿ ಕೆ.ಎಚ್ ಮುನಿಯಪ್ಪ ಎಲ್ಲರಿಗೂ ಟೋಪಿ ಹಾಕಿ ಹೋದ ಅದರ ಭಾಗವಾಗಿ ಸೋತಿದ್ದು ಮುಂದುವರೆದ ಭಾಗ ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ.
ಕೆರೆಗಳಲ್ಲಿ ಹೂಳು ತೆಗೆಯದೆ ನೀರು ನಿಲ್ಲುತ್ತಿಲ್ಲ.ಕೋಲಾರ ಜಿಲ್ಲೆಯ ಕೆರೆಗಳಿಗೆ ಕಲುಷಿತ ನೀರನ್ನು ಹರಿಸಬೇಡಿ ಎಂದು ಈಗಲೂ ಹೋರಾಟ ಮಾಡುತ್ತಿದ್ದೇವೆ. ಇತಿಹಾಸ ಇರುವಂತಹ ಅಂಬೇಡ್ಕರ್ ಅವರು ಇದ್ದಂತಹ ರಿಪಬ್ಲಿಕನ್ ಪಾರ್ಟಿ ಆಪ್ ಇಂಡಿಯಾ ದೇಶದಲ್ಲಿ ತಲೆ ಎತ್ತ ಬಾರದೆಂದು ಕಾಂಗ್ರೆಸ್ ದೊಡ್ಡ ಷಡ್ಯಂತರ ಮಾಡಿದೆ. ಕಾಂಗ್ರೇಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಇದೇ ಪಾರ್ಟಿಯಲ್ಲಿ ಪ್ರಾಥಮಿಕ ಸದಸ್ಯತ್ವವನ್ನ ಪಡೆದುಕೊಂಡು ಹೋರಾಟಗಾರರಾಗಿದ್ದರು. ಒಂದು ಹಂತಕ್ಕೆ ಬಂದ ನಂತೆ ಕಾಂಗ್ರೇಸ್ ಪಕ್ಷ ಅವರನ್ನ ಸೆಳೆದುಕೊಂಡು ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾಗಿದ್ದಾರೆ. ರಿಪಬ್ಲಿಕನ್ ಪಾರ್ಟಿಯಿಂದ ಬೇರೆ ಬೇರೆ ಪಕ್ಷಗಳಿಗೆ ವಲಸೆ ಹೋಗಿದ್ದಾರೆ. ನಾನು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಬೆಂಬಲಿತ ಅಭ್ಯರ್ಥಿಯಾಗಿ ಕೋಲಾರ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ದೆ ಮಾಡಿದ್ದೇನೆ. ನನ್ನ ಗುರುತು “ಹೊಲಿಗೆ ಯಂತ್ರ” ಕ್ರಮ ಸಂಖ್ಯೆ : 16, ಆಗಿರುತ್ತದೆ. ನಿರಂತರವಾಗಿ ಮತದಾರರನ್ನ ಬೇಟಿ ಮಾಡುತ್ತಿದ್ದೇನೆ.ಜೊತೆಗೆ ಮುಖಂಡರನ್ನೂ ಬೇಟಿ ಮಾಡಿ ನಿಕಟ ಸಂಪರ್ಕದಲ್ಲಿದ್ದು ಮನೆ ಮನೆಗೂ ತಲುಪಿಸಿ ಮತದಾರರಿಗೆ ಜಾಗೃತಿ ಮೂಡಿಸುವ ಕೆಲಸ ನಮ್ಮ ಕಾರ್ಯಕರ್ತರು ಮಾಡಲಿದ್ದಾರೆ ಎಂದರು.
ಚುನಾವಣಾ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ತಂಡ, ತಪಾಸಣೆ ಧಳ ತಂಡಗಳು, ಬೇಕಾಬಿಟ್ಟಿ ಕೆಲಸ ಮಾಡುತ್ತಿದ್ದಾರೆ. ರಾಜಕೀಯ ಪಕ್ಷಗಳ ನಾಯಕರಿಗೆ ಸಂಬಂಧಿಸಿದ ಹಣ, ವಸ್ತುಗಳು ಕೆಲವು ಕಡೆಗಳಲ್ಲಿ ಮಾತ್ರ ಜಪ್ತಿಯಾಗುತ್ತಿವೆ. ಇದು ಮತ್ತಷ್ಟು ಕಠಿಣವಾಗಿ ಕೆಲಸ ಮಾಡಬೇಕು. ಚುನಾವಣೆ ಆಯೋಗಕ್ಕೆ ದೂರನ್ನ ಸಲ್ಲಿಸುತ್ತೇನೆ. ಮತದಾನ ಮೌಲ್ಯ ಪ್ರತಿಯೊಬ್ಬರೂ ತಿಳಿಯಬೇಕು. ರಾಜಕೀಯ ಪಕ್ಷಗಳು ಉಪಜಾತಿಗಳ ಹೆಸರಿನಲ್ಲಿ ಎಡ – ಬಲ, ಅಸ್ಪ್ರುಶ್ಯರು ಮತ್ತು ಸ್ಪುಶ್ಯರು ಎಂದು ಮಾನ ಮರ್ಯಾದೆ ಇಲ್ಲದೆ ಪ್ರದರ್ಶನ ಮಾಡುತ್ತಿವೆ ಎಂದರು.
ಈ ಸಂದರ್ಭದಲ್ಲಿ ಸಮತಾ ಸೈನಿಕ ದಳ ರಾಜ್ಯ ಮಹಾಪ್ರಧಾನ ಕಾರ್ಯದರ್ಶಿ ಜಿ ಸಿ ವೆಂಕಟರಮಣಪ್ಪ, ತಾಲ್ಲೂಕು ಅಧ್ಯಕ್ಷ ಕೆ.ಎಸ್.ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್, ಗಂಗಧರ್, ಮುನಿಆಂಜಿನಪ್ಪ, ಚಾಗೆ ಮುನಿಕೃಷ್ಣಪ್ಪ, ನಂಜಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು
ವರದಿ: ಕೋಟಹಳ್ಳಿ ಅನಿಲ್ ಕುಮಾರ್ ಕೆ.ಎ