ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಿರುವ ಸಿದ್ದರಾಮಯ್ಯ
ಬೆಂಗಳೂರು: ಏನೂ ಗೊತ್ತಿಲ್ಲದೇ ಇರುವ ಆಯವ್ಯಯದ ಲೆಕ್ಕಾಚಾರದ ಮೂಲಪಾಠವೇ ಗೊತ್ತಿಲ್ಲದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ತಕ್ಷಣ ಸಂಪುಟದಿಂದ ಕೈಬಿಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.
ಇಂತಹವರ ಕೈಯಲ್ಲಿ ಹಣಕಾಸು ಖಾತೆ ನೀಡಿರುವುದು ಅತ್ಯಂತ ಅಪಾಯಕಾರಿ ನಿರ್ಧಾರ ಎಂದು ಅವರು ಹೇಳಿದ್ದಾರೆ. ಭಾನುವಾರದ ಪತ್ರಿಕಾಗೋಷ್ಠಿಯಲ್ಲಿ ನರೇಂದ್ರ ಮೋದಿ ಸರ್ಕಾರದಿಂದ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯವನ್ನು ಮರೆಮಾಚುವ ಹತಾಶ ಪ್ರಯತ್ನ ಮಾಡಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಾವೇ ಹೆಣೆದ ಬಲೆಯಲ್ಲಿ ಸಿಕ್ಕಿ ಹಾಕಿಕೊಡಿರುವುದು ದುರಂತ. ಸಚಿವರ ಗೊಂದಲಮಯ ಹೇಳಿಕೆಗಳ ಸಿಕ್ಕುಗಳನ್ನೆಲ್ಲ ಬಿಡಿಸುತ್ತಾ ಹೋದರೆ ಕೊನೆಗೂ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ನೀಡಿರುವುದು ಚೊಂಬು ಮಾತ್ರ ಎನ್ನುವುದು ಸಾಬೀತಾಗುತ್ತದೆ. ನಿರ್ಮಲಾ ಸೀತಾರಾಮನ್ ಅವರ ಪ್ರಕಾರ ಹಿಂದಿನ ಯುಪಿಎ ಸರ್ಕಾರ (2004-2014) ಹತ್ತು ವರ್ಷಗಳ ಅವಧಿಯಲ್ಲಿ ಕರ್ನಾಟಕಕ್ಕೆ ನೀಡಿರುವ ಅನುದಾನ ರೂ.60,779 ಕೋಟಿ. ಎನ್‌ಡಿಎ ಸರ್ಕಾರ (2014-2024) ಹತ್ತು ವರ್ಷಗಳ ಅವಧಿಯಲ್ಲಿ ನೀಡಿದ್ದ ನೀಡಿದ್ದ ಹಣ ರೂ.2,36,955 ಕೋಟಿ ಎಂದು ಸಚಿವೆ ಆರೋಪಿಸಿದ್ದಾರೆ. ಆದರೆ ಹತ್ತು ವರ್ಷಗಳ ಅವಧಿಯಲ್ಲಿ ಕೇಂದ್ರ ಸರ್ಕಾರದ ಬಜೆಟ್ ಗಾತ್ರ ಎಷ್ಟು ಪಟ್ಟು ಹೆಚ್ಚಾಗಿದೆ ಎನ್ನುವುದನ್ನು ಅವರು ಮರೆತಿದ್ದಾರೆ. ಇದು ಅವರ ಅಜ್ಞಾನವೋ, ಇಲ್ಲವೇ ಜನತೆಯ ದಾರಿ ತಪ್ಪಿಸುವ ಹುನ್ನಾರವೋ? ಎಂಬುದನ್ನು ಅವರೇ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
2013-14ರ ಕೇಂದ್ರ ಸರ್ಕಾರದ ಬಜೆಟ್ ರೂ.16,06 ಲಕ್ಷ ಕೋಟಿ. ಆಗ ಕರ್ನಾಟಕಕ್ಕೆ ಅನುದಾನದ ರೂಪದಲ್ಲಿ ರೂ. 16,428 ಕೋಟಿ ಮತ್ತು ತೆರಿಗೆ ಹಂಚಿಕೆಯಲ್ಲಿ ರೂ.15,005 ಕೋಟಿ ಹೀಗೆ ಒಟ್ಟು ರೂ.31,483 ಕೋಟಿ ನೀಡಲಾಗಿತ್ತು. ಈ ನೆರವು ಒಟ್ಟು ಬಜೆಟ್‌ನ ಶೇಕಡಾ 1.9ರಷ್ಟಾಗುತ್ತದೆ. 2024-25ರ ಅವಧಿಯ ಕೇಂದ್ರ ಸರ್ಕಾರದ ಬಜೆಟ್ ಗಾತ್ರ ರೂ.48.02 ಲಕ್ಷ ಕೋಟಿಯಾಗಿದೆ. ಈ ಅವಧಿಯಲ್ಲಿ ನಮಗೆ ಕೇಂದ್ರ ಅನುದಾನದ ರೂಪದಲ್ಲಿ ರೂ. 15,229 ಕೋಟಿ ಮತ್ತು ತೆರಿಗೆ ಹಂಚಿಕೆಯಲ್ಲಿ ರೂ.44.485 ಕೋಟಿ ನೀಡಲಾಗುತ್ತದೆ. ಇದು ಒಟ್ಟು ಬಜೆಟ್ ಗಾತ್ರದ ಶೇಕಡಾ 1.2 ರಷ್ಟಾಗುತ್ತದೆ. 2013-14ರ ಪ್ರಮಾಣದಲ್ಲಿ (ಶೇಕಡಾ 1.9)ಯೇ ಅನುದಾನ ಮತ್ತು ತೆರಿಗೆ ಹಂಚಿಕೆಯ ಹಣವನ್ನು 2024-25ರ ಅವಧಿಯಲ್ಲಿಯೂ ಕರ್ನಾಟಕಕ್ಕೆ ನೀಡಿದ್ದರೆ ಕೇಂದ್ರ ಸರ್ಕಾರದ ನೀಡುವ ಹಣದ ಮೊತ್ತ ರೂ.91,580 ಕೋಟಿಗಳಾಗುತ್ತಿತ್ತು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.