Monday, December 23, 2024
Homeಜಿಲ್ಲೆಸಾರ್ವತ್ರಿಕ ಲಸಿಕಾಕರಣದ ಜಾಗೃತಿ ಅಗತ್ಯ: ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ.

ಸಾರ್ವತ್ರಿಕ ಲಸಿಕಾಕರಣದ ಜಾಗೃತಿ ಅಗತ್ಯ: ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ.

ಚಿಕ್ಕಬಳ್ಳಾಪುರ,: ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿ ಲಸಿಕಾಕರಣ ಮಾಡುವ ಲಸಿಕೆಗಳನ್ನು ನಿರ್ದಿಷ್ಟ ಸಮಯದಲ್ಲಿ ನಿಗದಿತ ವಯೋಮಿತಿಗೆ ಅನುಗುಣವಾಗಿ ಹಾಕಿಸಿಕೊಳ್ಳಬೇಕು. ಈ ದಿಸೆಯಲ್ಲಿ ಸಾರ್ವಜನಿಕರು ಮತ್ತು ಮಕ್ಕಳ ಪಾಲಕ ಪೋಷಕರು ಆರೋಗ್ಯ ಇಲಾಖೆಯು ನೀಡುವ ಸೂಚನೆಗಳನ್ನು ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಅವರು ಮನವಿ ಮಾಡಿದರು.

ಮಂಗಳವಾರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ “ರಾಷ್ಟ್ರೀಯ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ಕುರಿತ ಟಾಸ್ಕ್ ಪೋರ್ಸ್ ಸಮಿತಿ ಸಭೆ”ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಗುವಿನ ಗರ್ಭಧಾರಣೆಯ ಆರಂಭದಿಂದ ಮಗು ಜನಿಸಿದ 16 ವರ್ಷ ಪೂರೈಸುವ ವರೆಗೂ ಅನೇಕ ಲಸಿಕೆಗಳನ್ನು ಹಾಕಿಸಿಕೊಳ್ಳುವ ಮೂಲಕ ವಿವಿಧ ರೋಗಗಳನ್ನು ಶಾಶ್ವತವಾಗಿ ತಡೆಗಟ್ಟಬಹುದಾಗಿದೆ. ಟಿ.ಡಿ. ವರ್ದಕ, ಬಿಸಿಜಿ, ಹೆಪಟೈಟಿಸ್ ಬಿ, ಪೆಂಟಾವೆಲೆಂಟ್, ರೂಟಾ, ಡಿಪಿಟಿ ವರ್ದಕ ಲಸಿಕೆಗಳನ್ನು ವಯೋಮಿತಿಗೆ ಅನುಗುಣವಾಗಿ ಲಸಿಕಾಕರಣ ಮಾಡುವ ಕಾರ್ಯಕ್ರಮಗಳು ನಿರಂತವಾಗಿ ಚಾಲನೆಯಲ್ಲಿರುತ್ತವೆ. ಯಾವ ಲಸಿಕೆ ಯಾವ ಕಾಯಿಲೆಯನ್ನು ತಡೆಗಟ್ಟುತ್ತದೆ, ಯಾವ್ಯಾವ ಅಡ್ಡಪರಿಣಾಮಗಳು ಉಂಟಾಗಬಹುದು, ಅವುಗಳನ್ನು ಬಗೆಹರಿಸುವುದು ಹೇಗೆ ಎಂಬ ಸಂಪೂರ್ಣ ವಿವರವನ್ನು ಆರೋಗ್ಯ ಇಲಾಖೆಯು ವಿತರಿಸುವ “ತಾಯಿ ಕಾರ್ಡ್” ನಲ್ಲಿ ವಿವರವನ್ನು ಹಾಗೂ ಸೂಚನೆಗಳನ್ನು ನೀಡಲಾಗಿರುತ್ತದೆ. ಅತಿ ಮುಖ್ಯವಾಗಿ ಯಾವ ವಯಸ್ಸಿಗೆ ಯಾವ ಲಸಿಕೆ ಹಾಕಿಸಬೇಕು. ಮುಂದಿನ ಭೇಟಿ ಯಾವಾಗ ಬರಬೇಕು ಎಂಬ ಮಾಹಿತಿ ಅದರಲ್ಲಿರುತ್ತದೆ. ಆ ಪ್ರಕಾರವಾಗಿ ಲಸಿಕಾಕರಣ ಮಾಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ, ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆಯ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಕ್ರಮವಹಿಸಿಲಿದ್ದಾರೆ, ಗರ್ಭಿಣಿ ಸ್ತ್ರಿಯರು ಹಾಗೂ ಮಕ್ಕಳನ್ನು ಅವರ ಪೋಷಕ ಪಾಲಕರು ನಿಗಧಿತ ದಿನಾಂಕಗಳಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆಗಳಿಗೆ ಕರೆತಂದು ಲಸಿಕೆ ಪಡೆಯಬಹುದು. ಈ ಬಗ್ಗೆ ಸರ್ಕಾರದ ನಿರ್ದೇಶನದಂತೆ ಕಾಲೋಚಿತವಾಗಿ ಅಭಿಯಾನ ಕೈಗೊಂಡು ಅಂಗನವಾಡಿಗಳಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಸರ್ವಜನಿಕ ಸ್ಥಳಗಳಲ್ಲಿ ಲಸಿಕಾಕರಣದ ಸತ್ರಗಳನ್ನು ಆಯೋಜಿಸಲಾಗುತ್ತದೆ. ಈ ಬಗ್ಗೆ ಆರೋಗ್ಯ ಇಲಾಖೆಯ ಪ್ರಕಟಣೆಯಗಳನ್ನು ಮಾಧ್ಯಮಗಳು ಹಾಗೂ ಹತ್ತಿರದ ಆರೋಗ್ಯ ಸಿಬ್ಬಂದಿಯ ಮೂಲಕ ತಿಳಿದು ಪೋಷಕರು ಜಾಗೃತಿ ಪಡೆದು ನಿಗಧಿತವಾಗಿ ಲಸಿಕೆ ಹಾಕಿಸಬೇಕು ಎಂದು ತಿಳಿಸಿ ಲಸಿಕಾ ವೇಳಾಪಟ್ಟಿಯ ವಿವರವನ್ನು ಸಾರ್ವಜನಿಕರ ಮಾಹಿತಿಗಾಗಿ ನೀಡಿದರು.

ಲಸಿಕೆಯಿಂದ ಯಾರು ವಂಚಿತರಾಗಬಾರದು: ಸಾರ್ವಜನಿಕರನ್ನು ಲಸಿಕಾಕರಣದ ಪ್ರಕ್ರಿಯೆಗಳಲ್ಲಿ ಭಾಗವಹಿಸಲು ಹಾಗೂ ಅದರ ಸದುಪಯೋಗ ಪಡೆದುಕೊಳ್ಳಲು ಪ್ರೇರಿಪಿಸಬೇಕು. ಈ ಕುರಿತು ಜಾಗೃತಿ ಚಟುವಟಿಕೆಗಳನ್ನು ಕೈಗೊಂಡು ಅರಿವು ಮೂಡಿಸಬೇಕು. ಲಸಿಕಾಕರಣವನ್ನು ಯಶಸ್ವಿಗೊಳಿಸುವ ಮೂಲಕ ದಡಾರಾ, ರುಬೆಲ್ಲಾ ಕಾಯಿಲೆಗಳು ಹಾಗೂ ಇನ್ನಿತರ ಕಾಯಿಲೆಗಳು ಬರದಂತೆ ತೆಡೆಯುವ ಕೆಲಸ ಆಗಬೇಕು. ಮಕ್ಕಳ ಜನನದ ವಿವರವನ್ನು ಪಡೆದು ಯಾವ ಮಕ್ಕಳು ಯಾವ ಲಸಿಕೆ ಪಡೆದಿದ್ದಾರೆ ಹಾಗೂ ಯಾವ ಲಸಿಕೆಯಿಂದ ವಂಚಿತರಾಗಿದ್ದಾರೆ ಎಂಬ ವಿವರವನ್ನು ಪ್ರಾಥಮಿಕ ಆರೋಗ್ಯ ಕೇಂದ್ರವಾರು ಮಾಹಿತಿ ಪಡೆದು, ಸ್ಥಳೀಯ ಆರೋಗ್ಯಾಧಿಕಾರಿಗಳು, ಶಿಶು ಅಭಿವೃದ್ಧಿ ಅಧಿಕಾರಿಗಳು, ಶಿಕ್ಷಕರು, ಸ್ಥಳೀಯ ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಸಭೆ ನಡೆಸಿ ಸೂಕ್ತ ನಿರ್ದೇಶನಗಳನ್ನು ನೀಡಿ ಶೇ. 100 ರಷ್ಟು ಲಸಿಕಾ ಕರಣವನ್ನು ಜಿಲ್ಲೆಯಲ್ಲಿ ಸಾಧಿಸಲೇಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಿಕ್ಷಕರು, ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡಬೇಕು. ಲಸಿಕೆಯಿಂದ ವಂಚಿತರಾಗಿರುವ ವಿದ್ಯಾರ್ಥಿಗಳ ವಿವರನ್ನು ಶಾಲಾ ಹಂತದಲ್ಲೆ ಗುರ್ತಿಸಿ ಮಾಹಿತಿ ನೀಡಿದರೆ ಆರೋಗ್ಯ ಇಲಾಖೆ ಸಿಬ್ಬಂದಿ ಲಸಿಕೆ ಹಾಕಲಿದ್ದಾರೆ ಎಂದರು.

ಲಸಿಕಾಕರಣಕ್ಕೆ ನಗರ/ಗ್ರಾಮ ಸ್ಥಳೀಯಾಡಳಿತ ಸಂಸ್ಥೆಗಳು ಹೆಚ್ಚು ಅಪಾಯದಂಚಿನಲ್ಲಿರುವ ಪ್ರದೇಶಗಳನ್ನು ಗುರುತಿಸಿ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ಬಗ್ಗೆ ದಿನಾಂಕಗಳ ಕುರಿತು ಮೈಕಿಂಗ್ ಮತ್ತು ಟಾಂ ಟಾಂ ಮಾಡುವ ಮುಖಾಂತರ ಜಾಗೃತಿ ಮೂಡಿಸುವುದು, ಭಿತ್ತಿ ಪತ್ರ ಬಿತ್ತಿಪತ್ರ ಹಾಗೂ ಕರಪತ್ರಗಳ ಮೂಲಕ ವ್ಯಾಪಕ ಪ್ರಚಾರ ಕೈಗೊಳ್ಳುವುದು. ಅಲ್ಪ ಸಂಖ್ಯಾತರ, ಹಿಂದುಳಿದ ವರ್ಗ ಕಲ್ಯಾಣಗಳ ಇಲಾಖೆಯ ಅಧಿಕಾರಿಗಳು ಅಲ್ಪಸಂಖ್ಯಾತರ ಸಮುದಾಯಗಳಲ್ಲಿ ಲಸಿಕಾಕರಣದ ಬಗ್ಗೆ ಜಾಗೃತಿ ಮೂಡಿಸುವುದು. ಎಲ್ಲಾ ಮಕ್ಕಳು ಮತ್ತು ಗರ್ಭಿಣಿ ಮಹಿಳೆಯರು ಪೂರ್ಣ ಪ್ರಮಾಣದ ಲಸಿಕಾಕರಣ ಪಡೆದಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ.ನಿಟ್ಟಾಲಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಸ್. ಮಹೇಶ್ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ವೆಂಕಟೇಶ್ ರೆಡ್ಡಿ, ಜಿಲ್ಲಾ ಮಟ್ಟದ ಅಧಿಕಾರಿಗಳು ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

Social Media Links
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!