Tuesday, December 24, 2024
Homeಜಿಲ್ಲೆರಾಜಕೀಯ ಉಳಿವಿಗೋಸ್ಕರ, ಕೋಮುವಾದಿ ಪಕ್ಷವನ್ನ ಅಪ್ಪಿಕೊಂಡು ಹೋಗ್ತಾರಲ್ಲ ನಾಚಿಕೆಯಾಗಬೇಕು: ಸಿ.ಎಂ.‌ಸಿದ್ದರಾಮಯ್ಯ

ರಾಜಕೀಯ ಉಳಿವಿಗೋಸ್ಕರ, ಕೋಮುವಾದಿ ಪಕ್ಷವನ್ನ ಅಪ್ಪಿಕೊಂಡು ಹೋಗ್ತಾರಲ್ಲ ನಾಚಿಕೆಯಾಗಬೇಕು: ಸಿ.ಎಂ.‌ಸಿದ್ದರಾಮಯ್ಯ

ದೇಶ, ರಾಜ್ಯದ ಜನರಿಗೆ ಬಿಜೆಪಿ, ನರೇಂದ್ರಮೋದಿ ಖಾಲಿ ಚೊಂಬು ಕೊಟ್ಟಿದ್ದಾರೆ.!

ಶಿಡ್ಲಘಟ್ಟದಲ್ಲಿ ನಡೆದ ಬೃಹತ್  ರೋಡ್  ಶೋ ಕಾರ್ಯಕ್ರಮದಲ್ಲಿ ಗುಡುಗು.

ಶಿಡ್ಲಘಟ್ಟ : 2024 ರ ಲೋಕಸಭಾ ಚುನಾವಣೆ ಹಿನ್ನೆಲೆ ಇಂದು ರೇಷ್ಮೆ ನಗರ ಶಿಡ್ಲಘಟ್ಟದಲ್ಲಿ ರಾಜ್ಯದ‌ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಲಾರ ಲೋಕಸಭಾ ಕಾಂಗ್ರೇಸ್ ಅಭ್ಯರ್ಥಿ ಕೆ.ವಿ ಗೌತಮ್ ಪರ ಬೃಹತ್ ರೋಡ್ ಶೋ ನಡೆಸಿ ಮತಯಾಚಿಸಿದರು.

ನಗರದ ಬಸ್ ನಿಲ್ದಾಣದ ಸಮೀಪದಿಂದ ಟಿ ಬಿ‌ ರಸ್ತೆಯಲ್ಲಿ ರೋಡ್ ಶೋ ನಡೆಸಿ ಪ್ರಚಾರ ವಾಹನದಲ್ಲಿ ಮಾತನಾಡಿದ ಅವರು ಹತ್ತು ವರ್ಷಗಳಿಂದ ನರೇಂದ್ರ ಮೋದಿ ದೇಶದ ಪ್ರಧಾನಮಂತ್ರಿಯಾಗಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರು ಅನೇಕ ಭರವಸೆಗಳನ್ನು ಕೊಟ್ಟಿದ್ದರು 10 ವರ್ಷಗಳಾದರೂ ಕೂಡ ಹತ್ತು ವರ್ಷಗಳಾದರೂ ಕೂಡ ಅವರು ಕೊಟ್ಟಿರುವಂತಹ ಯಾವುದೇ ಭರವಸೆಗಳು ಈಡೇರಿಸಲಿಲ್ಲ. ವಿದೇಶದಲ್ಲಿ ಕಪ್ಪು ಹಣವಿದೆ. ಕಾಂಗ್ರೆಸ್ನ ನಾಯಕರು ಶ್ರೀಮಂತರು ಕಪ್ಪು ಹಣ ಇಟ್ಟಿದ್ದಾರೆ .ಆ ಹಣವನ್ನೆಲ್ಲಾ ವಾಪಸ್ ತೆಗೆದುಕೊಂಡು ಬರುತ್ತೇನೆ.‌ ಎಲ್ಲರ ಖಾತೆಗಳಿಗೆ 15 ಲಕ್ಷ ಹಾಕುವುದಾಗಿ ಹೇಳಿದ್ದರು ನಿಮ್ಮ ಖಾತೆಗಳಿಗೆ 15 ಲಕ್ಷ ಬಂದಿದೆಯಾ.? ಆ‌ ಹಣ ಬರಲಿಲ್ಲ. ಹಾಗಾದ್ರೆ ನರೇಂದ್ರ ಮೋದಿಯವರು 10 ವರ್ಷಗಳಿಂದ ಸುಳ್ಳನ್ನೇ ಹೇಳಿಕೊಂಡು ಬಂದು ನಮಗೆಲ್ಲಾ ಚೊಂಬು ಕೊಟ್ಟಿದ್ದಾರೆ. ದೇಶದ ನಿರುದ್ಯೋಗ ಯುವಕ ಯುವತಿಯರಿಗೆ ವರ್ಷಕ್ಕೆ ಎರಡು ಕೋಟಿ ಉದ್ಯೋಗಗಳನ್ನು ಸೃಷ್ಟಿ ಮಾಡುತ್ತೇನೆ. ನಿರುದ್ಯೋಗಿಗಳ ಸಮಸ್ಯೆಯನ್ನು ಬಗೆಹರಿಸುತ್ತೇನೆ ಎಂದು ಜನರಿಗೆ ಆಶ್ವಾಸನೆ ಕೊಟ್ಟು ಭ್ರಮಾ ಲೋಕವನ್ನು ಸೃಷ್ಟಿ ಮಾಡಿದ್ದರು. ವರ್ಷಕ್ಕೆ ಎರಡು ಕೋಟಿ ಉದ್ಯೋಗವಾದರೆ ಹತ್ತು ವರ್ಷಕ್ಕೆ 20 ಕೋಟಿಗಳು ಉದ್ಯೋಗಗಳನ್ನು ಸೃಷ್ಟಿ ಮಾಡಬೇಕಾಗಿತ್ತು. ಉದ್ಯೋಗ ಸೃಷ್ಟಿ ಮಾಡಿಲ್ಲ ಉದ್ಯೋಗ ಕೊಡಿ ಎಂದು ಕೇಳಿದರೆ ಪಕೋಡ ಮಾರಕ್ಕೆ ಹೋಗಿ ಎಂದು ಹೇಳುತ್ತಾರೆ. ವಿದ್ಯಾವಂತರಿಗೆ ಪಕೋಡ ಮಾರಕ್ಕೆ ಹೋಗಿ ಎಂದು ಹೇಳಿ ಅತ್ಯಂತ ಬೇಜವಬ್ದಾರಿ ತನದಿಂದ ಹೇಳಿಕೆಯನ್ನು ಕೊಟ್ಟಿದ್ದಾರೆ. ಇವರು ಈ ದೇಶದ ಪ್ರಧಾನ ಮಂತ್ರಿ ಆಗಲಿಕ್ಕೆ ಲಾಯಕ್ಕಾ ಅಥವಾ ನಾಲಾಯಕ್ಕಾ ಎಂದು ಕಟುವಾಗಿ ಪ್ರಶ್ನೆ‌ ಮಾಡಿದರು.

ನಾಲಾಯಕ್ ಆದ ಮೇಲೆ ಅವರ ಪಾರ್ಟಿಗೆ ವೋಟ್ ಹಾಕ್ತಿರಾ.? ರೈತರ ಆದಾಯವನ್ನು ದುಪ್ಪಟ್ಟು ಮಾಡುತ್ತೇನೆ ಎಂದು ಹೇಳಿದ್ದರು. ಪೆಟ್ರೋಲ್ ಬೆಲೆ 71 ಇತ್ತು ಡೀಸೆಲ್ ಬೆಲೆ 60 ರೂಪಾಯಿಗಳು ಇತ್ತು. ಇವತ್ತು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 100 ರೂಪಾಯಿಗಳಾಗಿದೆ. 414 ರೂಪಾಯಿಗಳು ಇದ್ದಂತಹ ಗ್ಯಾಸ್ ಬೆಲೆ ರೂ 950 ರೂಪಾಗಳಾಗಿದೆ. ರೈತರ ರಸಗೊಬ್ಬರಗಳ ಬೆಲೆ ಎರಡು ಪಟ್ಟು ಜಾಸ್ತಿಯಾಗಿದೆ ಅಡುಗೆ ಎಣ್ಣೆ ಬೆಲೆ ಜಾಸ್ತಿಯಾಗಿದೆ. ಇದಕ್ಕೆಲ್ಲಾ ಮೋದಿಯೇ ಕಾರಣ.‌ ಅಚ್ಚೆ ದಿನ ಬರುವುದಾಗಿ ಹೇಳಿದ್ದರು ಆದರೆ ಒಳ್ಳೆಯ ದಿನಗಳು ಬರಲಿಲ್ಲ ಕೆಟ್ಟ ದಿನಗಳು ಬಂದಿದೆ. ಇದಕ್ಕಾಗಿಯೇ ನಾವು ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮ‌ ಪ್ರಣಾಳಿಕೆಯಲ್ಲಿ ಹೇಳಿದಂತೆ ಜನರಿಗೆ ಎಲ್ಲಾ ಗ್ಯಾರೆಂಟಿಗಳನ್ನು ನಾವು ಅಧಿಕಾರಕ್ಕೆ ಬಂದ ಕೂಡಲೇ ಜಾರಿಗೊಳಿಸಿದ್ದೇವೆ. ನಾನು ಎರಡು ಬಜೆಟನ್ನು ಮಂಡಿಸಿದ್ದೇನೆ ಎರಡು ಬಜೆಟ್ ನಲ್ಲೂ ಸುಮಾರು 82 ಭರವಸೆಗಳನ್ನು ಈಡೇರಿಸಿದ್ದೇವೆ. ಪ್ರಮುಖವಾಗಿ ಐದು ಗ್ಯಾರಂಟಿಗಳಿಗೆ ನಾನು ಮತ್ತು ಡಿಕೆ ಶಿವಕುಮಾರ್ ಇಬ್ಬರು ಸಹಿಯನ್ನು ಹಾಕಿ ಗ್ಯಾರಂಟಿ ಕಾರ್ಡನ್ನು ಕೊಟ್ಟಿದ್ದೆವು ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದೇವೆ.

ಅನ್ನಭಾಗ್ಯ ಕಾರ್ಯಕ್ರಮಕ್ಕೆ ಪುಡ್ ಕಾರ್ಪೋರೇಷನ್ ಅವರು ಅಕ್ಕಿ ಕೊಡುವುದಕ್ಕೆ ಮೊದಲು ಒಪ್ಪಿಕೊಂಡು ಪತ್ರವನ್ನು ಕೊಟ್ಟಿದ್ದರು. ಅಕ್ಕಿ ಇದ್ದರೂ ಸಹ ಬಿಜೆಪಿ ಹಕ್ಕಿಯನ್ನು ಕೊಡಲಿಲ್ಲ ಬಡವರಿಗೆ ಅಕ್ಕಿ‌ಕೊಟ್ಟರೆ ಸಿದ್ದರಾಮಯ್ಯ ಅವರಿಗೆ ಹೆಸರು ಬರುತ್ತೆ ಬಡವರೆಲ್ಲಾ ಕಾಂಗ್ರೇಸ್ ಗೆ ಓಟ್ ಹಾಕ್ತಾರೆ ಎಂದು ಅಕ್ಕಿಯನ್ನು ಕೊಡಲಿಲ್ಲ. ನಾವು ದುಡ್ಡು ಕೊಡ್ತೀವಿ ಅಂದ್ರೂ ಕೊಡಲಿಲ್ಲ ಎಂದು ವಾಗ್ದಾಳಿ ನಡೆಸಿದರು.

ದೇವೇಗೌಡರಿಗೆ ನಾಚಿಕೆಯಾಗಬೇಕೆಂದು ವಾಗ್ದಾಳಿ: ದೇಶದ ಜನರಿಗೆ ಕರ್ನಾಟಕದ ಜನರಿಗೆ ಬಿಜೆಪಿ‌ ಖಾಲಿ ವೊಂಬು ಕೊಟ್ಟಿದೆ ದೇವೇಗೌಡ್ರು ನಿನ್ನೆ ಚಿಕ್ಕಬಳ್ಳಾಪುರ, ಬೆಂಗಳೂರಲ್ಲೂ ಎರಡು ಕಡೆ ನರೇಂದ್ರ ಮೋದಿಯವರ ಕಾರ್ಯಕ್ರಮದಲ್ಲಿ ಭಾಗವಹಿಸಿ ಖಾಲಿ‌ ಚೊಂಬನ್ನು ತೋರಿಸಿ ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಕಾಂಗ್ರೇಸ್ ಸರ್ಕಾರ ಚೊಂಬು ಕೊಟ್ಟಿತ್ತು. ಆದರೆ ನರೇಂದ್ರ ಮೋದಿಯವರು ಅದನ್ನ ಅಕ್ಷಯ ಪಾತ್ರೆಯನ್ನಾಗಿ ಮಾಡಿದ್ದಾರೆಂದು ಮಾಜಿ ಪ್ರಧಾನ ಮಂತ್ರಿ ಸುಳ್ಳು ಹೇಳುವುದಕ್ಕೆ ಇತಿಮಿತಿ ಇರಬೇಕಲ್ಲವೇ.? ಹಾಲಿ ಪ್ರಧಾನಿ – ಮಾಜಿ ಪ್ರಧಾನಿ ಪೈಪೋಟಿಗೆ ಬಿದ್ದು ಚಿಕ್ಕಬಳ್ಳಾಪುರದಲ್ಲಿ ಸುಳ್ಳುಗಳೇ ಹೇಳಿದ್ದಾರೆ. ಕಳೆದ ಬಾರಿ 25 ಜನ ಬಿಜೆಪಿಯವರು ಸುಮಲತಾ, ಪ್ರಜ್ವಲ್ ರೇವಣ್ಣ, ಸಂಸದರಾಗಿದ್ದರು.‌ ಜೆಡಿಎಸ್ ಮತ್ತು ಬಿಜೆಪಿ ಹಾವು ಮುಂಗಸಿಯಂತೆ ಇತ್ತು. ಈಗ ದೇವೇಗೌಡರು ನರೇಂದ್ರ ಮೋದಿಯವರನ್ನು ಹಾಡಿ ಹೊಗಳಿ ಬಾಯಿ ಬಾಯಿ ಆಗ್ಬಿಟ್ಟಿದ್ದಾರೆ. ಇವರನ್ನ ನಂಬುತ್ತೀರಾ.? ಇವರನ್ನ ನಂಬಬಾರದು ದೇವೇಗೌಡ್ರು ಯಾಕೆ ಇಷ್ಟೊಂದು ಕೀಳು ಮಟ್ಟಕ್ಕೆ ಇಳಿದುಬಿಟ್ಟಿದ್ದಾರೆಂದು ನನಗಂತೂ ಗೊತ್ತಿಲ್ಲ. ರೈತನ ಮಗ ದೇಶಕ್ಕೆ ಪ್ರಧಾನಿಯಾಗಿದ್ದರು ಅಂತ ಅಂದುಕೊಂಡು ನಾವೆಲ್ಲಾ ಖುಷಿಪಡುತ್ತಿದ್ದೇವೆ ಆದರೆ ತುಂಬಾ ಕೀಳು ಮಟ್ಟ ಇಳಿದು ಬಿಟ್ಟಿದ್ದಾರೆ.‌ ಯಾವುದೇ ಕಾರಣಕ್ಕೆ ನರೇಂದ್ರ‌ಮೋದಿಯವರು ಅಧಿಕಾರಕ್ಕೆ ಬರುವುದಿಲ್ಲವೆಂದು ದೇವೆಗೌಡರೇ ಹೇಳಿದ್ದರು. ಜಾತ್ಯತೀತ ಮನೋಭಾವ ಏನಾಯಿತು ಈಗ ರಾಜಕೀಯ ಉಳಿವಿಗೋಸ್ಕರ, ಸ್ವಾರ್ಥಕೋಸ್ಕರ ಕೋಮುವಾದಿ ಪಕ್ಷವನ್ನ ಅಪ್ಪಿಕೊಂಡು, ತಬ್ಬಿಕೊಂಡು ಹೋಗ್ತಾ ಇದ್ದೀರಾ ಅಲ್ವಾ ನಿಮಗೆ ನಾಚಿಕೆ ಆಗಲ್ವಾ ಎಂದು ಗುಡುಗಿದರು.

ಬಿಜೆಪಿ ಮತ್ತು ಜೆಡಿಎಸ್ ಈಗ ಮೈತ್ರಿ ಮಾಡಿಕೊಂಡಿದ್ದು, ಕಾಂಗ್ರೇಸ್ ಬಗ್ಗೆ ಅವರಿಗೆ ಹೆದರಿಕೆ ಇದೆ, ಬಿಜೆಪಿ‌ ಜೊತೆ ಸೇರಿಕೊಂಡು. ದೇವೇಗೌಡ್ರು ಮೂರು ಸೀಟ್ ತಗೊಂಡಿದ್ದಾರೆ. ಅದರಲ್ಲೂ ಒಂದು ಸೀಟು ಅಳಿಯನಿಗೆ ಕೊಡಿಸಿದ್ದಾರೆ, ಮತ್ತೊಂದು ಮಗನಿಗೆ ಮತ್ತೊಂದು ಮೊಮ್ಮಗನಿಗೆ, ಕೋಲಾರ ಲೋಕಸಭಾ ಕ್ಷೇತ್ರ ಮೀಸಲು ಕ್ಷೇತ್ರವಾಗದಿದ್ದರೆ ಇಲ್ಲಿಯೂ ಸಹ ಮತ್ತೊಬ್ಬ ಮೊಮ್ಮಗನನ್ನು‌ ನಿಲ್ಲಿಸುತ್ತಿದ್ದರು. ಡೋಂಗಿಗಳಿಗೆ ಮತ ಹಾಕಬೇಡಿ ಹಾಕಬೇಡಿ ಎಂದರು.

ಕಾಂಗ್ರೇಸ್ ಸರ್ಕಾರ ನುಡಿದಂತೆ ನಡಿದ್ದೇವೆ: ಅನ್ನಭಾಗ್ಯ, ಮೈತ್ರಿ, ಮನಸ್ವಿನಿ, ಕ್ಷೀರಭಾಗ್ಯ, ಇಂದಿರಾ ಕ್ಯಾಂಟೀನ್, ವಿದ್ಯಾಸಿರಿ, ಶಾದಿ ಭಾಗ್ಯ , ಶ್ಯೂ ಭಾಗ್ಯ ಎಲ್ಲಾ ಕಾರ್ಯಕ್ರಮಗಳು ಮಾಡಿದ್ದು ಕಾಂಗ್ರೆಸ್ ಕೊಟ್ಟ ಮಾತಿನಂತೆ ಕಾಂಗ್ರೆಸ್ ನಡೆದುಕೊಂಡಿದೆ ಅದೇ ಬಿಜೆಪಿಯವರು 2018 ರಲ್ಲಿ ಕೊಟ್ಟಿರುವ ಒಂದೂ ಭರವಸೆಯೂ ಈಡೇರಸಲಿಲ್ಲ. ‌ಒಂದು ಪೈಸೆಯೂ ರೈತರ ಸಾಲ‌ ಮನ್ನಾ ಮಾಡಲಿಲ್ಲ. ಕೇಂದ್ರದಲ್ಲಿ ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಕಾಂಗ್ರೇಸ್ ಸರ್ಕಾರ ಸುಮಾರು 72 ಸಾವಿರ ಕೋಟಿ ರೂಪಾಯಿಗಳ ರೈತರ ಸಾಲವನ್ನು ಮನ್ನಾ ಮಾಡಿದೆ. ಕರ್ನಾಟಕದಲ್ಲಿ ನಮ್ಮ ಸರ್ಕಾರ 8165 ಕೋಟಿ ರುಪಾಯಿಗಳ ರೈತರ ಸಾಲ ಮನ್ನಾ ಮಾಡಿದ್ದೇವೆ.
ಬಿಜೆಪಿಯವರು ರೈತರ ರೈತರ ಸಾಲ ಮನ್ನಾ ಮಾಡಲಿಲ್ಲ.‌ ಅಂಬಾನಿ, ಆದಾನಿ, ಟಾಟಾ ಬಿರ್ಲಾ ಇಂತಹವರ ಸುಮಾರು‌ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ.

ಅಖಿಲ ಭಾರತ ಕಾಂಗ್ರೆಸ್ ಪಾರ್ಟಿ ಅವರು ಇವತ್ತು ಮಲ್ಲಿಕಾರ್ಜುನ ಖರ್ಗೆ ಮತ್ತು‌ ರಾಹುಲ್ ಗಾಂಧಿ ಸಹಿಯನ್ನು ಮಾಡಿ ಗ್ಯಾರಂಟಿಯನ್ನು ಕೊಟ್ಟಿದ್ದಾರೆ. ರೈತರ ಬೆಳೆಗಳಿಗೆ ಬೆಂಬಲ ಬೆಲೆ ಶೇಕಡಾ 50 ರಷ್ಟು ಹೆಚ್ಚಿಗೆ, ನರೇಗಾ ಯೋಜನೆಯಡಿ 400 ರೂಪಾಯಿಗಳು ದಿನಗೂಲಿ, ಕೇಂದ್ರದಲ್ಲಿ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮಹಿಳೆಯೊಬ್ಬರಿಗೆ ವಾರ್ಷಿಕವಾಗಿ ಒಂದು ಲಕ್ಷ ನೀಡಲಾಗುತ್ತದೆ. ಜೊತೆಗೆ ರಾಜ್ಯ ಸರ್ಕಾರ 24 ಸಾವಿರ ರೂಪಾಯಿಗಳು ಒಟ್ಟು ವಾರ್ಷಿಕವಾಗಿ 1,24,000 ನೀಡಲಾಗುತ್ತದೆ ಎಂದು ತಿಳಿಸಿದರು.‌

ನಮ್ಮ ಅಭ್ಯರ್ಥಿ ಕೆ ವಿ ಗೌತಮ್ ಅವರು ರಾಜಕೀಯ ಮನೆತನದಿಂದ ಬಂದಿದ್ದಾರೆ. ಅವರ ತಂದೆ ಬೆಂಗಳೂರಿನ ಮೇಯರ್ ಆಗಿದ್ದರು. ವಿದ್ಯಾವಂತ ಯುವಕ ಎನ್ ಎಸ್ ಯು ಐ, ಯೂತ್ ಕಾಂಗ್ರೆಸ್, ಜಿಲ್ಲಾ ಅಧ್ಯಕ್ಷ, ಇಷ್ಟೆಲ್ಲಾ ಪಕ್ಷದಲ್ಲಿ ನಿಷ್ಠಾವಂತನಾಗಿ ಕೆಲಸ ಮಾಡಿದಂತಹ ಕಾಂಗ್ರೆಸ್ ಕಟ್ಟಾಳಿಗೆ ಪಕ್ಷದಲ್ಲಿ ನಾವು ಟಿಕೆಟ್ ನೀಡಿದ್ದೇವೆ.

ಶಿಡ್ಲಘಟ್ಟಕ್ಕೆ ಹೈಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆ ರೇಷ್ಮೆ ಗೂಡಿನ ಮಾರುಕಟ್ಟೆ, ಒಳ ಚರಂಡಿ ಹಾಗೂ ಕುಡಿಯುವ ನೀರಿಗಾಗಿ 80 ಕೋಟಿ ರೂಪಾಯಿಗಳನ್ನು ನಮ್ಮ ಸರ್ಕಾರ ನೀಡಿದೆ ಇದನ್ನೆಲ್ಲಾ ಬಿಜೆಪಿ ಮಾಡಿಲಿಲ್ಲ.‌ಕುಮಾರಸ್ವಾಮಿಯೂ‌ ಮಾಡಲಿಲ್ಲ. ಜಂಗಮಕೋಟೆಯಲ್ಲಿ ಇಂಡಸ್ಟ್ರಿಯಲ್ ಎಸ್ಟೇಟ್ ಮಾಡುವುದಕ್ಕೆ ತೀರ್ಮಾನ ಮಾಡಿದ್ದೇವೆ ಎಂದರು.

ಮುಖ್ಯಮಂತ್ರಿಗಳ‌ ಆಗಮನದ ಹಿನ್ನೆಲ್ಲೆ ಪೊಲೀಸ್ ಇಲಾಖೆಯೂ‌‌ ಮುನ್ನೆಚ್ಚರಿಕೆ ಕ್ರಮಗಳು‌ ಕೈಗೊಂಡು ಯಾವುದೇ ರೀತಿಯ ಅಹಿತಕರ ಘಟನೆಗಳು‌ ನಡೆಯದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಹಿರಿಯ ಪೊಲೀಸ್ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿಗಳು ಶ್ರಮವಹಿಸಿ ಸಾರ್ವಜನಿಕರ ವಾಹನ ಸಂಚಾರಕ್ಕೆ ಅಡಚಣೆಯಾಗದಂತೆ ದಾರಿ‌ ಮಾಡಿಕೊಡಲು ಹರಸಾಹಸ‌ಪಟ್ಟರು.

ಈ ಬೃಹತ್ ರೋಡ್ ಶೋ ಕಾರ್ಯಕ್ರಮದ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಸಿ ಸುಧಾಕರ್, ಸಚಿವ ಬೈರತಿ ಸುರೇಶ್, ಆಹಾರ ಖಾತೆ ಸಚಿವ ಕೆ.ಎಚ್ ಮುನಿಯಪ್ಪ, , ಅಭ್ಯರ್ಥಿ ಕೆ ವಿ ಗೌತಮ್, ಕಾಂಗ್ರೇಸ್ ಮುಖಂಡರಾದ ಪುಟ್ಟು ಆಂಜಿನಪ್ಪ, ಸಹನ, ರಾಜೀವ್ ಗೌಡ, ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಕಾಂಗ್ರೇಸ್ ಕಾರ್ಯಕರ್ತರು ಭಾಗವಹಿಸಿದ್ದರು.

Social Media Links
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!