ಮಳೆಹಾನಿ ತ್ವರಿತ ಪರಿಹಾರ ಕ್ರಮಕ್ಕೆ ಅಧಿಕಾರಿಗಳಿಗೆ ಡೀಸಿ ಸೂಚನೆ.
ಚಿಕ್ಕಬಳ್ಳಾಪುರ : ಕಳೆದ ವಾರದಿಂದ ಜಿಲ್ಲೆಯಾದ್ಯಂತ ಮಳೆ ಹೆಚ್ಚಾಗುತ್ತಿದ್ದು ಜಿಲ್ಲೆಯ ಕೆರೆ, ಕುಂಟೆಗಳು, ಜಲಾಶಯಗಳು ತುಂಬಿ ಕೊಡಿ ಹೋಗುತ್ತಿವೆ. ನೀರಿನ ತಾಣಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಂಡು ಅವಗಡಗಳನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.
ಮಂಗಳವಾರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ “ವಿಪತ್ತು ನಿರ್ವಹಣಾ ಪ್ರಾಧಿಕಾರದ ಜಿಲ್ಲಾ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ” ಮಳೆ ಹಾನಿಯ ವಿವರವನ್ನು ಪಡೆದು ನಂತರ ಮಾತನಾಡಿದರು.
ಕಳೆದ 7 ದಿನಗಳಿಂದ ಜಿಲ್ಲೆಯಲ್ಲಿ 87 ಮಿ.ಮೀಟರ್ ಮಳೆಯಾಗಿದೆ. ವಾಡಿಕೆ ಪ್ರಕಾರ ಕಳೆದ 7 ದಿನಗಳಲ್ಲಿ 25 ಮಿ.ಮೀಟರ್ ಮಳೆ ಆಗಬೇಕಾಗಿತ್ತು. ಕಳೆದ ರಾತ್ರಿ ಬಿದ್ದ ಮಳೆಗೆ ಚಿಕ್ಕಬಳ್ಳಾಪುರ ತಾಲ್ಲೂಕಿನ ಜಕ್ಕಲಮಡಗು, ಗುಡಿಬಂಡೆಯ ಅಮಾನಿ ಭೈರಸಾಗರ ಕೆರೆ ಕೊಡಿ ಹೋಗುತ್ತಿವೆ. ಬಾಗೇಪಲ್ಲಿಯ ಚಿತ್ರಾವತಿ ಜಲಾಶಯ ಬಹುತೇಕ ಪೂರ್ಣಗೊಂಡಿದ್ದು, ಒಂದೆರಡು ದಿನಗಳಲ್ಲಿ ಕೊಡಿ ಹೋಗುವ ಸಾಧ್ಯತೆ ಇದೆ. ಮುಂದಿನ ಒಂದೆರಡು ದಿನಗಳಲ್ಲಿ ಮಳೆ ಪ್ರಮಾಣ ಜಾಸ್ತಿ ಆಗಲಿದೆ. ಉತ್ತರ ಪಿನಾಕಿನಿ ನದಿಯು ಉಕ್ಕಿ ಹರಿಯುತ್ತಿದೆ. ಬಹುತೇಕ ಜಿಲ್ಲೆಯ ಕೆರೆಗಳು, ಕುಂಟೆಗಳು ತುಂಬಿ ಹರಿಯುತ್ತಿವೆ. ನೀರು ಹರಿಯುವ ತಾಣಗಳಲ್ಲಿ, ಕೋಡಿ ಪ್ರದೇಶಗಳಲ್ಲಿ, ನದಿ ಪಾತ್ರ ಪ್ರದೇಶಗಳಲ್ಲಿ ಸಾರ್ವಜನಿಕರು, ಮಕ್ಕಳು ಈಜಾಡಲು, ಆಟವಾಡಲು ಹಾಗೂ ಮೀನು ಹಿಡಿಯಲು ಮುಂದಾಗುವ ಸಾದ್ಯತೆಗಳಿರುತ್ತವೆ. ಅಂತಹ ಕಡೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬೇಕು. ತಮ್ಮ ವ್ಯಾಪ್ತಿಯಲ್ಲಿ ಎಲ್ಲೆಲ್ಲಿ ಈ ರೀತಿ ಆಗುವ ಸಾಧ್ಯತೆ ಇದೆ ಮುಂಜಾಗ್ರತೆಯಿಂದ ಸ್ಥಳಗಳನ್ನು ಗುರ್ತಿಸಿ ಅಗತ್ಯ ಕ್ರಮಗಳನ್ನು ತಹಸಿಲ್ದಾರರು, ತಾಲ್ಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು. ಜಿಲ್ಲಾಡಳಿತದ ಎಲ್ಲ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ತಮ್ಮ ಕಾರ್ಯ ಕೇಂದ್ರ ಸ್ಥಳಗಳಲ್ಲಿ ಇದ್ದು 24X7 ಕಾರ್ಯ ನಿರ್ವಹಿಸಬೇಕು. ಮಳೆ ಹಾನಿ ಅವಗಡಗಳನ್ನು ತಡೆಗಟ್ಟಲು ಸಹಾಯವಾಣಿ ಕೇಂದ್ರಗಳನ್ನು ತೆರೆದು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ತ್ವರಿತವಾಗಿ ಪರಿಹರಿಸಬೇಕು. ಮಳೆಯಿಂದ ಹಾನಿಗೊಳಗಾದ ಮನೆಗಳ ಮಾಲಿಕರಿಗೆ ಹಾಗೂ ಬೆಳೆ ಹಾನಿಗೆ ಒಳಗಾದ ಸಂತ್ರಸ್ತ ರೈತರಿಗೆ ಪರಿಹಾರ ನೀಡಲು ತ್ವರಿತ ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.
ಅಕ್ಟೋಬರ್ 1 ರಿಂದ ಈ ವರೆಗೆ ಗೌರಿಬಿದನೂರು ತಾಲ್ಲೂಕಿನಲ್ಲಿ 15 ಮನೆಗಳಿಗೆ ಹಾನಿಯಾಗಿದ್ದು, 5 ಮನೆಗಳಿಗೆ ಪರಿಹಾರ ನೀಡಲಾಗಿದೆ. ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ 10 ಮನೆಗಳು ಹಾನಿಯಾಗಿದ್ದು, 5 ಮನೆಗಳ ಸಂತ್ರಸ್ತರಿಗೆ ಪರಿಹಾರ ನೀಡಲಾಗಿದೆ. ಬಾಗೇಪಲ್ಲಿ ತಾಲ್ಲೂಕಿನಲ್ಲಿ 8 ಮನೆಗಳಿಗೆ ಹಾನಿಯಾಗಿದ್ದು, 5 ಸಂತ್ರಸ್ತರಿಗೆ ಪರಿಹಾರ ನೀಡಲಾಗಿದೆ. ಚಿಂತಾಮಣಿ ತಾಲ್ಲೂಕಿನಲ್ಲಿ 04, ಚೇಳೂರು ತಾಲ್ಲೂಕಿನಲ್ಲಿ 04, ಶಿಡ್ಲಘಟ್ಟ ತಾಲ್ಲೂಕಿನಲ್ಲಿ 04 ಮನೆಗಳು ಹಾನಿಯಾಗಿದೆ. ಗುಡಿಬಂಡೆ ತಾಲ್ಲೂಕಿನಲ್ಲಿ 12 ಮನೆಗಳು ಹಾನಿಯಾಗಿದ್ದು, 7 ಸಂತ್ರಸ್ತರಿಗೆ ಪರಿಹಾರ ನೀಡಲಾಗಿದೆ.ನೆನ್ನೆ ಬಿದ್ದ ಮಳೆ ಹಾನಿ ಮತ್ತು ಮುಂದೆ ಬಿಳುವ ಮಳೆಯ ಹಾನಿ ಬಗ್ಗೆ ತ್ವರಿತವಾಗಿ ಕಲೋಚಿತವಾಗಿ ಪರಿಶೀಲಿಸಿ ತುರ್ತು ಪರಿಹಾರವನ್ನು ನೀಡುವ ಕೆಲಸ ತ್ವರಿತವಾಗಿ ಆಗಬೇಕು. ಕಲ್ಲು ಮತ್ತು ಮಣ್ಣಿನಿಂದ ನಿರ್ಮಿಸಿರುವ ಕಚ್ಚಾ ಮನೆಗಳನ್ನು ಗುರ್ತಿಸಿ ಅಂತಹ ಮನೆಗಳ ಜನರನ್ನು ಸರ್ಕಾರದ ಸಮುದಾಯ ಭವನಗಳ ಕಟ್ಟಡಗಳಿಗೆ ಅಥವಾ ಇತರ ಕಟ್ಟಡಗಳಿಗೆ ತಾತ್ಕಲಿಕವಾಗಿ ಸ್ಥಳಾಂತರಿಸಿ ಅಗತ್ಯ ಪುನರ್ವಸತಿ ಕ್ರಮಗಳನ್ನು ಕೈಗೊಳ್ಳಬೇಕು. ಸೋರುತ್ತಿರುವ ಶಾಲೆಗಳು, ಕಾಲೇಜುಗಳು, ಅಂಗನವಾಡಿಗಳಲ್ಲಿ ಪಾಠ, ಪ್ರವಚನಗಳನ್ನು ನಡೆಸಬಾರದು,ಮೇಲಾಧಿಕಾರಿಗಳಿಗೆ ಈ ಕುರಿತು ವರದಿ ಮಾಡಬೇಕು. ಪೋಷಕರು, ಶಿಕ್ಷಕರು ಮಕ್ಕಳಿಗೆ ಅರಿವು ಮೂಡಿಸಿ ನೀರು ಹರಿಯುವ ತಾಣಗಳಿಗೆ ಆಟವಾಡಲು ಹೋಗದಂತೆ ತಿಳಿಸಬೇಕು ಜೊತೆಗೆ ಈ ಬಗ್ಗೆ ನಿಗಾ ಇಡಬೇಕು ಎಂದು ತಿಳಿಸಿದರು.
ಅಕ್ಟೊಬರ್ 1ರಿಂದ ಈ ವರಗೆ ಮಳೆಯಿಂದ ಯಾವುದೇ ರೀತಿಯ ಜನರ ಪ್ರಾಣ ಹಾನಿ ಆಗಿಲ್ಲ.3 ಜಾನುವಾರುಗಳ ಪ್ರಾಣಹಾನಿಯಾಗಿದ್ದು ಕೊಡಲೆ ಆಜಾನುವಾರು ಸಂತ್ರಸ್ತರಿಗೆ ಪರಿಹಾರ ಒದಗಿಸಬೇಕು. ಸಾರ್ವಜನಿಕರು ಸುರಕ್ಷತಾ ಕ್ರಮಗಳೊಂದಿಗೆ ಸುರಕ್ಷಿತ ಸ್ಥಳಗಳಲ್ಲಿರಬೇಕು. ಮಳೆ ಹಾನಿಗೆ ಒಳಗಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಈ ವರ್ಷ ಜಿಲ್ಲೆಯಲ್ಲಿ 361 ಡೆಂಗ್ಯೊ ಪ್ರಕರಣಗಳು ದಾಖಲೆಯಾಗಿವೆ. ಕಳೆದ ತಿಂಗಳಲ್ಲಿ ಪ್ರಕರಣಗಳು ಇಳಿಮುಖವಾಗಿದ್ದರೂ ಕೂಡ ದಿನ ನಿತ್ಯ ಮಳೆ ಸುರಿಯುತ್ತಿರುವುದರಿಂದ ಮತ್ತೆ ಸೊಳ್ಳೆಗಳ ಉತ್ಪತ್ತಿಯು ಹೆಚ್ಚಾಗಿ ಡೆಂಗ್ಯೊ ಉಲ್ಬಣವಾಗುವ ಸಾದ್ಯತೆ ಇದೆ. ಸಾರ್ವಜನಿಕರು ಎಚ್ಚರವಹಿಸಬೇಕು ತಮ್ಮ ಸುತ್ತ ಮುತ್ತಲ ಪ್ರದೇಶದಲ್ಲಿ ಅನುಪಯುಕ್ತ ವಸ್ತುಗಳಲ್ಲಿ, ಗುಂಡಿಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸ್ವಚ್ಚತೆಗೆ ಆದ್ಯತೆ ನೀಡಬೇಕು. ಸೊಳ್ಳೆ ನಿರೋಧಕಗಳನ್ನು ಉಪಯೋಗಿಸಬೇಕು. ಮಳೆಯಿಂದಾಗಿ ಜಲಜನ್ಯ ಮತ್ತು ಕೀಟ ಜನ್ಯ ರೋಗಗಳು ಹೆಚ್ಚಳವಾಗುವ ಸಾಧ್ಯತೆ ಇದೆ. ಆದ್ದರಿಂದ ನೀರನ್ನು ಕುದಿಸಿ, ಆರಿಸಿ ಕುಡಿಯುವುದನ್ನು ಜನರು ಪಾಲಿಸಬೇಕು. ಒಟ್ಟಾರೆ ಯಾವುದೇ ಸಾಂಕ್ರಾಮಿಕ ರೋಗ ರುಜಿನಗಳಿಗೆ ತುತ್ತಾಗದಂತೆ ಹಾಗೂ ಮಳೆ ಹಾನಿಗೆ ಒಳಗಾಗದಂತೆ ಸುರಕ್ಷತಾ ಕ್ರಮಗಳನ್ನು ಪಾಲಿಸಲು ಮನವಿ ಮಾಡಿದರು.
42.88 ಹೆ.ಪ್ರದೇಶಗಳ ಬೆಳೆ ನಷ್ಟ : ಮಳೆ ಹಾನಿಯಿಂದ ಅಕ್ಟೋಬರ್ 1 ರಿಂದ 21 ರವಗೆ 42.88 ಹೆಕ್ಟೇರ್ ಪ್ರದೇಶಗಳ ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದೆ. ನೆನ್ನೆ ಬಿದ್ದ ಬಾರಿ ಮಳೆಗೆ ಹಾನಿಯಾಗಿರುವ ಬೆಳೆ ಮಾಹಿತಿಯನ್ನು ತ್ವರಿತವಾಗಿ ಕೃಷಿ, ತೋಟಗಾರಿಕೆ, ಕಂದಾಯ ಹಾಗೂ ಇತರ ಇಲಾಖೆಗಳ ಸಹಯೋಗದಲ್ಲಿ ಜಂಟಿ ಸಮೀಕ್ಷೆ ಮಾಡಿ ಪರಿಹಾರ ತಂತ್ರಾಂಶದಲ್ಲಿ ಮಾಹಿತಿ ನಮೂಧಿಸುವ ಮೂಲಕ ಪರಿಹಾರ ಕ್ರಮಕ್ಕೆ ತುರ್ತಾಗಿ ಸ್ಪಂದಿಸಲು ಸಂಬಂದಪಟ್ಟ ಇಲಾಖೆಗಳ ಮುಖ್ಯಸ್ಥರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕಾಧಿಕಾರಿ ಪ್ರಕಾಶ್ ಜಿ.ಟಿ ನಿಟ್ಟಾಲಿ, ಅಪರ ಜಿಲ್ಲಾಧಿಕಾರಿ ಡಾ. ಎನ್ ಭಾಸ್ಕರ್, ಉಪವಿಭಾಗಾಧಿಕಾರಿ ಡಿ.ಎಚ್. ಅಶ್ವಿನ್, ಜಂಟಿ ಕೃಷಿ ನಿರ್ದೇಶಕಿ ಜಾವೀದಾ ನಸೀಮಾ ಖಾನಂ, ಎಲ್ಲಾ ತಹಸೀಲ್ದಾರರು, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.