ಗೌರಿಬಿದನೂರು : ಗ್ರಾಮೀಣ ಭಾಗದ ಸರ್ಕಾರಿ ಶಾಲೆಯ ಮಕ್ಕಳ ಕಲಿಕೆಗೆ ದಾನಿಗಳ ಸಹಕಾರವು ಶೈಕ್ಷಣಿಕ ಪ್ರಗತಿಗೆ ಆಸರೆಯಾಗಲಿದೆ ಎಂದು ನಿವೃತ್ತ ಶಿಕ್ಷಕರಾದ ಚಿಕ್ಕೇಗೌಡ್ರು ತಿಳಿಸಿದರು.
ತಾಲ್ಲೂಕಿನ ಹೊಸೂರು ಹೋಬಳಿಯ ಹಂಪಸಂದ್ರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ 78 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ವಿಲೇಜ್ ಬಾಯ್ಸ್ ಆರ್ಗನೈಜೇಷನ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಶಾಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಹಳೆಯ ವಿದ್ಯಾರ್ಥಿಗಳು ಮತ್ತು ಸ್ಥಳೀಯ ಗ್ರಾಮಸ್ಥರ ಸಹಕಾರವು ಅವಿಸ್ಮರಣೀಯವಾಗಿದೆ. ಇದರಿಂದಾಗಿ ಮಕ್ಕಳ ಕಲಿಕೆಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಪೋಷಕರು ಕೇವಲ ಮಕ್ಕಳನ್ನು ಶಾಲೆಗೆ ಕಳುಹಿಸಿದರೆ ಜವಾಬ್ದಾರಿ ಮುಗಿಯುವುದಿಲ್ಲ, ಮನೆಯಲ್ಲಿ ಮತ್ತು ಸಮುದಾಯದಲ್ಲಿ ಮಕ್ಕಳ ನಡತೆ ಮತ್ತು ಮಾತನಾಡುವ ಭಾಷೆಯ ನಿಯಂತ್ರಣದ ಬಗ್ಗೆ ಗಮನಿಸಬೇಕಾಗಿದೆ. ಕಲಿಕೆಗೆ ಉತ್ತಮ ವಾತಾವರಣ ಮತ್ತು ಗುಣಮಟ್ಟದ ಶಿಕ್ಷಕರಿರುವ ಈ ಶಾಲೆಯಲ್ಲಿ ವಿದ್ಯಾರ್ಥಿಗಳು ಓದುವ ಅವಕಾಶ ಪಡೆದಿರುವುದೇ ಪುಣ್ಯವಾಗಿದೆ ಎಂದು ಹೇಳಿದರು.
ಶಾಲೆಯ ಮುಖ್ಯ ಶಿಕ್ಷಕರಾದ ಆರ್.ಪಿ.ಬ್ರಹ್ಮಪ್ರಕಾಶ್ ಮಾತನಾಡಿ, ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಸದಾ ಇಲ್ಲಿನ ಕಾರ್ಯಚಟುವಟಿಕೆಗಳ ಬಗ್ಗೆ ಆಸಕ್ತಿ ವಹಿಸಿ ಅಗತ್ಯ ಪರಿಕರಗಳನ್ನು ವ್ಯವಸ್ಥೆ ಮಾಡುತ್ತಾರೆ. ತಮ್ಮ ಗ್ರಾಮದ ವಿದ್ಯಾರ್ಥಿಗಳ ಕಲಿಕೆಗೆ ಯಾವುದೇ ಕೊರತೆಯಾಗದಂತೆ ನಿಗಾ ವಹಿಸಿ ಕಾಲಕಾಲಕ್ಕೆ ಸಹಕಾರ ನೀಡುತ್ತಾರೆ. ಇವರಲ್ಲಿನ ಸಾಮರಸ್ಯ ಮತ್ತು ಸಹಕಾರ ಮನೋಭಾವವು ಮಕ್ಕಳ ಮೌಲ್ಯಾಧಾರಿತ ಕಲಿಕೆಗೆ ನೆರವಾಗುತ್ತಿದೆ. ಅವರೆಲ್ಲರ ನಿರೀಕ್ಷೆಯಂತೆ ಶಿಕ್ಷಕರ ಶ್ರಮದಿಂದ ಉತ್ತಮ ಫಲಿತಾಂಶ ದೊರೆಯುವ ಭರವಸೆಯಿದೆ ಎಂದರು.
ಪ್ರತೀ ವರ್ಷವೂ ಕೂಡ ಗ್ರಾಮದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಸ್ಥಳೀಯವಾಗಿ ಹಳೆ ವಿದ್ಯಾರ್ಥಿಗಳು ರಚನೆ ಮಾಡಿಕೊಂಡಿರುವ ವಿಲೇಜ್ ಬಾಯ್ಸ್ ಆರ್ಗನೈಜೇಷನ್ ವತಿಯಿಂದ ಸಂಪೂರ್ಣ ಸಹಕಾರ ನೀಡಲಾಗುತ್ತಿದೆ. ಇಲ್ಲಿನ ವಿದ್ಯಾರ್ಥಿಗಳು ಉತ್ತಮ ವ್ಯಾಸಂಗ ಪಡೆದು ಉನ್ನತ ಮಟ್ಟದ ಹುದ್ದೆಗಳನ್ನು ಪಡೆದು ಶಾಲೆಯ ಮತ್ತು ಗ್ರಾಮದ ಕೀರ್ತಿ ಪತಾಕೆಯನ್ನು ಎಲ್ಲೆಡೆ ಪಸರಿಸಬೇಕು ಎಂಬುದೇ ನಮ್ಮೆಲ್ಲರ ಆಶಯವಾಗಿದೆ ಎಂದು ಶಾಲೆಯ ಹಳೆ ವಿದ್ಯಾರ್ಥಿ ಜಿ.ವೆಂಕಟೇಶ್ ತಮ್ಮ ಮನದಾಳದ ಅನಿಸಿಕೆ ತಿಳಿಸಿದರು.
ಗ್ರಾಮದ ಹಿರಿಯರಾದ ಧರಣೇಂದ್ರಯ್ಯ ನವರು ಧ್ವಜಾರೋಹಣ ನೆರವೇರಿಸಿದರು.ಕಾರ್ಯಕ್ರಮದಲ್ಲಿ 2023-24 ನೇ ಸಾಲಿನಲ್ಲಿ 7 ನೇ ತರಗತಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಾದ ಆರ್.ಗಗನ, ಎಂ.ಜೀವಿತಾ ಮತ್ತು ಸವಿತಾ ರವರ ಶೈಕ್ಷಣಿಕ ಪ್ರಗತಿಗೆ ಆಕರ್ಷಕ ಬಹುಮಾನ ಮತ್ತು ಪ್ರಮಾಣಪತ್ರ ನೀಡಿ ಅಭಿನಂಧಿಸಿದರು. ನಿವೃತ್ತ ಗಣಿತ ಶಿಕ್ಷಕರಾದ ಚಿಕ್ಕೇಗೌಡ್ರು ಮತ್ತು ಉಷಾರವಿ ರವರಿಗೆ ಸನ್ಮಾನ ಮಾಡಿ ಗೌರವ ಸಲ್ಲಿಸಿದರು.
ಶಾಲೆಯ ಶಿಕ್ಷಕರಾದ ಗಿರೀಶ್.ಕೆ.ಎಸ್, ಶಕುಂತಲಮ್ಮ.ಸಿ.ಜಿ, ಗಿರೀಶ್.ಟಿ.ಎಂ, ಯಶೋದಮ್ಮ.ಆರ್, ಎಸ್ ಡಿಎಂ ಸಿ ಅಧ್ಯಕ್ಷರಾದ ಶಶಿ ಬಾಗವಹಿಸಿದ್ದು, ಹಂಪಸಂದ್ರ ವಿಲೇಜ್ ಬಾಯ್ಸ್ ಆರ್ಗನೈಜೇಷನ್ ನ ಸದಸ್ಯರಾದ ದೇವರಾಜ್, ಶ್ರೀನಿವಾಸ್ ಪಂಪನಾ, ಎಚ್.ಎ.ಸೋಮಶೇಖರ್, ಎಚ್.ಜಿ.ಹರೀಶ್, ಎಚ್.ಆರ್.ಮನೋಜ್ ಕುಮಾರ್, ಕೆ.ನಾಗೇಶ್, ಎನ್.ಹೇಮಂತ್ ಕುಮಾರ್, ನವೀನ್, ಎಚ್.ಎನ್.ಆನಂದ್, ಎನ್.ಆನಂದ್, ಎಚ್.ಸಿ.ಹರ್ಷವರ್ದನ್, ಎನ್.ಚಿಕ್ಕವೀರಭದ್ರ, ಮಂಜುನಾಥ್ ನಾಯ್ಕ್, ಶ್ರೀನಿವಾಸ್, ಜಿ.ಅನಿಲ್ ಕುಮಾರ್, ರವಿನಾಯ್ಕ, ಎಚ್.ಪಿ.ಹನುಮಂತಪ್ಪ, ಜಿ.ವೆಂಕಟೇಶ್, ಶ್ರೀನಾಥ್ ಗ್ರಾಮ ಪಂಚಾಯತ್ ಸದಸ್ಯರು. ಗೋವಿಂದ ನಾಯ್ಕ ಸೇರಿದಂತೆ ಇತರರು ಉಪಸ್ಥಿತರಿದ್ದರು.