ಅವಧಿ ಮುಗಿದ ಆಹಾರ ಪದಾರ್ಥಗಳು ಮಾರಾಟ.! ತರಾಟೆ ತೆಗೆದುಕೊಂಡ ಆಯೋಗ.!
ಚಿಕ್ಕಬಳ್ಳಾಪುರ : ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ ಕಳೆದ ವರ್ಷದ ನವೆಂಬರ್ ಮಾಹೇಯಲ್ಲಿ 8054 ಪ್ರಕರಣಗಳು ಬಾಕಿ ಇದ್ದವು , ಅವುಗಳ ಪೈಕಿ 5,456 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ, ಪ್ರಸ್ತುತ 2,598 ಪ್ರಕರಣಗಳು ವಿಲೇವಾರಿಗೆ ಬಾಕಿ ಇವೆ ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷರಾದ ಟಿ. ಶ್ಯಾಮ್ ಭಟ್ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ನ ಹೆಚ್ ನರಸಿಂಹಯ್ಯ ಸಭಾಂಗಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗಿ ಪೊಲೀಸ್ ಇಲಾಖೆಗೆ ಸಂಬಂಧಿಸಿದ ಪ್ರಕರಣಗಳು ದಾಖಲಾಗಿವೆ. ನಂತರದ ಸ್ಥಾನದಲ್ಲಿ ಕಂದಾಯ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳಿಗೆ ಸಂಬಂಧಿಸಿದ ಪ್ರಕರಣಗಳು ಇವೆ. ಅನ್ಯಾಯಕ್ಕೆ ಒಳಗಾದವರು ಅರ್ಜಿಗಳನ್ನು ರಾಜ್ಯದ ಮೂಲೆ ಮೂಲೆಗಳಿಂದ ಬೆಂಗಳೂರಿಗೆ ಬಂದು ದೂರು ನೀಡಿ ಇತ್ಯರ್ಥಪಡಿಸಿಕೊಳ್ಳಲು ಕಷ್ಟ ಸಾಧ್ಯವಾಗುತ್ತಿದ್ದನ್ನು ಅರಿತ ಆಯೋಗವು ಕಳೆದ ಎಂಟು ತಿಂಗಳಿನಿಂದ 14 ಜಿಲ್ಲೆಗಳಿಗೆ ಭೇಟಿ ನೀಡಿ ಜಿಲ್ಲೆಗೆ ಸಂಬಂಧ ಪಟ್ಟ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳ ಅರ್ಜಿಗಳನ್ನು ಜಿಲ್ಲಾ ಕೇಂದ್ರಗಳಲ್ಲೇ ಬಗೆಹರಿಸುವ ಪ್ರಯತ್ನವನ್ನು ಮಾಡುತ್ತಿದೆ ಅಲ್ಲದೆ ಹೊಸ ದೂರು ಮತ್ತು ಅಹವಾಲು ಅರ್ಜಿಗಳನ್ನು ಸಹ ಸ್ವೀಕರಿಸಿ ವಿಲೆಗೆ ಅಗತ್ಯ ಕ್ರಮ ವಹಿಸುತ್ತಿದ್ದೆವೆ ಜೊತೆಗೆ ಸರ್ಕಾರಿ ಆಡಳಿತ ವ್ಯವಸ್ಥೆಗಳ ಮೂಲಕ ಸಾರ್ವಜನಿಕ ಸೇವೆ ನೀಡುವ ಸರ್ಕಾರಿ ಸಂಸ್ಥೆಗಳಿಗೆ ಹಾಗೂ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಅಲ್ಲಿ ದೊರಕುವ ಸರ್ಕಾರಿ ಸೌಲಭ್ಯಗಳ ಬಗ್ಗೆ ಹಾಗೂ ಕುಂದು ಕೊರತೆಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ. ಸರ್ಕಾರಿ ಸಂಸ್ಥೆಗಳಿಂದ ಅಥವಾ ಅಧಿಕಾರಿ/ಸಿಬ್ಬಂದಿಯ ಲೋಪಗಳಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗಿದ್ದಲ್ಲಿ ಸಂಬಂಧಪಟ್ಟವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುತ್ತಿದೆ ಹಾಗೆಯೇ ನೊಂದವರಿಗೆ ಪರಿಹಾರ ನೀಡಲು ಸಹ ತಿಳಿಸಲಾಗಿದೆ ಎಂದರು.
ಸಾಮಾಜಿಕ ಬಹಿಷ್ಕಾರ, ಭ್ರೂಣ ಹತ್ಯೆ ಹಾಗೂ ಇನ್ನಿತರ ವಿಷಯಗಳಿಗೆ ಸಂಬಂಧಪಟ್ಟಂತೆ ಮಾಧ್ಯಮಗಳಲ್ಲಿ ವರದಿಯಾದ ಆಧಾರದ ಮೇಲೆ ಆಯೋಗವು ಪ್ರಕರಣಗಳನ್ನು ಸ್ವಯಂ ದಾಖಲಿಸಿಕೊಂಡು ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ಮಾನವ ಹಕ್ಕುಗಳ ಉಲ್ಲಂಘನೆಗೆ ಒಳಗಾದವರು ಅಥವಾ ಅವರ ಪರವಾಗಿ ಇನ್ನೊಬ್ಬರು ದೂರನ್ನು ನೇರವಾಗಿ ಆಯೋಗಕ್ಕೆ ಅಥವಾ ಇ-ಮೇಲ್ ಮತ್ತು ಅಂಚೆ ಮೂಲಕ ಸಲ್ಲಿಸಬಹುದು ಇಲ್ಲವೇ ಈ ಬಗ್ಗೆ ಮಾಧ್ಯಮಗಳು ಬೆಳಕು ಚೆಲ್ಲಿದಲ್ಲಿ ಸ್ವಯಂ ದೂರು ದಾಖಲಿಸಿ ಅಗತ್ಯ ಕ್ರಮ ಕೈಗೊಳ್ಳಲು ಆಯೋಗವು ಸದಾ ಜಾಗೃತ ವಾಗಿರುತ್ತದೆ ಎಂದರು
ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾದ ಎಸ್.ಕೆ. ವಂಟಿಗೋಡಿ ಅವರು ಮಾತನಾಡಿ ಸಾರ್ವಜನಿಕ ಸ್ಥಳಗಳಲ್ಲಿ, ಸರ್ಕಾರಿ ಆಸ್ಪತ್ರೆ, ಹಾಸ್ಟೆಲ್ ಗಳು, ಜೈಲು, ಪೊಲೀಸ್ ಠಾಣೆಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಪ್ರಕರಣಗಳನ್ನು ತಡೆಗಟ್ಟುವುದಕ್ಕೆ ಏನೇನು ಕ್ರಮ ತೆಗೆದುಕೊಳ್ಳಬೇಕು ಮತ್ತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಮಾನವನ ಹಕ್ಕುಗಳ ಆಯೋಗದ ಅಗತ್ಯ ಕ್ರಮ ವಹಿಸುತ್ತಿದೆ.ಸರ್ಕಾರದ ಮೂಲಭೂತ ಸೌಕರ್ಯಗಳಿಂದ ವಂಚಿತರಾದವರು ಆಯೋಗಕ್ಕೆ ದೂರು ಸಲ್ಲಿಸಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಗೂ ಮುನ್ನ ಆಯೋಗದ ಅಧ್ಯಕ್ಷರು, ಸದಸ್ಯರು ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದ ವಿವಿಧ ಸಾರ್ವಜನಿಕ ಸರ್ಕಾರಿ ಸಂಸ್ಥೆಗಳಿಗೆ, ಸ್ಥಳಗಳಿಗೆ ಪ್ರವಾಸವನ್ನು ಕೈಗೊಂಡು ಪರಿಶೀಲಿಸಿದರು . ಮೊದಲಿಗೆ ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿ ಅಲ್ಲಿನ ಮೂಲಭೂತ ಸೌಕರ್ಯಗಳು ಹಾಗೂ ಅಲ್ಲಿನ ಸ್ವಚ್ಚತೆ ಬಗ್ಗೆ ವೀಕ್ಷಣೆ ಮಾಡಿ ಹೆಚ್ಚುವರಿಯಾಗಿ ಸಿ.ಸಿ.ಟಿ.ವಿ ಕ್ಯಾಮರಾ ಗಳನ್ನು ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಂತರ ಬಿ. ಸಿ. ಎಂ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆಯನ್ನು ಆಲಿಸಿದರು. ಸಕಾಲಕ್ಕೆ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಲು ಸಾರಿಗೆ ಅಧಿಕಾರಿಗಳಿಗೆ ತಿಳಿಸಿದರು.ಆನಂತರ ಚಿಕ್ಕಬಳ್ಳಾಪುರ ನಗರದ ಕೆ.ಎಸ್. ಆರ್.ಟಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಅಲ್ಲಿನ ಬೇಕರಿ ಮತ್ತು ತಿನಿಸು ಮಳಿಗೆಗಳಲ್ಲಿ ಅವಧಿ ಮೀರಿದ ಅನಾರೋಗ್ಯಕಾರಿ ಆಹಾರ ಪದಾರ್ಥಗಳನ್ನು ಹಾಗೂ ತಂಪು ಪಾನೀಯಗಳನ್ನು ಮಾರಟ ಮಾಡುತ್ತಿರುವುದನ್ನು ಗಮನಿಸಿದ ಅಧ್ಯಕ್ಷರು. ಮಳಿಗೆಗಳ ಮಾಲೀಕರನ್ನು ತರಾಟೆಗೆ ತೆಗೆದುಕೊಂಡರು ಜೊತೆಗೆ ಜಿಲ್ಲೆಯಾದ್ಯಂತ ಇಂತಹ ಮಳಿಗೆಗಳನ್ನು ಪರಿಶೀಲಿಸಿ ವರದಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರಯಾಣಿಕರೊಂದಿಗೆ ಸಂವಾದ ನಡೆಸಿ ಪ್ರಯಾಣಿಕರ ಸಮಸ್ಯೆಗಳನ್ನು ಆಲಿಸಿದರು ಚಿಕ್ಕಬಳ್ಳಾಪುರ ತಾಲೂಕಿನ ಕೊರ್ಲ ಹಳ್ಳಿ ಮಾರ್ಗವಾಗಿ ಚಲಿಸುವ ಸರ್ಕಾರಿ ಬಸ್ ಗಳನ್ನು ನಿಯಮಿತವಾಗಿ ಹೆಚ್ಚಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ರೋಗಿಗಳೊಂದಿಗೆ ಸಂವಾದ ನಡೆಸಿದರು. ಅಲ್ಲಿನ ಸಮಸ್ಯೆ, ಸ್ವಚ್ಚತೆ ಹಾಗೂ ಸೌಕರ್ಯಗಳನ್ನು ವೀಕ್ಷಣೆ ಮಾಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎನ್. ಭಾಸ್ಕರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಐ ಖಾಸಿಂ, ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜ, ಸಮಾಜ ಕಲ್ಯಾಣ ಇಲಾಖೆಯ ತೇಜಾನಂದ ರೆಡ್ಡಿ, ನಿವಾಸಿ ವೈದ್ಯ ರಮೇಶ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಮಾನವ ಹಕ್ಕುಗಳ ಆಯೋಗದ ಅಧಿಕಾರಿಗಳು ಮತ್ತು ಸಾರ್ವಜನಿಕರು ಹಾಜರಿದ್ದರು.