ಶಿಡ್ಲಘಟ್ಟದ ಸರ್ಕಾರಿ ಶಾಲಾ – ಕಾಲೇಜು, ವಿದ್ಯಾರ್ಥಿನಿಲಯಗಳಿಗೆ ಬೇಟಿ ಪರಿಶೀಲನೆ.
ಚಿಕ್ಕಬಳ್ಳಾಪುರ: ರೈತರಿಗೆ ಬೆಳೆ ವಿಮೆಯ ಅನುಕೂಲವನ್ನು ತಿಳಿಸಿ ಕೊಟ್ಟು ಹೆಚ್ಚು ರೈತರನ್ನು ಈ ಯೋಜನೆಯಡಿ ನೋಂದಾಯಿಸಲು ಪ್ರೇರೆಪಿಸುವಂತೆ ಸರ್ಕಾರದ ಕಾರ್ಯದರ್ಶಿಗಳು ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಡಾ. ಎನ್. ಮಂಜುಳ ರವರು ಕೃಷಿ ಮತ್ತು ತೋಟಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಂಗಳವಾರ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ನ ಸರ್.ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
2023-24ನೇ ಸಾಲಿನಲ್ಲಿ ಬೆಳೆ ವಿಮೆ ಮಾಡಿಸಿಕೊಂಡಿದ್ದ ಸಂತ್ರಸ್ತ ರೈತರ ಖಾತೆಗಳಿಗೆ ರೂ. 4442.46 ಲಕ್ಷ ವಿಮಾ ಮೊತ್ತ ಜಮೆ ಆಗಿತ್ತು. 2024-25ನೇ ಸಾಲಿನಲ್ಲಿ 64162 ರೈತರು ಬೆಳೆ ವಿಮೆಗೆ ಜಿಲ್ಲೆಯಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಪ್ರಸ್ತುತ ಬೆಳೆ ವಿಮೆಗೆ ಕಾಲಾವಕಾಶವಿರುವ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಬೆಳೆ ವಿಮೆ ಮಾಡಿಸುವಂತೆ ಉಸ್ತುವಾರಿ ಕಾರ್ಯದರ್ಶಿಗಳು ರೈತರಲ್ಲಿ ಈ ವೇಳೆ ಮನವಿ ಮಾಡಿದರು.
ಈ ವರ್ಷ ಉತ್ತಮವಾಗಿ ಮಳೆಯಾಗಿದೆ, ಜೂನ್ ಮಾಹೆಯಿಂದ ಅಕ್ಟೋಬರ್ ಮಾಹೆಯ ವರೆಗೆ ಜಿಲ್ಲೆಗೆ 145 ಮಿ.ಮೀ ವಾಡಿಕೆ ಮಳೆ ಇದ್ದು, ಪ್ರಸ್ತುತ 208 ಮಿ.ಮೀ ಮಳೆಯಾಗಿ ಶೇ 44 ರಷ್ಟು ಹೆಚ್ಚುವರಿಯಾಗಿ ಮಳೆಯಾಗಿರುತ್ತದೆ. ಮಳೆ ಪ್ರಮಾಣ ಹೆಚ್ಚಾಗಿದ್ದರೂ ಕೂಡ ಜಿಲ್ಲೆಯ 23 ಗ್ರಾಮಗಳಲ್ಲಿ, 26 ವಾರ್ಡ್ ಗಳಲ್ಲಿ ಪ್ರಸ್ತುತ ಕುಡಿಯುವ ನೀರಿನ ಕೊರತೆ ಇದ್ದು, ಖಾಸಗಿ ಕೊಳವೆ ಬಾವಿ ಮಾಲಿಕರಿಂದ ನೀರನ್ನು ಪಡೆದು ಪೂರೈಸಲಾಗುತ್ತಿದೆ. ಮುಂದಿನ 33 ವಾರಗಳಿಗೆ ಆಗುವಷ್ಟು ಜಾನುವಾರು ಮೇವು ಜಿಲ್ಲೆಯಲ್ಲಿ ಲಭ್ಯವಿರುತ್ತದೆ. ಪ್ರಸ್ತುತ ರೈತರ ಬಳಿ 420793 ಮೆ.ಟನ್ ಮೇವು ಲಭ್ಯವಿದೆ ಎಂದು ತಿಳಿಸಿದರು.
ಈ ವರ್ಷ ಅಧಿಕ ಮಳೆಗೆ 43 ಮನೆಗಳು ಪೂರ್ಣವಾಗಿ ಹಾನಿಗೆ ಒಳಗಾಗಿದ್ದು, ಈ ಪೈಕಿ 38 ಸಂತ್ರಸ್ತರಿಗೆ 45.6 ಲಕ್ಷ ಪರಿಹಾರವನ್ನು ನೀಡಲಾಗಿದೆ. 92 ಮನೆಗಳು ಭಾಗಶಃ ಹಾನಿಯಾಗಿದ್ದು, ಈ ಪೈಕಿ 87 ಸಂತ್ರಸ್ತರಿಗೆ 5.6 ಲಕ್ಷ ಪರಿಹಾರವನ್ನು ಪಾವತಿಸಲಾಗಿದೆ. 31.46 ಹೆಕ್ಟೇರ್ ಪ್ರದೇಶದ ಕೃಷಿ ಬೆಳೆಗಳು ಹಾಗೂ 73.9 ಹೆಕ್ಟೇರ್ ಪ್ರದೇಶದ ತೋಟಗಾರಿಕಾ ಬೆಳೆಗಳು ಮಳೆ ಹಾನಿಗೆ ಒಳಗಾಗಿದ್ದು, 64 ವಿದ್ಯುತ್ ಕಂಬಗಳು, 7 ಪರಿವರ್ತಕ ಸ್ಥಾವರಗಳು ಮಳೆ ಹಾನಿಗೆ ಹಾಳಾಗಿವೆ.
ಜಲ ಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಯಲ್ಲಿ 1640 ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಈ ಪೈಕಿ 91 ಕಾಮಗಾರಿಗಳು ಪೂರ್ಣಗೊಂಡಿವೆ. ಉಳಿಕೆ ಕಾಮಗಾರಿಗಳು ಪ್ರಗತಿಯಲ್ಲಿವೆ. ಮುಂಬರುವ ದಿನಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ತಲೆದೋರಬಹುದಾದ 17 ಗ್ರಾಮಗಳ ಪೈಕಿ 13 ಗ್ರಾಮಗಳಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ನೀರು ಪೂರೈಸಲು ಕ್ರಮವಹಿಸಲಾಗುವುದು. ಉಳಿದ ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿಗಳ ಮಾಲಿಕರೋಂದಿಗೆ ಒಪ್ಪಂದದ ಮೇರೆಗೆ ನೀರು ಪಡೆದು ಪೂರೈಸಲಾಗುವುದು ಎಂದು ತಿಳಿಸಿದರು.
ಶೇ. 94.24 ರಷ್ಟು ಬಿತ್ತನೆ ಕಾರ್ಯ ಪೂರ್ಣ
ಮುಂಗಾರು ಹಂಗಾಮಿನಲ್ಲಿ 12,817 ಹೆಕ್ಟೇರ್ ಪ್ರದೇಶಗಳಲ್ಲಿ ಕೃಷಿ ಬೆಳೆಗಳ ಬಿತ್ತನೆಯ ಗುರಿ ಹೊಂದಲಾಗಿದ್ದು, ಈ ವರೆಗೆ 1,20,621 ಹೆಕ್ಟೇರ್ ಪ್ರದೇಶಗಳಲ್ಲಿ ಬಿತ್ತನೆ ಕಾರ್ಯ ಆಗಿದ್ದು, ಶೇ. 94.24 ರಷ್ಟು ಬಿತ್ತನೆ ಕಾರ್ಯವಾಗಿರುತ್ತದೆ. ಬಿತ್ತನೆ ಕಾರ್ಯಕ್ಕೆ ಪೂರಕವಾಗಿ 14,826 ಮೆಟ್ರಿಕ್ ಟನ್ ರಸಗೊಬ್ಬರವನ್ನು ಸಮರ್ಪಕವಾಗಿ ಸರಬರಾಜು ಮಾಡಲಾಗಿದೆ. ಪ್ರಸ್ತುತ 12,569.21 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಲಭ್ಯವಿದೆ ಎಂದು ತಿಳಿಸಿದರು.
ಶೇ. 99.17 ರಷ್ಟು ಬೆಳೆ ಸಮೀಕ್ಷೆ
ಈ ಬಾರಿಯ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಯ ಶೇ. 99.17 ರಷ್ಟು ಪ್ರಗತಿ ಸಾಧಿಸಲಾಗಿದೆ. ಈ ಕಾರ್ಯಕ್ಕಾಗಿ ಜಿಲ್ಲೆಯಲ್ಲಿ 672 ಜನರನ್ನು ನಿಯೋಜಿಸಿ 5,99,849 ರೈತರ ತಾಕುಗಳ ವಿವರವನ್ನು ಬೆಳೆ ಸಮೀಕ್ಷೆ ತಂತ್ರಾಂಶಕ್ಕೆ ನಮೂದಿಸಲಾಗಿದೆ. 1514 ತಾಕುಗಳ ರೈತರು ತಮ್ಮ ಮೊಬೈಲ್ ಮೂಲಕವೇ ವಿವರವನ್ನು ತಂತ್ರಾಂಶದಲ್ಲಿ ದಾಖಲಿಸಿ ಬೆಳೆ ಸಮೀಕ್ಷೆಯನ್ನು ಕೈಗೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಕಾಶ್ ಜಿ.ಟಿ ನಿಟ್ಟಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ, ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.