Monday, December 23, 2024
Homeಜಿಲ್ಲೆಕೆಐಎಡಿಬಿ ಭೂ ಸ್ವಾಧೀನದಿಂದ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಲಿದೆ: ದಲಿತ ಮುಖಂಡ ರಾಮಾಂಜಿನಪ್ಪ.

ಕೆಐಎಡಿಬಿ ಭೂ ಸ್ವಾಧೀನದಿಂದ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಲಿದೆ: ದಲಿತ ಮುಖಂಡ ರಾಮಾಂಜಿನಪ್ಪ.

ಜಂಗಮಕೋಟೆ ಹೋಬಳಿ 13 ಹಳ್ಳಿಗಳ 2209 ಎಕರೆ ಪ್ರದೇಶದಲ್ಲಿಯೇ ಕೈಗಾರಿಕೆಗಳು ನಿರ್ಮಾಣವಾಗಬೇಕು. ಭೂಮಿ ಕೊಟ್ಟ ರೈತರಿಗೆ ಸರ್ಕಾರ ಸೂಕ್ತ ಪರಿಹಾರ ಒದಗಿಸಲು ಒತ್ತಾಯ.

ಶಿಡ್ಲಘಟ್ಟ : ತಾಲ್ಲೂಕಿನಲ್ಲಿ ಯಾವುದೇ ಕೈಗಾರಿಕೆ ಸಂಸ್ಥೆಗಳು ಇಲ್ಲದೆ ಇಲ್ಲಿನ ವಿದ್ಯಾವಂತ ಯುವಕ ಯುವತಿಯರು, ಈ ಭಾಗದ ಜನರು ಕೆಲಸಕ್ಕಾಗಿ ಬೇರೆ ಕಡೆ ವಲಸೆ ಹೋಗುತ್ತಿದ್ದು, ತಾಲ್ಲೂಕಿನಲ್ಲಿ ಕೈಗಾರಿಕೆ ಸಂಸ್ಥೆಗಳು ಬರಬೇಕು ಜಂಗಮಕೋಟೆ ಹೋಬಳಿಯ 13 ಹಳ್ಳಿಗಳ ವ್ಯಾಪ್ತಿಯ ಸುಮಾರು 2209 ಎಕರೆ ಜಮೀನು ಸರ್ಕಾರ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿಯ ಮೂಲಕ ಭೂ ಸ್ವಾಧೀನ ಪಡಿಸಿಕೊಂಡು ಕೈಗಾರಿಕೆ ಕಂಪನಿಗಳು ಸ್ಥಾಪನೆ ಮಾಡುವುದರೆ ಜೊತೆಗೆ ಕೆಐಎಡಿಬಿಗೆ ಭೂಮಿಕೊಟ್ಟ ಪ್ರತಿ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕರಾದ ರಾಮಾಂಜಿನಪ್ಪ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ಅವರು ಬಯಲು ಸೀಮೆ ಜಿಲ್ಲೆಯಾದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಯಾವುದೆ ನದಿ ನಾಲೆಗಳು ಇಲ್ಲದೆ ಕೊಳವೆ ಬಾವಿಗಳ ಮೇಲೆ ಅವಲಂಭಿತರಾಗಿ ಬರುವ ಅರ್ಧ ಇಂಚು – ಒಂದು ಇಂಚು ನೀರಿನಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಚಿಕ್ಕಬಳ್ಳಾಪುರ, ಚಿಂತಾಮಣಿ, ವೇಮಗಲ್, ದೇವನಹಳ್ಳಿ ಹಲವು ಕಡೆ ಕೈಗಾರಿಕಾ ಕಂಪನಿಗಳು ನಿರ್ಮಾಣ ಆಗಿವೆ. ಇದರಿಂದ ಸ್ಥಳೀಯ ಜನರಿಗೆ ಉದ್ಯೋಗವಕಾಶಗಳು ಸಿಕ್ಕಿದ್ದು ನಿರುದ್ಯೋಗ ಸಮಸ್ಯೆ ನಿವಾರಣೆಯಾಗಿದೆ. ತಾಲ್ಲೂಕಿನಲ್ಲಿ ಯಾವುದೇ ಕೈಗಾರಿಕಾ ಕಂಪನಿಗಳು ಸ್ಥಾಪಿತವಾಗದೆ ನಿರುದ್ಯೋಗ ಸಮಸ್ಯೆಗಳು ಹೆಚ್ಚಾಗಿವೆ. ಇಲ್ಲಿನ ಜನರು ಬೇರೆಡೆಗೆ ವಲಸೆ ಹೋಗುವಂತಹ ಪರಿಸ್ಥಿತಿಯಿದೆ ಎಂದು ಕಳವಳ ವ್ಯಕ್ತಪಡಿಸಿದರು.

ತಾಲ್ಲೂಕಿನ ಜಂಗಮಕೋಟೆ ಹೋಬಳಿಯ 13 ಹಳ್ಳಿಗಳ ವ್ಯಾಪ್ತಿಯಲ್ಲಿನ ರೈತರ ಭೂಮಿಯನ್ನ ಕೆಐಎಡಿಬಿ ವ್ಯಾಪ್ತಿಗೆ ಸುಮಾರು 2823 ಎಕರೆ ಜಮೀನಿದ್ದು,  ಸರ್ಕಾರ ನೀಡಿರುವ ಅಂಕಿ ಅಂಶಗಳ ಪ್ರಕಾರ ಖರಾಬು 730. ಎಕರೆ , ಸರ್ಕಾರಿ ಜಮೀನು 539 ಎಕರೆ, ಬೀಳು 419 ಎಕರೆ ಜಮೀನಿದ್ದು,  ಇದರಲ್ಲಿ ಪಿಎಸಿಲ್ ಕಂಪನಿಗೆ ಸೇರಿದೆ ಎನ್ನಲಾದ ಸುಮಾರು 521 ಎಕರೆ ಎಂದು ಕಂದಾಯ ದಾಖಲೆಗಳಲ್ಲಿ ನಮೂದಿಸಿದ್ದು,  ಪಿಎಸಿಎಲ್ ಕಂಪನಿಯ ಹೆಸರಿನಲ್ಲಿ ರಿಯಲ್ ಎಸ್ಟೇಟ್ ಕುಳಗಳು ಬಡ ರೈತರ ಜಮೀನುಗಳಲ್ಲಿ ಅಕ್ರಮವಾಗಿ ಒತ್ತವರಿ ಮಾಡಿಕೊಂಡು ಬಡ ರೈತರನ್ನ ಬೀದಿ ಪಾಲು ಮಾಡಿರುವ ನಿದರ್ಶನಗಳಿವೆ. ಈ ಬಗ್ಗೆ ಯಾವುದೇ ರೈತ ಸಂಘಗಳು ಧ್ವನಿ ಎತ್ತಲಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.

ಬಿಡಿಗಾಸು ಕೊಟ್ಟು ರೈತರಿಂದ ಜಿಪಿಎ , ಅಗ್ರಿಮೆಂಟ್,ಮಾಡಿಸಿಕೊಂಡು ರೈತರಿಗೆ ನ್ಯಾಯವಾಗಿ ಸಂಪೂರ್ಣ ಹಣ ನೀಡದೆ ಪಿಎಸಿಎಲ್ ಕಂಪನಿಯ ಹೆಸರಿನಲ್ಲಿ ಸಾಕಷ್ಟು ವಂಚನೆ ಮಾಡಿದ್ದಾರೆ. ಪಿಎಸಿಎಲ್ ಕಂಪನಿಯನ್ನ ಯಾವೊಬ್ಬ ಭೂಮಿ ಮಾಲೀಕರು ಈವರೆಗೂ ನೋಡಿಲ್ಲ. ಪಿಎಸಿಎಲ್ ಕಂಪನಿಯ ಹೆಸರಿಗೆ ನಮೂದಾಗಿರುವ ಪಹಣಿ ಕಂದಾಯ ದಾಖಲೆಗಳು ಪರಿಶೀಲಿಸಿ ಭೂ ಸ್ವಾಧೀನಕ್ಕೆ ಒಳಪಡುವ ಪಿಎಸಿಎಲ್ ಕಂಪನಿ ಹೆಸರಿನ ಜಮೀನಿಗೆ ಸರ್ಕಾರ ನೀಡುವ ಪರಿಹಾರ ಕೆಐಎಡಿಬಿ ಯಿಂದ ಜಮೀನಿನ ಮೂಲ ಖಾತೆದಾರ ರೈತರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ರೈತರಿಂದ ಕಡಿಮೆ ಬೆಲೆಯಲ್ಲಿ ಜಮೀನು ಪಡೆದುಕೊಂಡು ಭೂ ಪರಿರ್ತನೆ ಮಾಡಿ ಸರ್ಕಾರದ ನೀತಿ ನಿಯಮಗಳಂತೆ ಬಡಾವಣೆಯನ್ನ ಮೂರು ವರ್ಷಗಳ ಒಳಗಾಗಿ ಅಭಿವೃದ್ದಿಗೊಳಿಸದ ಭೂ ಪರಿವರ್ತಿತ ಜಮೀನುಗಳು ಸಹಾ ಮೂಲ ರೈತರಿಗೆ ವಾಪಸ್ ನೀಡಬೇಕು. ಅವಧಿ ಮೀರಿದ ಭೂ ಪರಿವರ್ತನೆ ಜಮೀನುಗಳು ರೈತರ ಹೆಸರಿಗೆ ವಾಪಸ್ ಮಾಡಿಕೊಡಬೇಕು ಎಂದರು.

ಕೆಐಡಿಬಿಗೆ ಭೂಮಿ ನೀಡುವುದಾಗಿ ಸುಮಾರು 60 ಕುಟುಂಬಗಳು ತಾವೇ ಖುದ್ದು ಪತ್ರ ಸಲ್ಲಿಸುವ ಮೂಲಕ ಬೆಂಬಲ ವ್ಯಕ್ತಪಡಿಸಿದ್ದು, ಭೂ ಸ್ವಾಧೀನ ಪ್ರಕ್ರಿಯೆಯಿಂದ ರೈತರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಅದಕ್ಕೆ ಕೆಐಎಡಿಬಿ ಸೂಕ್ತ ಪರಿಹಾರ ನೀಡುತ್ತಿದ್ದು, ಇದಕ್ಕೆ ರಿಯಲ್ ಎಸ್ಟೇಟ್ ಉದ್ದಿಮೆದಾರರು ತಗಾದೆ ಮಾಡುತ್ತಿದ್ದಾರೆ. ತಾಲ್ಲೂಕಿಗೆ ಕೈಗಾರಿಕೆಗಳು ಬರಬೇಕು ಇದಕ್ಕೆ ನಮ್ಮ ಬೆಂಬಲ ಇದೆ. ಕೈಗಾರಿಕೆಗಳು ಬರುವುದರಿಂದ ನಿರುದ್ಯೋಗ ಸಮಸ್ಯೆಗಳು ನಿವಾರಣೆಯಾಗಲಿದೆ ಎಂದರು.

ದಲಿತ ಸಂಘರ್ಷ ಸಮಿತಿ ಕೇವಲ ಒಂದು ಸಮುದಾಯದ ಪರವಾಗಿಲ್ಲ ಎಲ್ಲಾ ವರ್ಗದ ರೈತರಿಗೆ ಅನುಕೂಲವಾಗಬೇಕು. ಭೂ ಸ್ವಾಧೀನಪಡಿಸಿಕೊಳ್ಳುವ ಕೆಐಎಡಿಬಿ ನಿಗಧಿತ ಸಮಯಕ್ಕೆ ರೈತರಿಗೆ ಯಾವುದೇ ರೀತಿಯಲ್ಲಿ ಸಮಸ್ಯೆಯಾಗದಂತೆ ಪರಿಹಾರವನ್ನ ನೀಡಬೇಕು ಈ ಬಗ್ಗೆ ಸರ್ಕಾರ ಗಮನಹರಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳಾದ ನರಸಿಂಹಮೂರ್ತಿ, ಮಂಜುನಾಥ, ಮಳ್ಳೂರು ವೇಣುಗೋಪಾಲ್, ಯಣ್ಣೂರು ದೇವರಾಜ್, ಚೀಮಂಗಲ ಮುನಿರಾಜು, ದೇವರಾಜು, ಅತ್ತಿಗಾನಹಳ್ಳಿ ಮುನಿಯಪ್ಪ, ಮುನಿಸ್ವಾಮಿ, ಎ.ಟಿ.ಎಂ ಮಂಜುನಾಥ್, ಸೇರಿದಂತೆ ಇತರರು ಹಾಜರಿದ್ದರು.

Social Media Links
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!