ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಅಂಗವಾಗಿ ನಂದಿ ಗಿರಿಧಾಮದಲ್ಲಿ ಸ್ಚಚ್ಚತಾ ಅಭಿಯಾನ.
ಚಿಕ್ಕಬಳ್ಳಾಪುರ : ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಪ್ರಯುಕ್ತ “ಹಸಿರು- ಸ್ವಚ್ಚ ಚಿಕ್ಕಬಳ್ಳಾಪುರ ಮತ್ತು ಪ್ಲಾಸ್ಟಿಕ್ ಮುಕ್ತ ಚಿಕ್ಕಬಳ್ಳಾಪುರ”ಕ್ಕೆ ಜಿಲ್ಲಾಡಳಿತ ಸಂಕಲ್ಪ ಮಾಡಿದ್ದು ಜಿಲ್ಲೆಯ ನಾಗರಿಕರು ಮತ್ತು ಪ್ರವಾಸಿಗರು ಸಹಕರಿಸಬೇಕು ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಬಿ.ಟಿ ಯಶ್ವಂತ್ ಕುಮಾರ್ ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಪ್ರವಾಸೋದ್ಯಮ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚಿಕ್ಕಬಳ್ಳಾಪುರ ಜಿಲ್ಲೆ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ “ವಿಶ್ವ ಪ್ರವಾಸೋದ್ಯಮ ದಿನಾಚರಣೆ”ಯ ಪ್ರಯುಕ್ತ ನಂದಿ ಗಿರಿಧಾಮದಲ್ಲಿ ಸ್ವಚ್ಚತಾ ಆಂದೋಲನಾ ಕಾರ್ಯಕ್ರಮವನ್ನು ಸ್ವಚ್ಚತಾ ಕಾರ್ಯ ಮಾಡುವ ಮೂಲಕ ಚಾಲನೆ ನೀಡಿದರು.
ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಅಂಗವಾಗಿ ಪ್ರವಾಸಿಗರಿಗೆ ನಂದಿ ಗಿರಿಧಾಮದಲ್ಲಿ ಸ್ವಚ್ಚತೆ ಕುರಿತು ಅರಿವು ಮೂಡಿಸುವ ಉದ್ದೇಶದೊಂದಿಗೆ “ಸ್ವಚ್ಚತಾ ಹೀ ಸೇವಾ ಪಾಕ್ಷಿಕ-2024” ಕಾರ್ಯಕ್ರಮ ಆಚರಿಸಿದ್ದೇವೆ. ಪ್ರವಾಸಿಗರು ಪ್ರವಾಸಿ ತಾಣಗಳಿಗೆ ಬರುವಾಗ ಪ್ರವಾಸಿ ತಾಣಗಳ ನಿಯಮಗಳು ಹಾಗೂ ನಿಬಂಧನೆಗಳನ್ನು ಪಾಲಿಸಬೇಕು. ಪ್ಲಾಸ್ಟಿಕ್ ಯುಕ್ತ ವಸ್ತುಗಳನ್ನು ಬಳಸಬಾರದು, ರಾಜ್ಯದಲ್ಲಿ ನಂದಿ ಗಿರಿಧಾಮವು ಒಂದು ಪ್ರಮುಖ ಪ್ರವಾಸಿ ತಾಣವಾಗಿದೆ. ಪ್ರವಾಸಿಗರು ಯಾವುದೇ ಅವಗಡಗಳಿಗೆ ಅವಕಾಶ ನೀಡದೆ ವೀಕ್ಷಣಾ ಕಾರ್ಯಗಳಲ್ಲಿ ಜಾಗ್ರತೆ ವಹಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಯೋಜನಾಧಿಕಾರಿ ಈಶ್ವರಪ್ಪ ಅವರು ಮಾತನಾಡಿ, ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಅಂಗವಾಗಿ ನಂದಿ ಗಿರಿಧಾಮದಲ್ಲಿ ಪ್ಲಾಸ್ಟಿಕ್ ಮುಕ್ತ ಸ್ವಚ್ಚತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಪ್ರವಾಸಿಗರು ಮತ್ತು ಸಾರ್ವಜನಿಕರು ಈ ಸ್ವಚ್ಚತಾ ಕಾರ್ಯಕ್ಕೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಹಾಗೂ ನಗರಸಭೆಯೊಂದಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು.
ಈ ವೇಳೆ ಕಲಾತಂಡಗಳು ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸುವ ಕಲೆಗಳನ್ನು ಪ್ರದರ್ಶಿಸಿದರು. ವಿಶ್ವ ಪ್ರವಾಸೋದ್ಯಮ ದಿನಾಚರಣೆ ಘೋಷ ವಾಕ್ಯವಾದ “ಪ್ರವಾಸೋದ್ಯಮ ಮತ್ತು ಶಾಂತಿ”ಯ ಬಗ್ಗೆ ಅಧಿಕಾರಿಗಳು ತಿಳಿಸಿಕೊಟ್ಟು ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಪ್ರಯುಕ್ತ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಹೇಶ್ ಕುಮಾರ್, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ನಗರ ಸಭೆ ಪೌರಾಯುಕ್ತರು, ಪ್ರವಾಸಿಗರು, ಬಿ.ಜಿ.ಎಸ್ ಪಿಯು ಕಾಲೇಜ್ ನ ಎನ್.ಎಸ್.ಎಸ್ ವಿದ್ಯಾರ್ಥಿಗಳು, ಪ್ರವಾಸಿಗರು ಹಾಗೂ ಸಾರ್ವಜನಿಕರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದರು.