ಪೊಲೀಸ್ ಇಲಾಖೆಯಿಂದ “ಮಕ್ಕಳ ಕಾನೂನುಗಳ ಬಗ್ಗೆ ಅರಿವು ಕಾರ್ಯಕ್ರಮ.”
ಶಿಡ್ಲಘಟ್ಟ: ಪ್ರಸ್ತುತ ದೇಶ ತುಂಬಾ ಅಭಿವೃದ್ದಿ ಪಥದಲ್ಲಿ ಸಾಗುತ್ತಿದೆ. ಸ್ವಾತಂತ್ರ್ಯ ಬಂದಾಗ ದೇಶ ಹೇಗಿತ್ತು. ಈಗ ಹುಟ್ಟಿದ ಮಗುವಿಗೂ ಆಧಾರ್ ಕಾರ್ಡು ನೀಡುವ ವ್ಯವಸ್ಥೆಯಿದೆ. ಹಿಂದೆ ಅಸ್ಪ್ರುಶ್ಯತೆ ಅರಾಜಕತೆಯಿತ್ತು. ಇದು ಒಬ್ಬ ವ್ಯಕ್ತಿಯ ಸ್ವಾತಂತ್ರ್ಯವಲ್ಲ, ಹಿಟ್ಲರ್ ದರ್ಬಾರ್ ಅಲ್ಲ. ಶೋಷಿತ ವರ್ಗಗಳು, ಸಾಮಾನ್ಯ ವರ್ಗ, ಬಡವರ ಸಬಲೀಕರಣ, ಕಲ್ಯಾಣಕ್ಕಾಗಿ ಸರ್ಕಾರ ಅನೇಕ ಯೋಜನೆಗಳು ಜಾರಿಗೆ ತಂದಿದೆ. ಜನರ ರಕ್ಷಣೆಗೆ ಕಾನೂನುಗಳು ತಂದಿದೆ. ಸಂವಿಧಾನದಿಂದ ನಾವೆಲ್ಲರೂ ಇದ್ದೇವೆ. ಪ್ರತಿಯೊಬ್ಬರೂ ಸಂವಿಧಾನ ಓದಬೇಕು ದೇಶದ ಕಾನೂನುಗಳು ಬಗ್ಗೆ ತಿಳಿದುಕೊಳ್ಳಬೇಕು ಎಂದು ಸರ್ಕಲ್ ಇನ್ಸ್ ಪೆಕ್ಟರ್ ಎಂ. ಶ್ರೀನಿವಾಸ್ ತಿಳಿಸಿದರು.
ನಗರದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ “ಮಕ್ಕಳ ಕಾನೂನುಗಳ ಬಗ್ಗೆ ಅರಿವು” ಕಾರ್ಯಕ್ರಮದಲ್ಲಿ ಭಾಗವಹಿಸಿ ಜ್ಯೋತಿ ಬೆಳಗಿಸುವ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದರು. ಇಂದಿನ ಯುವಕ – ಯುವತಿಯರು ಸಮಾಜದ ಅಡಿಗಲ್ಲುಗಳು. ದೇಶದ ಕಾನೂನುಗಳು ಬಗ್ಗೆ ತಿಳಿದುಕೊಳ್ಳಬೇಕು ಸಂವಿಧಾನದ ಅರ್ಟಿಕಲ್ಸ್ ಓದಬೇಕು. ಜೊತೆಗೆ ವಾಹನ ಚಾಲನೆ ಪರವಾನಗಿ, ಇನ್ಸೂರೆನ್ಸ್, ಆರ್.ಸಿ. ಎಲ್ಲಾ ದಾಖಲೆಗಳು ಹೊಂದಿರಬೇಕು ಜೊತೆಗೆ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಬೇಕು. ನಿಯಮಗಳು ಪಾಲಿಸದೇ ಹೋದಲ್ಲಿ ಅದಕ್ಕೆ ದುಬಾರಿ ದಂಡಗಳು ವಿಧಿಸಲಾಗುವುದು. ಪ್ರತಿಯೊಬ್ಬರು ಕಾನೂನು ಪಾಲಿಸಬೇಕು ಗೌರವಿಸಬೇಕು. ಕಾಲೇಜು ವ್ಯಾಸಂಗದ ಸಮಯದಲ್ಲಿ ತಮ್ಮ ಭಾವನೆಗಳನ್ನು ಹತೋಟಿಯಲ್ಲಿ ಇಟ್ಟುಕೊಂಡು ಪೋಷಕರು ತಮ್ಮ ಭವಿಷ್ಯವನ್ನು ಉಜ್ವಲ ಮಾಡಿಕೊಳ್ಳಲು ಪರಿಶ್ರಮ ವಹಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಬಾಲ್ಯ ವಿವಾಹ ಮತ್ತು ಮೂಢನಂಬಿಕೆಗಳು ಸಮಾಜವನ್ನು ಬುಡಮೇಲು ಮಾಡುತ್ತವೆ. ನಿಮ್ಮ ತಂದೆ ತಾಯಿ ಮತ್ತು ಪೋಷಕರು ನಿಮ್ಮ ಮೇಲೆ ಅಪಾರ ನಂಬಿಕೆ ಮತ್ತು ಭರವಸೆಯನ್ನು ಇಟ್ಟಿರುತ್ತಾರೆ. ಅವರ ನಂಬಿಕೆಗೆ ತಕ್ಕಂತೆ ನೀವು ಶಿಕ್ಷಣವನ್ನು ಪಡೆಯಬೇಕು. ಉತ್ತಮ ಸಹಪಾಠಿಗಳನ್ನು, ಸ್ನೇಹಿತರನ್ನು ಹೊಂದಿರಬೇಕು. ಕಾನೂನು ತಿಳುವಳಿಕೆ ಪಡೆಯಲು ಹಾತೊರೆಯಬೇಕು. ಸಂವಿಧಾನದ ಮೇಲೆ ಗೌರವ ಹೊಂದಿರಬೇಕು. ಶಿಕ್ಷಕರು, ಉಪನ್ಯಾಸಕರು, ಹಿರಿಯರು ಮತ್ತು ನೆರೆಹೊರೆಯವರ ಮೇಲೆ ಪ್ರೀತಿ ಮತ್ತು ವಿಶ್ವಾಸ ಇಟ್ಟಿರಬೇಕು. ವೈಭವ ಜೀವನ ಕೇವಲ ಕ್ಷಣಿಕ. ಬಾಲ್ಯಾವಸ್ಥೆಯಲ್ಲಿ ನಿಮ್ಮ ತಂದೆ ತಾಯಿ ಹೇಳಿದಂತೆ ಕೇಳಬೇಕು. ಪ್ರೌಢಾವಸ್ಥೆಯಲ್ಲಿ ಗುರುಹಿರಿಯರು ಹೇಳಿದಂತೆ ಕೇಳಬೇಕು. ಕಾಲೇಜು ಶಿಕ್ಷಣ ನಿಮ್ಮ ಬದುಕಿನ ಅಮೂಲ್ಯ ತಿರುವು. ಪದವಿ ಶಿಕ್ಷಣ ಸಮಯದಲ್ಲಿ ನಿಮ್ಮ ಗುರಿಯನ್ನು ತಲಪುವ ಮತ್ತು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳುವ ಅಪೂರ್ವ ಅವಕಾಶ. ತಪಸ್ಸಿನಂತೆ ಪದವಿಯನ್ನು ಮುಗಿಸಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡು ಉನ್ನತ ಅಧಿಕಾರಿಗಳಾಗಿ ನಿಮ್ಮ ಬದುಕುಗಳನ್ನು ರೂಪಿಸಿಕೊಳ್ಳಬೇಕು ಎಂದರು.
ವಿದ್ಯಾರ್ಥಿಗಳನ್ನು ನಾನು ಪ್ರೀತಿಯಿಂದ ಕಾಣುತ್ತೇನೆ. ಅದೇ ರೀತಿ ನೀವು ಯಾವುದೇ ಅಕ್ರಮ ಚಟುವಟಿಕೆ ಮತ್ತು ಅನಾಗರೀಕವಾಗಿ ನಡೆದುಕೊಂಡರೆ ನಾನು ಖಂಡಿತ ಸಹಿಸುವುದಿಲ್ಲ. ಸಂವಿಧಾನ ಎಲ್ಲರಿಗೂ ಸಮಾನವಾದ ಅವಕಾಶಗಳನ್ನು ನೀಡಿದೆ. ಬಡತನ ಮತ್ತು ಸಿರಿತನ ಇರಬಹುದು . ಆದರೆ ಮನುಷ್ಯರ ನಡುವೆ ಭೇದಭಾವ ಇರಬಾರದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶ್ , ನಗರ ಪೊಲೀಸ್ ಠಾಣೆ ಪಿ.ಎಸ್.ಐ. ವೇಣುಗೋಪಾಲ್, ಹಾಗೂ ಕಾಲೇಜು ಉಪನ್ಯಾಸಕರು ಸೇರಿದಂತೆ ಸಹಾಯಕ ಸಬ್ ಇನ್ಸ್ಪೆಕ್ಟರ್ ಸ್ಪೆಕ್ಟರ್ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ: ಕೋಟಹಳ್ಳಿ ಅನಿಲ್ ಕುಮಾರ್ ಕೆ.ಎ