ಚಿಕ್ಕಬಳ್ಳಾಪುರ : ಜಲಸಂರಕ್ಷಣೆ ಮತ್ತು ಸಮರ್ಪಕ ಬಳಕೆ ಯೋಜನೆಯನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ನಗರಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ CDRI ಸಂಸ್ಥೆ ಸಹಯೋಗದಲ್ಲಿ ಯೋಜಿತ ರೀತಿಯಲ್ಲಿ ಅನುಷ್ಠಾನ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ತಿಳಿಸಿದರು.
ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ “ನಗರಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ನೀರಿನ ಸಂರಕ್ಷಣೆ, ಸಮಪರ್ಕ ಬಳಕೆ” ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚಿಕ್ಕಬಳ್ಳಾಪುರ ನಗರ ಸಭೆಯ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ನಿರ್ವಹಣೆಯನ್ನು ರೈತರ ಸಹಭಾಗಿತ್ವದಲ್ಲಿ ಸಮಪರ್ಕವಾಗಿ ವಿಲೆವಾರಿ ಮಾಡಿ ಸರ್ಕಾರದ ಮಟ್ಟದಿಂದ ಜಿಲ್ಲಾಡಳಿತ ಹಾಗೂ ಚಿಕ್ಕಬಳ್ಳಾಪುರ ನಗರಸಭೆ ಅಭಿನಂದನೆಗೆ ಪಾತ್ರವಾಗಿತ್ತು. ಈ ಘನತ್ಯಾಜ್ಯ ನಿರ್ವಹಣೆಯ ಯೋಜನೆಯ ಯಶಸ್ಸಿಗೆ CDRI (Coalition for Disaster Resilient Infrastructure) ಸಂಸ್ಥೆ ರೂಪಿಸಿದ್ದ ವಿನೂತನ ತ್ಯಾಜ್ಯ ನಿರ್ವಹಣೆಯ ಯೋಜನೆ ಹಾಗೂ ಅನುಷ್ಠಾನದ ವಿಧಾನವೆ ಕಾರಣ. ಈ ಕಾರ್ಯಕ್ಕೆ ಚಿಕ್ಕಬಳ್ಳಾಪುರ ನಗರ ಸಭೆಯ ಜನಪ್ರತಿನಿಧಿಗಳು, ರೈತ ಭಾಂದವರು, ನಗರ ಸಭೆ ಅಧಿಕಾರಿಗಳು,ಸಿಬ್ಬಂದಿ ವರ್ಗದವರು ಅಭೂತಪೂರ್ವ ಸಹಕಾರ ನೀಡಿದ್ದರು. ಇದನ್ನು ಸ್ಮರಿಸಿದ CDRI ಸಂಸ್ಥೆಯು ಮತ್ತೊಂದು ಯೋಜನೆಯನ್ನು ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಮಾಡಲು ಮುಂದಾಗಿದ್ದು “ನಗರ ಆಡಳಿತ ಸಂಸ್ಥೆಯ ವ್ಯಾಪ್ತಿಯಲ್ಲಿ ಜಲಸಂರಕ್ಷಣೆ ಮತ್ತು ಸಮಪರ್ಕ ಬಳಕೆ” ಎಂಬ ಯೋಜನೆಯನ್ನು ಅನುಷ್ಠಾನಗೊಳಿಸಲು ಮುಂದೆ ಬಂದಿದೆ. ಈ ಯೋಜನೆ ಅನುಷ್ಠಾನಕ್ಕಾಗಿ ದೇಶದಲ್ಲೆ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡಿರುವುದು ಸ್ವಾಗತಾರ್ಹ ವಿಷಯವಾಗಿದೆ ಎಂದರು.
ಚಿಕ್ಕಬಳ್ಳಾಪುರ ಜಿಲ್ಲೆಯ ನಗರಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪ್ರಸ್ತುತ ಕುಡಿಯುವ ನೀರಿನ ಮೂಲಗಳು, ಸಂಗ್ರಹಣೆ, ನೀರಿನ ಪೂರೈಕೆ ಮತ್ತು ಬಳಕೆಯ ವಿಧಾನಗಳನ್ನು ಮೊದಲು ಅಧ್ಯಯನ ಮಾಡಲಾಗುತ್ತದೆ ನಂತರ ಮುಂದಿನ 30-40 ವರ್ಷಗಳಲ್ಲಿ ನಗರಗಳು ಯಾವ ರೀತಿ ಬೆಳವಣಿಗೆ ಆಗಲಿವೆ, ಜನಸಂಖ್ಯೆ ಯಾವ ರೀತಿ ಹೆಚ್ಚಳ ಆಗಲಿದೆ. ನೀರಿನ ಬೇಡಿಕೆ ಏನು ಎಂಬುದನ್ನು ಅಧ್ಯಯನ ಮಾಡಿ ಮಳೆಯ ನೀರನ್ನು ಯಾವ ರೀತಿ ಮುಂದಿನ ದಿನಗಳಲ್ಲಿ ಸಂಗ್ರಹಿಸಬೇಕು. ಜಲ ಸಂಗ್ರಹಣೆಯನ್ನು ಯಾವ ರೀತಿ ಎಲ್ಲೆಲ್ಲಿ ಮಾಡಬೇಕು. ಯಾವ ಮೂಲಗಳಿಂದ ನೀರು ಎಷ್ಟು ಪ್ರಮಾಣದಲ್ಲಿ ಲಭ್ಯವಾಗಲಿದೆ. ಈಗಿರುವ ಜಲ ಸಂರಕ್ಷಣೆಯ ಮೂಲಗಳನ್ನು ಮತ್ತಷ್ಟು ಅಭಿವೃದ್ಧಿಗೊಳಿಸಿ ವಿಸ್ತರಣೆ ಮಾಡುವುದು ಹೇಗೆ ಎಂಬುದನ್ನು ಎಲ್ಲ ಆಯಾಮಗಳಲ್ಲಿ ಅಧ್ಯಯನ ಮಾಡಿ ಮುಂದಿನ ಎರಡು ವರ್ಷಗಳಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಅನುಷ್ಠಾನ ಮಾಡಿ ಮುಂದಿನ 30-40 ವರ್ಷಗಳಲ್ಲಿ ಎದುರಾಗುವ ನೀರಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಈಗಿನಿಂದಲೆ ಪ್ರಯತ್ನಿಸಲಾಗುತ್ತದೆ. ಈ ಯೋಜನೆಯನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ನಗರ ಸ್ಥಳೀಯಾಡಳಿತ ಸಂಸ್ಥೆಗಳು ಅನುಷ್ಠಾನ ಮಾಡಲು ಮುಂದೆ ಬಂದಿರುವ CDRI ಸಂಸ್ಥೆಯ ಪ್ರಸ್ತಾವನೆಯನ್ನು ಒಪ್ಪಿ ಸದ್ಬಳಕೆ ಮಾಡಿಕೊಳ್ಳಬೇಕು. ಈ ಯೋಜನೆಗೆ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಆರ್ಥಿಕ ಹೊರೆಯಾಗದಂತೆ ಯೋಜನೆ ರೂಪಿಸಲಾಗಿದೆ. ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದರೊಂದಿಗೆ ಯೋಜನೆ ಅನುಷ್ಠಾನ ಆಗುವುದರಿಂದ ಇದು ಅತಿ ಉಪಯುಕ್ತ ಆಗಲಿದೆ. ಮುಂದಿನ ವರ್ಷಗಳಲ್ಲಿ ಎದುರಾಗುವ ನೀರಿನ ಬೇಡಿಕೆಗಳು, ಅನಾಹುತಗಳನ್ನು ಎದುರಿಸಲು ಈಗಿನಿಂದ ಸಿದ್ದತೆ ಮಾಡಿಕೊಳ್ಳಲು ಹಾಗೂ ಮುಂದಿನ ಸಮಸ್ಯೆಗಳನ್ನು ಬಗೆಹರಿಸಲು ಈ ಯೋಜನೆ ಸಹಕಾರಿಯಾಗಲಿದೆ ಎಂದರು.
ಸಭೆಯಲ್ಲಿ ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ ಗಜೇಂದ್ರ, ಉಪಾಧ್ಯಕ್ಷ ನಾಗರಾಜು, ಜಿಲ್ಲಾ ನಗಾರಾಭಿವೃದ್ಧಿ ಕೋಶದ ನಿರ್ದೇಶಕಿ ಮಾಧವಿ, ಜಿಲ್ಲೆಯ ನಗರಸಭೆ, ಪುರ ಸಭೆಗಳ ಸದ್ಯಸರು, ಪದಾಧಿಕಾರಿಗಳು, ಎಲ್ಲ ನಗರಾಡಳಿತ ಸಂಸ್ಥೆಗಳ ಪೌರಯುಕ್ತರು, ಮುಖ್ಯಸ್ಥರು, CDRI ಸಂಸ್ಥೆಯ ಪುಷ್ಕರ್, ಅಜೀಜ್ ಇತರ ಪ್ರತಿನಿಧಿಗಳು ಹಾಜರಿದ್ದರು.