ಬೆಂಗಳೂರು: ಅತೀ ಹೆಚ್ಚು ಭ್ರಷ್ಟಾಚಾರ ನಡೆಯುವ, ಜನರಿಂದ ಹೆಚ್ಚು ಹಣ ಸುಲಿಗೆ ಮಾಡುವ ಕಂದಾಯ ಇಲಾಖೆಯ ಉಪನೋಂದಣಾಧಿಕಾರಿ ಕಛೇರಿಯೂ ಕೂಡ ಒಂದಾಗಿದೆ. ಭ್ರಷ್ಟಾಚಾರ ನಿಯಂತ್ರಣಕ್ಕೆ ಸರ್ಕಾರ ಹೊಸ ಹೆಜ್ಜೆ ಇಟ್ಟಿದೆ. ಆ ಮೂಲಕ ಸಬ್ ರಿಜಿಸ್ಟ್ರಾರ್ ಗೆ ಮೇಜರ್ ಸರ್ಜರಿ ನಡೆಸಲು ಸರ್ಕಾರ ಹೊಸ ನೀತಿ ಜಾರಿಗೆ ಮಾಡಿದೆ.
ಸರ್ಕಾರ ಕೌನ್ಸೆಲಿಂಗ್ ಮೂಲಕ ಸಬ್ ರಿಜಿಸ್ಟ್ರಾರ್ ವರ್ಗಾವಣೆ ಪ್ರಕ್ರಿಯೆ ನಡೆಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್. ಕೆ.ಪಾಟೀಲ್ ತಿಳಿಸಿದರು.
ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ
ಮಾತನಾಡಿದ ಅವರು, ಇಲ್ಲಿಯತನಕ ಸಬ್ ರಿಜಿಸ್ಟ್ರಾರ್ ವರ್ಗಾವಣೆಯನ್ನು ನೇರವಾಗಿ ಮಾಡಲಾಗುತ್ತಿತ್ತು. ಅಕ್ರಮ ಹಾಗೂ ಭ್ರಷ್ಟಾಚಾರ ತಡೆಗಟ್ಟಲು ವರ್ಗಾವಣೆಗೆ ಹೊಸ ನೀತಿ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.
ಸಬ್ ರಿಜಿಸ್ಟ್ರಾರ್ ಹಂತಕ್ಕಿಂತ ಕೆಳ ಅಧಿಕಾರಿಗಳ ವರ್ಗಾವಣೆಗೂ ಕೌನ್ಸೆಲಿಂಗ್ ಮಾಡಲಾಗುವುದು, ಬೆಂಗಳೂರಿನಲ್ಲಿ 5 ವರ್ಷಕ್ಕಿಂತ ಹೆಚ್ಚು ಅವಧಿ ಕೆಲಸ ಮಾಡಿದರೆ ಹೊರ ಜಿಲ್ಲೆಗಳಿಗೆ ವರ್ಗಾವಣೆ ಮಾಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಎಫ್‌ಡಿಎ ಹೊರತುಪಡಿಸಿ ಸಬ್ ರಿಜಿಸ್ಟ್ರಾರ್ ಗಳಿಗೆ ವರ್ಗಾವಣೆ ಆಗಲಿದೆ, ಕಾರ್ಪೊರೇಷನ್ ಪ್ರದೇಶದ ವ್ಯಾಪ್ತಿಗೆ ಬರುವ ಸಬ್ ರಿಜಿಸ್ಟಾರ್ ಗಳಿಗೆ ವರ್ಗಾವಣೆ ಕೌನ್ಸೆಲಿಂಗ್ ಅನ್ನು ಇಲಾಖೆಯೇ ನೋಡಿಕೊಳ್ಳಲಿದೆ ಎಂದು ತಿಳಿಸಿದರು.
ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ಕಡ್ಡಾಯ ಜೀವ ವಿಮಾ ಯೋಜನೆಯ ವಿಮಾದಾರರಿಗೆ 2018-20ರ ವಾರ್ಷಿಕ ಅವಧಿಗೆ ಲಾಭಾಂಶವನ್ನು ಘೋಷಿಸುವುದು. 5ನೇ ರಾಜ್ಯ ಹಣಕಾಸು ಆಯೋಗದ ಅವಧಿಯನ್ನು ಫೆ. 28 2025 ರವರೆಗೆ ವಿಸ್ತರಿಸಲು ಒಪ್ಪಿಗೆ ನೀಡಲಾಗಿದೆ ಎಂದು ವಿವರಿಸಿದರು.
ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆ ಹಂತ-2. ನ್ನು ರಾಜ್ಯದ 10 ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಮೊತ್ತ 2000 ಕೋಟಿ ರೂ.ಗಳ ಯೋಜನಾ ಅಂದಾಜಿನಲ್ಲಿ ಸರ್ಕಾರದ ಪಾಲಿನ ಶೇ.7.5ರಷ್ಟು ಮೊತ್ತ 150 ಕೋಟಿ ರೂ.ಗಳು, ಮಹಾನಗರ ಪಾಲಿಕೆಯ ಸ್ವಂತ ಸಂಪನ್ಮೂಲದಿಂದ ಶೇ.7.5ರಷ್ಟು ಮೊತ್ತ 150 ಕೋಟಿ ರೂ.ಗಳು ಹಾಗೂ ಯುಐಡಿಎಫ್ ನಿಂದ ಸಾಲದ ರೂಪದಲ್ಲಿ ಶೇ.85 ರಷ್ಟು ಮೊತ್ತ 1700 ಕೋಟಿ ರೂ.ಗಳಲ್ಲಿ 2024-25ನ ಸಾಲಿನಿಂದ 2026-27ನೇ ಸಾಲಿನವರೆಗೆ ಮೂರು ವರ್ಷಗಳ ಅವಧಿಯಲ್ಲಿ ಪೌರಾಡಳಿತ ನಿರ್ದೇಶನಾಲಯದಿಂದ ರಾಜ್ಯ ಮಟ್ಟದಲ್ಲಿ ಟೆಂಡರ್ ಕರೆದು ಅನುಷ್ಠಾನಗೊಳಿಸಲು ಸಚಿವ ಸಂಪುಟ ಅನಮೋದನೆ ನೀಡಿದೆ.
ಜುಲೈ 8 ಮತ್ತು 9ರಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ, ಕಾರ್ಯನಿರ್ವಹಣಾಧಿಕಾರಿಗಳ ಸಭೆ ನಡೆಸಲು ಸಂಪುಟ ಒಪ್ಪಿಗೆ ಸೂಚಿಸಿದೆ. ವಿಷಯಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆ ಸಿಎಂ ನಡೆಸಲಿದ್ದಾರೆ ಎಂದು ಹೇಳಿದರು.
ಕಾವೇರಿ 2.0 ತಂತ್ರಾಂಶ ಅನುಷ್ಟಾಕ್ಕೆ ಬಂದಿದ್ದರೂ ಸಹ ಸಬ್ ರಿಜಿಸ್ಟ್ರಾರ್ ಕಛೇರಿಗಳಲ್ಲಿ ಭ್ರಷ್ಟಾಚಾರ ಲಂಚದ ಹಣ ವಸೂಲಿ ಮಾಡುವುದಂತೂ ನಿಂತಿಲ್ಲ. ಸರ್ಕಾರ ಭ್ರಷ್ಟಾಚಾರ ಹಾಗೂ ಅಕ್ರಮ ತಡೆಗಟ್ಟಲು ಹೊಸ ನೀತಿಜಾರಿ ಮಾಡಿದೆ. ಇನ್ನಾದರೂ ಭ್ರಷ್ಟಾಚಾರ ನಿಯಂತ್ರಣವಾಗಲಿದೆಯಾ ಎಂಬುವುದು ಕಾದುನೋಡಬೇಕಿದೆ.!