ಚನ್ನಪಟ್ಟಣ: ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಯಾವುದೇ ಹಗರಣಗಳು ನಡೆದಿಲ್ಲ ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.
ಚನ್ನಪಟ್ಟಣದ ಕೋಟೆ ಮಾರಮ್ಮ ದೇವಸ್ಥಾನದ ಆವರಣದಲ್ಲಿ ನಡೆದ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದ ನಂತರ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲಾ ಹಗರಣಗಳು ನಡೆದಿರುವುದು ಬಿಜೆಪಿ ಕಾಲದಲ್ಲಿ, ಅವರ ಎಲ್ಲಾ ಪ್ರಶ್ನೆಗಳಿಗೆ ಸದನದಲ್ಲಿ ಉತ್ತರ ಕೊಡುತ್ತೇವೆ ಎಂದು ತಿರುಗೇಟು ನೀಡಿದರು.
ಕೆಆರ್‌ಎಸ್ ಅಣೆಕಟ್ಟಿನಲ್ಲಿ ಸ್ಫೋಟ ಮಾಡುವುದಿಲ್ಲ. ಏನೇನು ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡು ಸ್ಪೋಟ ಮಾಡಲಾಗುತ್ತದೆ. ಇಂತಿಷ್ಟು ದೂರ ಎಂಬುದು ಇರುತ್ತದೆ ಎಂದರು. ಉಪಚುನಾವಣೆ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಮೊದಲು ಚುನಾವಣಾ ದಿನಾಂಕ ಘೋಷಣೆಯಾಗಲಿ ಅವರೇ ಬಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಅಚ್ಚರಿ ಮೂಡಿಸಿದರು.
ಡಿ.ಕೆ. ಶಿವಕುಮಾರ್ ಅವರೇ ನನ್ನನ್ನು ಜೈಲಿಗೆ ಹಾಕಿಸಿದ್ದು ಎನ್ನುವ ವಕೀಲ ದೇವರಾಜೇಗೌಡ ಅವರ ಆರೋಪದ ಬಗ್ಗೆ ಕೇಳಿದಾಗ ನನ್ನನ್ನು ನೆನೆಸಿಕೊಳ್ಳುತ್ತಿರಲಿ. ಬಹಳ ಸಂತೋಷ ಎಂದು ವ್ಯಂಗ್ಯವಾಡಿದರು.
ಮೊದಲು ಎಲ್ಲಾ ಅರ್ಜಿಗಳನ್ನು ಪರಿಶೀಲನೆ ಮಾಡಲಾಗುವುದು. ಅರ್ಹರನ್ನು ಗುರುತಿಸ ಲಾಗುವುದು.ನಂತರ ನಾನೇ ಖುದ್ದಾಗಿ ಬಂದು ಸರ್ಕಾರಿ ಜಮೀನು ಖಾಸಗಿ ಜಮೀನು ಪರಿಶೀಲನೆ ನಡೆಸಿ ಹಂಚಿಕೆ ಮಾಡಲಾಗುವುದು. ಇಲಾಖಾವಾರು ಅರ್ಜಿಗಳನ್ನು ವಿಂಗಡಣೆ ಮಾಡಿ ಆಯಾಯ ಇಲಾಖೆಯ ಸಚಿವರಿಂದ ಸಭೆ ನಡೆಸಲಾಗುವುದು ಎಂದರು.
ಚನ್ನಪಟ್ಟಣವನ್ನು ಬದಲಾವಣೆ ಮಾಡಬೇಕು ಮುನಿಸಿಪಾಲಿಟಿ, ತಾಲೂಕು ಕಚೇರಿ, ಆಸತ್ರೆ ಸೇರಿದಂತ ಎಲ್ಲವನ್ನು ಬದಲಾವಣೆ ಮಾಡಬೇಕು. ಶವ ಸಂಸ್ಕಾರ ಮಾಡಲು ಸ್ಮಶಾನವಿಲ್ಲ, ಬಡವರಿಗೆ, ಬೀಡಿ ಕಾರ್ಮಿಕರಿಗೆ ಮನೆಯಿಲ್ಲ, ಈ ಬದಲಾವಣೆಗಳು ಏಕೆ ಆಗಲಿಲ್ಲವೊ ಗೊತ್ತಿಲ್ಲ ಎಂದು ನುಡಿದರು.
ಗ್ರಾಮೀಣ ಭಾಗದ ಮಹಿಳೆಯರಿಗೆ ಸ್ವೀಕೃತಿ ಪತ್ರ ಪಡೆದುಕೊಳ್ಳುವ ತಾಳ್ಮೆಯಿತ್ತು. ಚನ್ನಪಟ್ಟಣ ನಗರದ ಮಹಿಳೆಯರಿಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ದಾವಂತದಲ್ಲಿ ಇದ್ದಾರೆ. ಅಂದರೆ ಜನರ ಸಮಸ್ಯೆಗಳನ್ನು ಸರಿಯಾಗಿ ಆಲಿಸಿಲ್ಲ ಎಂದರ್ಥ. ಇದಕ್ಕೆ ನಾನು ಉತ್ತರ ಕೊಡಬೇಕಾಗಿಲ್ಲ, ಮತದಾರರು, ಸ್ಥಳೀಯ ನಾಯಕರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಒಳ್ಳೆಯ ಕೆಲಸ ಯಾರು ಮಾಡಿದರೆ ಏನಂತೆ. ಜನಸೇವೆ ಮಾಡುವುದನ್ನು ನಾನು ಬೇಡ ಎಂದು ಹೇಳಲು ಆಗುವುದಿಲ್ಲ ಎಂದರು.