ಬೆಂಗಳೂರು: ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ನಾಡಹಬ್ಬ ಮೈಸೂರು ದಸರಾವನ್ನು ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ಆಚರಿಸಲು ಸರ್ಕಾರ ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಸೋಮವಾರ ನಾಡಹಬ್ಬ ಮೈಸೂರು ದಸರಾ – 2024ರ ಉನ್ನತ ಮಟ್ಟದ ಸಭೆಯ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.ಕಳೆದ ಬಾರಿ ಬರಗಾಲದ ಕಾರಣ ಅದ್ದೂರಿಯಾಗಿ ಆಚರಿಸಲು ಆಗಿರಲಿಲ್ಲ. ಈ ಬಾರಿ ರಾಜ್ಯದಾದ್ಯಂತ ಉತ್ತಮ ಮಳೆಯಾಗಿದ್ದು, ಬಹುತೇಕ ಎಲ್ಲಾ ಜಲಾಶಯಗಳು ತುಂಬಿವೆ. ಈ ಹಿನ್ನೆಲೆಯಲ್ಲಿ ದಸರಾವನ್ನು ವಿಜೃಂಭಣೆಯಿಂದ ಜನರ ಹಬ್ಬವನ್ನಾಗಿ ಆಚರಿಸಲು ಸರ್ಕಾರ ತೀರ್ಮಾನಿಸಲಾಗಿದೆ ಎಂದರು.
ಕಳೆದ ವರ್ಷ ದಸರಾ ಆಚರಣೆಗೆ 30 ಕೋಟಿ ರೂಪಾಯಿ ನೀಡಲಾಗಿತ್ತು. ಈ ಬಾರಿ ವಿಜೃಂಭಣೆಯಿಂದ ಆಚರಿಸಲು ಅಗತ್ಯ ಅನುದಾನ ಒದಗಿಸಲಾಗುವುದು. ದಸರಾ ಜಂಬೂ ಸವಾರಿಯಲ್ಲಿ ಭಾಗವಹಿಸುವ ಟ್ಯಾಬ್ಲೋಗಳು ಹೆಚ್ಚು ಆಕರ್ಷಕ, ಅರ್ಥಗರ್ಭಿತವಾಗಿ ಹಾಗೂ ವೈವಿಧ್ಯಮಯವಾಗಿರಬೇಕು ಎಂದು ಸೂಚಿಸಲಾಗಿದೆ. ಅಕ್ಟೋಬರ್ 3ರಂದು ಚಾಮುಂಡಿ ಬೆಟ್ಟದಲ್ಲಿ ಬೆಳಿಗ್ಗೆ 9.15ಕ್ಕೆ ದಸರಾ ಮಹೋತ್ಸವಕ್ಕೆ ಚಾಲನೆ ದೊರೆಯಲಿದೆ. ಉದ್ಘಾಟನೆ ದಿನವೇ ವಸ್ತು ಪ್ರದರ್ಶನ ಕೂಡಾ ಆರಂಭಿಸಲು ಸೂಚಿಸಲಾಗಿದ್ದು, ಎಲ್ಲಾ ಮಳಿಗೆಗಳು ಉದ್ಘಾಟನೆಯಂದೇ ಸಜ್ಜುಗೊಳಿಸಲು ಇಲಾಖಾ ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ. ವಸ್ತು ಪ್ರದರ್ಶನದಲ್ಲಿ ಎಲ್ಲಾ ಇಲಾಖೆಗಳ ಮಳಿಗೆಗಳಲ್ಲಿ ಸರ್ಕಾರದ ಸಾಧನೆಗಳು, ಗ್ಯಾರಂಟಿ ಯೋಜನೆಗಳ ಪ್ರದರ್ಶನ ಬಿಂಬಿಸುವ ಕೆಲಸವಾಗಬೇಕು ಎಂದು ಸೂಚಿಸಲಾಗಿದೆ ಎಂದರು.
ಆಗಸ್ಟ್ 21 ರಂದು ಬೆಳಿಗ್ಗೆ 10.10 ಗಂಟೆಯಿಂದ ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿಯಲ್ಲಿ ಗಜಪೂಜೆ ಮಾಡಲಾಗುವುದು. ಅಕ್ಟೋಬರ್ 3 ರಿಂದ 12 ರ ವರೆಗೆ ನಡೆಯಲಿದೆ. ಸಂಪ್ರದಾಯದಂತೆ 9 ದಿನ ಕಾರ್ಯಕ್ರಮಗಳು ಹಾಗೂ 10ನೇ ದಿನ ಜಂಬೂ ಸವಾರಿ ಏರ್ಪಾಡು ಮಾಡಲಾಗತ್ತದೆ. ಅಕ್ಟೋಬರ್ 12 ರಂದು ಮಧ್ಯಾಹ್ನ 1: 41 ರಿಂದ 2.10 ಗಂಟೆಯ ವರೆಗೆ ಜಂಬೂ ಸವಾರಿ, ನಂದಿ ಧ್ವಜ ಪೂಜೆ ಹಾಗೂ ಸಂಜೆ 4 ಗಂಟೆಯಿಂದ ಪುಷ್ಪಾರ್ಚನೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಪ್ರವಾಸಿಗರ ಅನುಕೂಲಕ್ಕಾಗಿ ದೀಪಾಲಂಕಾರವನ್ನು ಕಳೆದ ಬಾರಿ ಒಂದು ವಾರ ವಿಸ್ತರಣೆ ಮಾಡಲಾಗಿತ್ತು. ಈ ಬಾರಿಯೂ ದಸರಾ ನಂತರವೂ ದೀಪಾಲಂಕಾರ ಅವಧಿಯನ್ನು ವಿಸ್ತರಿಸಿ 21 ದಿನಗಳ ಕಾಲ ದೀಪಾಲಂಕಾರ ಮಾಡಲು ನಿರ್ಧರಿಸಲಾಗಿದೆ ಎಂದರು.
ಪ್ರವಾಸಿಗರ ನೆರವಿಗಾಗಿ ಟೂರಿಸ್ಟ್ ಮಿತ್ರ ಮತ್ತು ಹೋಂ ಗಾರ್ಡ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಕ ಮಾಡಲಾಗುವುದು. ಪಾರ್ಕಿಂಗ್, ಭದ್ರತಾ ವ್ಯವಸ್ಥೆಯಲ್ಲಿ ಯಾವುದೇ ಲೋಪವಾಗದಂತೆ ಸಿದ್ದತೆಗಳನ್ನು ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ. ಪ್ರವಾಸೋದ್ಯಮ ಇಲಾಖೆಯಿಂದ ಮೈಸೂರನ್ನು ಕೇಂದ್ರವಾಗಿರಿಸಿಕೊಂಡು ಕೆ.ಎಸ್.ಆರ್.ಟಿ.ಸಿ ಸಹಯೋಗದೊಂದಿಗೆ ಪ್ರವಾಸಿ ಸರ್ಕ್ಯುಟ್ ರೂಪಿಸಲಾಗುವುದು ಎಂದು ಹೇಳಿದರು.
ಸಾಂಸ್ಕೃತಿಕ ಕಾರ್ಯಕ್ರಮ, ವಸ್ತು ಪ್ರದರ್ಶನ, ದೀಪಾಲಂಕಾರ, ಆಹಾರ ಮೇಳ ಮತ್ತಿತರ ಕಾರ್ಯಕ್ರಮಗಳನ್ನು ಅತ್ಯಂತ ವ್ಯವಸ್ಥಿತವಾಗಿ, ಅರ್ಥಪೂರ್ಣವಾಗಿ ಆಯೋಜಿಸಬೇಕು. ಸ್ಥಳೀಯರಿಗೆ ಪ್ರೋತ್ಸಾಹ ಕೊಡಬೇಕಾಗಿರುವುದರಿಂದ ಸ್ಥಳೀಯ ಕಲಾವಿದರಿಗೆ ಹೆಚ್ಚು ಅವಕಾಶ ದೊರಕಿಸಬೇಕು. ಇದೇ ವೇಳೆ ದಸರಾಕ್ಕೆ ಹೊಸ ರೂಪು ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಲು ಸೂಚನೆ ನೀಡಲಾಗಿದೆ. ದಸರಾ ಉದ್ಘಾಟನೆಗೆ ಯಾರನ್ನು ಆಹ್ವಾನಿಸಬೇಕು ಎಂಬುವುದನ್ನು ಮುಖ್ಯಮಂತ್ರಿ ಅವರ ತೀರ್ಮಾನಕ್ಕೆ ಸಭೆ ನೀಡಿದೆ ಎಂದು ತಿಳಿಸಿದರು.