ಚಿಕ್ಕಬಳ್ಳಾಪುರ : ಸರ್ವ ಜನಾಂಗಕ್ಕೂ ಅವರ ಜೀವನವನ್ನು ರೂಪಿಸಿಕೊಳ್ಳಲು ಸಂಪ್ರದಾಯಿಕ ಕಸಬು ಇರುತ್ತದೆ ಅದರ ಜೊತೆಗೆ ಹೊಸ ಆವಿಷ್ಕಾರಗಳ ಕೌಶಲ್ಯಗಳನ್ನು ರೂಢಿಸಿಕೊಂಡರೆ ಜೀವನ ಮತ್ತಷ್ಟು ಉತ್ತಮವಾಗಲಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅವರು ತಿಳಿಸಿದರು.
ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಡೆದ “ವಿಶ್ವಕರ್ಮ ಜಯಂತಿ” ಕಾರ್ಯಕ್ರಮದಲ್ಲಿ ವಿಶ್ವಕರ್ಮ ನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಕೌಶಲ್ಯ ಎಂಬುದು ತಾಂತ್ರಿಕವಾಗಿ ನಿರಂತರವಾಗಿ ಬದಲಾವಣೆಯಾಗುತ್ತಿರುತ್ತದೆ. ಇರುವ ಕೌಶಲ್ಯಗಳ ಜೊತೆಗೆ ಹೊಸ ಪ್ರಯೋಗಗಳಿಂದ ನೂತನ ಆವಿಷ್ಕಾರಗಳನ್ನು ಕಾಣಬಹುದು. ವಾಸ್ತು ಶಿಲ್ಪಿಗಳನ್ನು ನಿಜವಾದ ಇಂಜಿನಿಯರ್ ಗಳು ಎಂದು ಕರೆಯಲಾಗುತ್ತದೆ. ದೈವಿಕ ವಾಸ್ತುಶಿಲ್ಪಿ ಮತ್ತು ಕುಶಲಕರ್ಮಿ ಎಂದು ಪರಿಗಣಿಸಲ್ಪಟ್ಟ ಭಗವಾನ್ ವಿಶ್ವಕರ್ಮನನ್ನು ಗೌರವಿಸುವ ಮಹತ್ವದ ದಿನವಾಗಿ ವಿಶ್ವಕರ್ಮ ಜಯಂತಿಯನ್ನು ಆಚರಿಸಲಾಗುತ್ತದೆ. ಉತ್ಪಾದನಾ ಕೆಲಸಗಾರರು, ಎಂಜಿನಿಯರ್‌ಗಳು, ವಾಸ್ತುಶಿಲ್ಪಿಗಳು, ಯಂತ್ರಶಾಸ್ತ್ರಜ್ಞರು ಮತ್ತು ಕುಶಲಕರ್ಮಿಗಳಂತಹ ವಿವಿಧ ವೃತ್ತಿಯಲ್ಲಿರುವ ಜನರಿಗೆ, ಈ ಆಚರಣೆಯು ಬಹಳ ಮುಖ್ಯವಾಗಿದೆ. ಸರ್ವಧರ್ಮದವರಿಗೂ ವಾಸ್ತುಶಿಲ್ಪಿಗಳು ಬೇಕಾಗಿದ್ದಾರೆ. ಸಮಾಜದಲ್ಲಿ ವಿಶ್ವಕರ್ಮ ಸಮುದಾಯದವರು ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಹಾಗೂ ಆರ್ಥಿಕವಾಗಿ ಸಬಲರಾಗಬೇಕು. ಈ ಸಮುದಾಯದ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಶಿಕ್ಷಣವನ್ನೇ ಶಕ್ತಿಯನ್ನಾಗಿಸಿಕೊಂಡು ತಮ್ಮ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು. ಜಿಲ್ಲೆಯಲ್ಲಿ ಸಮುದಾಯದ ಅಭಿವೃದ್ಧಿಗೆ ಸೂಲಿಕುಂಟೆಯ ಬಳಿ 7 ಎಕರೆಯ ಭೂಮಿ ಮಂಜೂರು ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ವಿಶ್ವಕರ್ಮ ಸಂಘದ ಅಧ್ಯಕ್ಷ ಸಿ.ಬಿ ನವೀನ್ ಕುಮಾರ್ ಅವರು ಮಾತನಾಡಿ ಬ್ರಹ್ಮ ಇಡಿ ಬ್ರಹ್ಮಾಂಡವನ್ನೇ ಸೃಷ್ಟಿಸಿದನು ಎಂಬುದನ್ನು ಹಿಂದೂ ಧರ್ಮದ ಗ್ರಂಥಗಳು ಹೇಳುತ್ತವೆ. ಅದೇ ರೀತಿ ಈ ಬ್ರಹ್ಮಾಂಡವನ್ನ ಒಂದು ರೂಪಕ್ಕೆ ಇಳಿಸಿದ್ದು ವಿಶ್ವಕರ್ಮ ಎಂದು ನಂಬಲಾಗಿದೆ. ಹೀಗಾಗಿ ವಿಶ್ವಕರ್ಮ ಜಯಂತಿಯೂ ಹುಟ್ಟಿಕೊಂಡಿತು. ಸ್ವರ್ಗಲೋಕದಲ್ಲಿ ದೇವತೆಗಳಿಗೆ ಅರಮನೆ ನಿರ್ಮಿಸಿದವನು ಈ ವಿಶ್ವಕರ್ಮ, ದೇವರ ಆಯುಧಗಳು ಅವರ ವಾಹನಗಳ ನಿರ್ಮಾತೃ ಕೂಡ ಇದೇ ವಿಶ್ವಕರ್ಮ ಎಂದು ತಿಳಿಸಿದರು.
ಅಕ್ಷರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಬಿ.ವಿ ಪ್ರಕಾಶ್ ವಿಶ್ವಕರ್ಮ ಜಯಂತಿಯ ಕುರಿತು ಉಪನ್ಯಾಸ ನೀಡಿದರು. ಈ ವೇಳೆಯಲ್ಲಿ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು ಹಾಗೂ ಸಮುದಾಯದ ಹಿರಿಯ ಮುಖಂಡರಾದ ಗೋವಿಂದ ಚಾರಿ, ಶ್ರೀನಿವಾಸ ಚಾರಿ, ಚಂದ್ರ ಶೇಖರ್, ಯತೀಶ್ ರವರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಯೋಜನ ನಿರ್ದೇಶಕರಾದ ಈಶ್ವರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ ರವಿಕುಮಾರ್, ಸಂಘಟನಾ ಕಾರ್ಯದರ್ಶಿ ಎನ್. ಸುಬ್ರಹ್ಮಣ್ಯಚಾರಿ, ವಿಶ್ವಕರ್ಮ ಮಹಿಳಾ ಸಂಘದ ಅಧ್ಯಕ್ಷ ಸುಬ್ಬಲಕ್ಷ್ಮಿ ಬ್ರಹ್ಮಚಾರಿ, ಗೌರವಾಧ್ಯಕ್ಷ ಜಮುನಾ ರಾಮಕೃಷ್ಣ ಚಾರಿ, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಸಮುದಾಯದ ಮುಖಂಡರಾದ ಮಂಜುನಾಥ ಚಾರಿ, ಗೋಪಾಲ ಚಾರಿ, ಶ್ರೀ ಕೃಷ್ಣ, ನಂಜುಡಯ್ಯ, ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.