ಲಯನ್ಸ್ ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ 31 ಯುನಿಟ್ ರಕ್ತ ಸಂಗ್ರಹ.
ಗೌರಿಬಿದನೂರು : ಮಾನವನ ಬದುಕಿನಲ್ಲಿ ರಕ್ತದಾನವು ಅತ್ಯಂತ ಶ್ರೇಷ್ಠವಾಗಿದ್ದು, ಯುವಕರು ಉತ್ಸಾಹದಿಂದ ರಕ್ತದಾನ ಮಾಡಿದಲ್ಲಿ ಆಕಸ್ಮಿಕ ಅವಘಡಗಳಲ್ಲಿ ಸಾವುನೋವಿನ ನಡುವೆ ಹೋರಾಡುವವರಿಗೆ ಮತ್ತು ರಕ್ತಸ್ರಾವ ಸಮಸ್ಯೆಯಿಂದ ಬಳಲುವ ಮಹಿಳೆಯರಿಗೆ ನೆರವಾಗಲಿದೆ ಎಂದು ಜಿಲ್ಲಾ ಲಯನ್ಸ್ ಸಂಸ್ಥೆ 317 ಎಫ್ ನ ಗ್ರಾಮೀಣ ವಲಯದ ರಕ್ತದಾನ ವಿಭಾಗದ ಮುಖ್ಯಸ್ಥರು ಹಾಗೂ ಲಯನ್ಸ್ ಟ್ರಸ್ಟ್ ನ ಅಧ್ಯಕ್ಷ ಇ.ಎಸ್.ಸತೀಶ್ ಕುಮಾರ್ ತಿಳಿಸಿದರು.
ತಾಲ್ಲೂಕಿನ ನಗರಗೆರೆ ಹೋಬಳಿ ವ್ಯಾಪ್ತಿಯ ಮುದಲೋಡು ಗ್ರಾಮ ಪಂಚಾಯತಿ ಆವರಣದಲ್ಲಿ ಆಗಸ್ಟ್ 25, ಭಾನುವಾರ ದಂದು ಗೌರಿಬಿದನೂರು ಲಯನ್ಸ್ ಸಂಸ್ಥೆ ಮತ್ತು ಲಯನ್ಸ್ ಸೇವಾ ಟ್ರಸ್ಟ್, ಮುದಲೋಡು ಗ್ರಾ.ಪಂ ಕಾರ್ಯಾಲಯ, ವಂದೇ ಮಾತರಂ ರೂರಲ್ ಡೆವಲಪ್ಮೆಂಟ್ ಟ್ರಸ್ಟ್, ಶ್ರೀವಿನಾಯಕ ಮೀನುಗಾರರ ಸಹಕಾರ ಸಂಘ ಹಾಗೂ ಲಯನ್ಸ್ ರಕ್ತನಿಧಿ ಯಲಹಂಕ ರವರ ಸಹಯೋಗದಲ್ಲಿ ಆಯೋಜಿಸಿದ್ದ ‘ಸ್ವಯಂ ಪ್ರೇರಿತ ರಕ್ತದಾನ ಶಿಬಿರ’ ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಯುವಕರು ಪ್ರತೀ 3-4 ತಿಂಗಳಿಗೊಮ್ಮೆ ರಕ್ತದಾನ ಮಾಡುವುದರಿಂದ ಆರೋಗ್ಯವನ್ನು ಸದೃಢಗೊಳಿಸಿಕೊಳ್ಳಲು ಸಾಧ್ಯ. ಸ್ವಯಂಪ್ರೇರಿತ ರಕ್ತದಾನ ಶಿಬಿರವು ಪ್ರತಿಯೊಬ್ಬರ ಬದುಕಿಗೆ ಸಾರ್ಥಕತೆ ನೀಡಲಿದೆ. ಲಯನ್ಸ್ ಸಂಸ್ಥೆಯು ನಿರಂತರವಾಗಿ ಈ ಸತ್ಕಾರ್ಯದಲ್ಲಿ ಭಾಗಿಯಾಗುತ್ತಾ ತುರ್ತು ಪರಿಸ್ಥಿತಿಯಲ್ಲಿ ರಕ್ತದ ಅವಶ್ಯಕತೆ ಇರುವವರಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಲಯನ್ಸ್ ಸಂಸ್ಥೆಯ ಅಧ್ಯಕ್ಷ ಸಿ.ಎನ್.ನಂಜೇಗೌಡ ಮಾತನಾಡಿ, ಲಯನ್ಸ್ ಸಂಸ್ಥೆಯು ಸೇವಾ ಕಾರ್ಯಗಳ ಮೂಲಕ ಅಗತ್ಯವಿರುವ ಫಲಾನುಭವಿಗಳಿಗೆ ನೆರವಾಗುತ್ತಿದೆ. ಸ್ವಯಂಪ್ರೇರಿತ ರಕ್ತದಾನ ಶಿಬಿರವು ನಮ್ಮ ಸಂಸ್ಥೆಯ ಪ್ರಮುಖ ಸೇವಾ ಕಾರ್ಯವಾಗಿದ್ದು, ಗ್ರಾಮೀಣ ಪ್ರದೇಶದಲ್ಲಿನ ಯುವಕರ ಉತ್ಸಾಹದ ಮೇರೆಗೆ ಈ ಶಿಬಿರವನ್ನು ಆಯೋಜನೆ ಮಾಡಲಾಗಿದೆ. ಯುವಕರು ನೀಡುವ ಪ್ರತೀ ಹನಿಯ ರಕ್ತವು ಮತ್ತೊಂದು ಜೀವಕ್ಕೆ ಜೀವ ನೀಡುವ ಶಕ್ತಿ ಹೊಂದಿರುತ್ತದೆ ಎಂದು ಹೇಳಿದರು.
ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಆರ್.ಎನ್.ಬಾಲಕೃಷ್ಣ ಮಾತನಾಡಿ, ಗ್ರಾಮದಲ್ಲಿನ ಜನತೆಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಜೊತೆಗೆ ಪಂಚಾಯತಿ ಸಹಯೋಗದೊಂದಿಗೆ ಇಂತಹ ಸತ್ಕಾರ್ಯಗಳನ್ನು ಮಾಡಲು ಅವಕಾಶ ದೊರೆತಿರುವುದು ನಿಜಕ್ಕೂ ಅದೃಷ್ಟವಾಗಿದೆ. ಸ್ಥಳೀಯ ನಾಗರೀಕರು ಮತ್ತು ಯುವಕರ ಸಹಕಾರದಿಂದ ಮಾತ್ರ ಇಂತಹ ಜನಪರವಾದ ಕಾರ್ಯಗಳು ಯಶಸ್ವಿಯಾಗಲು ಸಾಧ್ಯವಾಗುತ್ತದೆ ಎಂದರು
ಶಿಬಿರದಲ್ಲಿ 50 ಕ್ಕೂ ಹೆಚ್ಚು ಯುವಕರು ಭಾಗವಹಿಸಿ ಸುಮಾರು 31 ಯುನಿಟ್ ರಕ್ತ ದಾನ ಮಾಡುವ ಮೂಲಕ ರಕ್ತದ ಅಗತ್ಯವಿರುವವರಿಗೆ ನೆರವಾಗಿದ್ದು, ಶಿಬಿರದಲ್ಲಿ ಸಂಗ್ರಹಣೆಯಾದ ರಕ್ತವನ್ನು ಲಯನ್ಸ್ ರಕ್ತನಿಧಿ ಯಲಹಂಕ ಗೆ ಹಸ್ತಾಂತರ ಮಾಡಲಾಯಿತು.
ಈ ವೇಳೆ ಲಯನ್ಸ್ ಟ್ರಸ್ಟ್ ನ ಕಾರ್ಯದರ್ಶಿ ಆರ್.ಜೆ.ಶ್ರೇಣಿಕ್, ಖಜಾಂಚಿ ವಿ.ರವೀಂದ್ರನಾಥ್, ಕಾರ್ಯದರ್ಶಿ ಆರ್.ಎನ್.ಬಾಲಕೃಷ್ಣ, ಖಜಾಂಚಿ ಎ.ಎಸ್.ಜಗನ್ನಾಥ್ ಆರ್ಕುಂದ, ಲಯನ್ಸ್ ಪದಾಧಿಕಾರಿಗಳಾದ ಪ್ರೊ.ಕೆ.ರಾಮಾಂಜನೇಯಲು, ಲಕ್ಕೂರ್ ಶ್ರೀಧರ್, ಲಕ್ಷ್ಮಿ, ನಾಗಾರಾಮ್, ಇಸ್ಮಾಯಿಲ್ ಜಭೀವುಲ್ಲಾ, ಗ್ರಾ.ಪಂ ಅಧ್ಯಕ್ಷರಾದ ಜಿ.ಎಸ್.ಶ್ರೀನಿವಾಸರೆಡ್ಡಿ, ವಂದೇ ಮಾತರಂ ರೂರಲ್ ಡೆವಲಪ್ಮೆಂಟ್ ಟ್ರಸ್ಟ್ ನ ಅಧ್ಯಕ್ಷರಾದ ಕೆ.ಜಿ.ಪ್ರದೀಪ್, ಶ್ರೀವಿನಾಯಕ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷರಾದ ಗಂಗಾಧರಪ್ಪ, ಉಪಾಧ್ಯಕ್ಷರಾದ ಸ್ಪಾಟಾ ನಾಗ, ಮುಖಂಡರಾದ ವಿಶ್ವನಾಥರೆಡ್ಡಿ, ಡಾ.ಮಂಜುನಾಥ್, ಶಿವರಾಜ್, ಎಂ.ಜಿ.ಗಂಗರಾಜು, ಲಕ್ಷ್ಮಿನಾರಾಯಣ, ವೆಂಕಟೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.