Monday, December 23, 2024
Homeರಾಜಕೀಯಬಂಡವಾಳ ಹೂಡಿಕೆ ಕುರಿತ ಬಿಜೆಪಿ ಆರೋಪಕ್ಕೆ ಡಿಸಿಎಂ ಡಿಕೆಶಿ ಕಿಡಿ

ಬಂಡವಾಳ ಹೂಡಿಕೆ ಕುರಿತ ಬಿಜೆಪಿ ಆರೋಪಕ್ಕೆ ಡಿಸಿಎಂ ಡಿಕೆಶಿ ಕಿಡಿ

ಆರೋಪ ಮಾಡಿರುವ ಬಿಜೆಪಿ ನಾಯಕರಿಗೆ ನಾಚಿಕೆಯಾಗಬೇಕು ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ದಾಖಲೆ ಸಮೇತ ಉತ್ತರ ನೀಡುತ್ತೇವೆ


ಬೆಂಗಳೂರು: ಬಂಡವಾಳ ಹೂಡಿಕೆ ವಿಚಾರವಾಗಿ ರಾಜ್ಯದ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಬಿಜೆಪಿ ನಾಯಕರಿಗೆ ನಾಚಿಕೆಯಾಗಬೇಕು. ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಅವರಿಗೆ ದಾಖಲೆ ಸಮೇತ ಉತ್ತರ ನೀಡುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಸದಾಶಿವನಗರ ನಿವಾಸದ ಬಳಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ರೀತಿ ಟ್ವಿಟ್ ಮಾಡಿರುವ ಬಿಜೆಪಿ ನಾಯಕರಿಗೆ ನಾಚಿಕೆಯಾಗಬೇಕು. ಅವರು ದಾಖಲೆಗಳನ್ನು ಪರಿಶೀಲಿಸಿ ಮಾತನಾಡಬೇಕು ಎಂದು ಹೇಳಿದರು.

ಬಿಜೆಪಿಯ ದುರಾಡಳಿತ, ಕಿರುಕುಳಕ್ಕೆ ಬೇಸತ್ತು ಲಕ್ಷಾಂತರ ಉದ್ದಿಮೆದಾರರು, ವ್ಯಾಪಾರಿಗಳು ದೇಶ ಬಿಟ್ಟು ಹೋಗಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಬಂಡವಾಳ ಹೂಡಿಕೆದಾರರು ನಮ್ಮ ರಾಜ್ಯದಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿದ್ದಾರೆ ಎಂದರು.

ನಮ್ಮ ಕೈಗಾರಿಕಾ ಸಚಿವರು ಮತ್ತು ಮಾಹಿತಿ ತಂತ್ರಜ್ಞಾನ ಸಚಿವರು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕರ್ನಾಟಕ ಪ್ರಗತಿ, ಅಭಿವೃದ್ಧಿ ಹಾಗೂ ಶಾಂತಿಯ ನಾಡು ಎಂದು ಇಡೀ ದೇಶಕ್ಕೇ ಗೊತ್ತಿದೆ. ನಮ್ಮ ರಾಜ್ಯ ಹಾಗೂ ಬೆಂಗಳೂರನ್ನು ಇಡೀ ವಿಶ್ವವೇ ನೋಡುತ್ತಿದೆ ಎಂದು ತಿಳಿಸಿದರು.

ಪ್ರಜ್ವಲ್ ರೇವಣ್ಣ ಅವರ ವಿಚಾರವಾಗಿ ದೇವೇಗೌಡರ ಪತ್ರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದು ಅವರ ಕುಟುಂಬದ ವಿಚಾರ. ಈ ವಿಚಾರವಾಗಿ ಮಾತನಾಡುವುದಿಲ್ಲ ಎಂದರು.

ಮುಖ್ಯಮಂತ್ರಿಗಳ ನಗರ ಪ್ರದಕ್ಷಿಣೆ ಕುರಿತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಕ್ಷೇಪಣೆಗೆ ಅವರು ಏನಾದರೂ ಟೀಕೆ ಮಾಡಲಿ. ನಾವು ಜನರಿಗಾಗಿ ಕೆಲಸ ಮಾಡುತ್ತೇವೆ. ನಾವು ಜನರಿಗಾಗಿ ಇದ್ದೇವೆ. ಜನ ನಮ್ಮ ಪರವಾಗಿ ಇರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

 

Social Media Links
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!