Monday, December 23, 2024
Homeಜಿಲ್ಲೆಕನ್ನಡ ರಾಜ್ಯೋತ್ಸವ ಆಚರಣೆಯ ಸಿದ್ಧತೆಗೆ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಸೂಚನೆ.

ಕನ್ನಡ ರಾಜ್ಯೋತ್ಸವ ಆಚರಣೆಯ ಸಿದ್ಧತೆಗೆ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಸೂಚನೆ.

ಚಿಕ್ಕಬಳ್ಳಾಪುರ : ಈ ಬಾರಿಯ ನವೆಂಬರ್ 1 ರಂದು ನಡೆಯುವ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ನಗರದ ಸರ್.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಸಂಭ್ರಮ ಸಡಗರದೊಂದಿಗೆ ರಾಷ್ಟ್ರೀಯ ಹಬ್ಬಗಳ ಮಾದರಿಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ತಿಳಿಸಿದರು.

ಅವರು ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ದಿನಾಚರಣೆಯ ಕುರಿತು ಪೂರ್ವಭಾವಿ ಸಿದ್ದಾತ ಸಭೆಯ ಅಧ್ಯಕ್ಷತೆ ವಹಿಸಿ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು, ಸಾಹಿತಿಗಳ ಸಲಹೆ ಸೂಚನೆಗಳನ್ನು ಆಲಿಸಿ ಮಾತನಾಡಿದರು.

ಈ ಬಾರಿ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲು ನಿರ್ಧರಿಸಲಾಗಿದ್ದು, ಅಂದು ವೇದಿಕೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ, ನಾಡಗೀತೆ, ವಿದ್ಯಾರ್ಥಿಗಳಿಂದ ಸಮೂಹ ಗೀತ ಗಾಯನ ಮತ್ತು ನೃತ್ಯ, ಗೌರವ ವಂದನೆ, ಸಾಧಕರಿಗೆ ಸನ್ಮಾನ, ಪೊಲೀಸ್ ಕವಾಯತು ಕಾರ್ಯಕ್ರಮಗಳನ್ನು ಎಂದಿನಂತೆಯೇ ಆಯೋಜಿಸಲಾಗುವುದು. ಅಲ್ಲದೆ ನಗರದ ಉಪವಿಭಾಗಾಧಿಕಾರಿ ಕಚೇರಿಯಿಂದ ಬಿ.ಬಿ.ರಸ್ತೆಯ ಮೂಲಕ ಕ್ರೀಡಾಂಗಣದವರೆಗೆ ಸ್ಥಬ್ದ ಚಿತ್ರಗಳು ಹಾಗೂ ವಿವಿಧ ಕಲಾ ತಂಡಗಳೊಂದಿಗೆ ಅದ್ಧೂರಿ ಮೆರವಣಿಗೆ ನಡೆಸಲಾಗುವುದು. ಸ್ಥಳೀಯ ಸಾಹಿತಿಗಳನ್ನು ಒಳಗೊಂಡಂತೆ ಪ್ರಮುಖ ಕನ್ನಡ ಸಾಹಿತಿಗಳ ಛಾಯಾಚಿತ್ರಗಳನ್ನು ಹಾಗೂ ಅವರ ಸಂದೇಶಗಳ ಫಲಕಗಳನ್ನು (ಪ್ಲೇಕ್ಸ್) ನಗರದ ಪ್ರಮುಖ ವೃತ್ತಗಳಲ್ಲಿ ಅಳವಡಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ವೇದಿಕೆ ಸಿದ್ಧತೆ, ಅಲಂಕಾರ, ಸರ್ಕಾರಿ ಕಚೇರಿಗಳಿಗೆ ದೀಪಾಲಂಕಾರ, ಆಸನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಆಹ್ವಾನ ಪತ್ರಿಕೆಗಳ ಮುದ್ರಣ ಮತ್ತು ವಿತರಣೆ, ಆಂಬುಲೆನ್ಸ್ ವ್ಯವಸ್ಥೆ, ಕಾರ್ಯಕ್ರಮ ನಿರ್ವಹಣೆ, ನಿರೂಪಣೆ, ಕ್ರೀಡಾಂಗಣ ಸ್ವಚ್ಛತೆ ಇನ್ನಿತರೆ ಸಿದ್ಧತಾ ಕಾರ್ಯಗಳನ್ನು ಸಂಬಂಧ ಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಕಾರ್ಯ ಹಂಚಿಕೆ ಮಾಡಿ ಈ ಎಲ್ಲಾ ಕಾರ್ಯಗಳನ್ನು ಸಮರ್ಪಕವಾಗಿ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ರಾಜ್ಯೋತ್ಸವದ ಅಂಗವಾಗಿ ಕನ್ನಡ ಸಾಹಿತ್ಯ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಜಿಲ್ಲೆಯ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಆದ್ದರಿಂದ ಕನ್ನಡ ಸಾಹಿತ್ಯ ಕಲೆ ಕ್ಷೇತ್ರಗಳಲ್ಲಿ ಹಾಗೂ ಕನ್ನಡಪರ ಚಟುವಟಿಕೆಗಳಲ್ಲಿ ಸಾಧನೆ ಗೈದಿರುವ ಸಾಧಕರು ಉಪವಿಭಾಗಾಧಿಕಾರಿ ಕಚೇರಿಗೆ ಅರ್ಜಿಯನ್ನು ಸಹ ಸಲ್ಲಿಸಬಹುದು. ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯ ಸಮಿತಿಯು ನಿರ್ಧರಿಸುವ ಸಾಧಕರಿಗೆ ಸನ್ಮಾನ ಮಾಡಲಾಗುವುದು. ಸರ್ಕಾರಿ ಕಚೇರಿಗಳು ಸೇರಿದಂತೆ, ಖಾಸಗಿ ಶಾಲಾ ಕಾಲೇಜುಗಳಲ್ಲಿ ಕನ್ನಡ ರಾಜ್ಯೋತ್ಸವನ್ನು ಆಚರಿಸುವಂತೆ ಸಂಬಂಧ ಪಟ್ಟ ಇಲಾಖೆಯ ಮುಖ್ಯಸ್ಥರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ವಿವಿಧ ಕನ್ನಡಪರ ಸಂಘಟನೆಗಳ ಮುಖ್ಯಸ್ಥರು ಹಾಗೂ ಪದಾಧಿಕಾರಿಗಳು ಕನ್ನಡ ರಾಜ್ಯೋತ್ಸವ ಆಚರಣೆಯ ಕುರಿತು ಸಲಹೆಗಳನ್ನು ಸಭೆಗೆ ನೀಡಿದರು.

ನವೆಂಬರ್ 01 ರಂದು ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ಕನ್ನಡಪರ ಸಂಘಟನೆಗಳ ಮುಖ್ಯಸ್ಥರು ಹಾಗೂ ಪದಾಧಿಕಾರಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಜಿಲ್ಲಾಧಿಕಾರಿಗಳು ಈ ವೇಳೆ ಆಹ್ವಾನ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಎನ್.ಭಾಸ್ಕರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೋಡಿರಂಗಪ್ಪ, ನಿಕಟಪೂರ್ವ ಅಧ್ಯಕ್ಷ ಕೈವಾರ ಶ್ರೀನಿವಾಸ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ. ರವಿಕುಮಾರ್, ಸಾಹಿತಿ ಗೋಪಾಲಗೌಡ ಕಲ್ವಮಂಜಲಿ, ಯಲುವಳ್ಳಿ ಸೊಣ್ಣೇಗೌಡ, ಮಂಚನಬಲೆ ಶ್ರೀನಿವಾಸ್, ಕನ್ನಡ ಪರ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಸರಸಮ್ಮ, ವೆಂಕಟಾಚಲಪತಿ, ರವಿಕುಮಾರ್, ಉಷಾಶ್ರೀನಿವಾಸ್, ಕಸಾಪ ಸದಸ್ಯರು, ವಿವಿಧ ಕನ್ನಡಪರ ಸಂಘಟನೆಗಳ ಮುಖ್ಯಸ್ಥರು, ಸದಸ್ಯರು, ಪದಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.

Social Media Links
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!