ಪುರುಷ ಮತದಾರರು – 1,02327, ಮಹಿಳೆಯರು – 1,03453, ಇತರೆ 09, ಒಟ್ಟು 2,05789 ಮತದಾರರು ಹಕ್ಕು ಚಲಾಯಿಸುವುದಕ್ಕೆ ಸಕಲ ಸಿದ್ದತೆ.
ಶಿಡ್ಲಘಟ್ಟ: 2024 ರ ಲೋಕಸಭಾ ಚುನಾವಣಾ 28- ಕೋಲಾರ ಲೋಕಸಭಾ ಕ್ಷೇತ್ರ ಏಪ್ರಿಲ್ 26 ರಂದು ನಡೆಯಲಿದೆ. ಈಗಾಗಲೇ ಚುನಾವಣೆ ಮತದಾನ ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿದೆ. ಮತದಾನ ಮಾಡುವುದಕ್ಕೆ ಈಗಾಗಲೇ ಸಕಲ ಸಿದ್ದತೆಗಳು ಮಾಡಿಕೊಳ್ಳಲಾಗಿದೆ. ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ 2,05789 ಮತದಾರರಿದ್ದು, ಪುರುಷ ಮತದಾರರು 1,02327, ಮಹಿಳಾ ಮತದಾರರು 1,03453, ಇತರೆ 09 ಮತದಾರರಿದ್ದಾರೆ. ಸೇವಾ ಮತದಾರರು 23 ಇದ್ದು, 244 ಮತಗಟ್ಟೆಗಳಲ್ಲಿ ಮತದಾನಕ್ಕೆ ಸಕಲ ಸಿದ್ದತೆ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ತಾಲ್ಲೂಕು ಚುನಾವಣಾಧಿಕಾರಿ ಜಾವೀದಾ ನಸೀಮಾ ಖಾನಂ ಅವರು ತಿಳಿಸಿದರು.
ತಾಲ್ಲೂಕು ಕಛೇರಿಯ ಸಭಾಂಗಣದಲ್ಲಿ ಸುದ್ದಿ ಗೋಷ್ಟಿ ನಡೆಸಿ ಮಾಹಿತಿ ನೀಡಿದರು. ವಿಶೇಷ ಚೇತನರು 85 ವರ್ಷ ಮೇಲ್ಪಟ್ಟ ಮತದಾರರಿಗೆ ಮನೆ ಮತದಾನವನ್ನು ಮಾಡಿಸಿಕೊಂಡಿದ್ದೇವೆ. 486 ಜನರಲ್ಲಿ 466 ಜನ ಮತದಾನ ಮಾಡಿದ್ದಾರೆ. 54 ಸೂಕ್ಷ್ಮ ಮತಗಟ್ಟೆಗಳಿದ್ದು, ಇನ್ನೂ ಗಂಗನಹಳ್ಳಿ, ಆನೇಮಡಗು, ಸರ್ಕಾರಿ ಪ್ರೌಢಶಾಲೆ ಕೋಟೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಶಿಡ್ಲಘಟ್ಟ, ನಂದನವನ, ಸೊಣಗಾನಹಳ್ಳಿ 06 ದುರ್ಬಲ ಮತಗಟ್ಟೆಗಳಿವೆ. 128 ವೆಬ್ ಕಾಸ್ಟಿಂಗ್ ಮಾಡಲಾಗಿದೆ. ದುರ್ಬಲ ಮತಗಟ್ಟೆಗಳಲ್ಲಿ ಪೊಲೀಸ್ ಇಲಾಖೆಯೊಂದಿಗೆ ಅಧಿಕಾರಿಗಳು ನಾವು ಭೇಟಿಕೊಟ್ಟು ಮತದಾರರೊಂದಿಗೆ ಮಾತುಕತೆ ನಡೆಸಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದೇವೆ.
ನಗರ ಮತ್ತು ಗ್ರಾಮೀಣ ಪ್ರದೇಶಗಳ ಮತಗಟ್ಟೆ ಕೇಂದ್ರಗಳ ಬಳಿ ಬಿಸಿಲು ಇರುವುದರಿಂದ ಮತದಾರರಿಗೆ ನಿಂತುಕೊಳ್ಳುವುದಕ್ಕೆ ನೆರಳಿನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಇನ್ನೂ ವಿಶೇಷ ಚೇತನರಿಗೆ ವೀಲ್ ಚೇರ್ ವ್ಯವಸ್ಥೆಯೂ ಮಾಡಲಾಗಿದೆ. ಯಾವುದೇ ರೀತಿಯ ಸಮಸ್ಯೆಗಳು ನಡೆದಾಗ ತಕ್ಷಣ ಹೆಲ್ಪ್ ಡೆಸ್ಕ್ ಗೆ ಕರೆ ಮಾಡಿ ತಿಳಿಸುವುದಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದೇವೆ.
ಚುನಾವಣೆ ಮತದಾನ ಶಾಂತಿಯುತವಾಗಿ ನಡೆಯಬೇಕು ಆನಿಟ್ಟಿನಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳ ನಡೆಯಬಾರದೆಂದು ಈಗಾಗಲೇ ಹೆಚ್ಚು ಪೊಲೀಸರನ್ನು ಸಹ ಚುನಾವಣಾ ಕರ್ತವ್ಯದಲ್ಲಿ ನಿಯೋಜನೆ ಮಾಡಲಾಗಿದೆ. ಸುಮಾರು 2000 ಸಿಬ್ಬಂದಿ ಚುನಾವಣೆ ಪ್ರಕ್ರಿಯೆ ಕರ್ತವ್ಯವನ್ನು ನಿರ್ವಹಿಸಲಿದ್ದಾರೆ ಮತಗಟ್ಟೆಗಳಿಗೆ ತೆರಳಲು ಬಸ್ಸುಗಳ ವ್ಯವಸ್ಥೆಯನ್ನು ಈಗಾಗಲೇ ಮಾಡಲಾಗಿದೆ ಎಂದರು.
ತಾಲ್ಲೂಕು ಸ್ವೀಪ್ ಸಮಿತಿಯ ಅಧ್ಯಕ್ಷರಾದ ಮುನಿರಾಜು ಅವರ ನೇತೃತ್ವದಲ್ಲಿ ಎಲ್ಲಾ ಕಡೆಗಳಲ್ಲಿ ವ್ಯಾಪಾಕವಾಗಿ ಮತದಾನ ಜಾಗೃತಿ ಕಾರ್ಯಕ್ರಮಗಳು ನಡೆಸಿದ್ದಾರೆ. ಜೊತೆಗೆ ಪತ್ರಕರ್ತರೂ ಸಹ ಮತದಾನ ಜಾಗೃತಿ ಅರಿವು ಮೂಡಿಸುವ ಕಾರ್ಯಕ್ರಮ ಮಾಡಿರುವುದು ಉತ್ತಮ ಬೆಳವಣಿಗೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಮತದಾರರು ಏಪ್ರಿಲ್ 26 ರಂದು ತಪ್ಪದೇ ಮತಗಟ್ಟೆಗೆ ಬಂದು ತಮ್ಮ ಹಕ್ಕನ್ನು ಚಲಾಯಿಸಬೇಕೆಂದು ತಿಳಿಸಿದರು.
ತಹಶೀಲ್ದಾರ್ ಬಿ.ಎನ್ ಸ್ವಾಮಿ ಅವರು ಮಾತನಾಡಿ ಪ್ರತಿ ಮತಗಟ್ಟೆ ಕೇಂದ್ರದಲ್ಲಿ 07 ಜನ ಸಿಬ್ಬಂದಿ ಚುನಾವಣಾ ಕರ್ತವ್ಯ ನಿರ್ವಹಿಸಲಿದ್ದಾರೆ. ಮತಗಟ್ಟೆ ಕೇಂದ್ರದ ಒಳಗಡೆ ಮೊಬೈಲ್ ತೆಗೆದುಕೊಂಡು ಹೋಗುವುದಕ್ಕೆ ಅವಕಾಶ ಇರಿವುದಿಲ್ಲ. ಆ ರೀತಿ ಮಾಡಿದ್ದಲ್ಲಿ ಅಥವಾ ಪೊಟೋ ತೆಗೆದುಕೊಳ್ಳುವುದು ಮಾಡಿದರೆ ಅಂತಹವರ ವಿರುದ್ದ ಪ್ರಕರಣ ದಾಖಲಾಗುತ್ತದೆ. ಈಗಾಗಲೇ ಸೆಕ್ಟರ್ ಅಧಿಕಾರಿಗಳಿಗೆ ಮತ್ತು ಪೊಲೀಸ್ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಚೆಕ್ ಪೋಸ್ಟ್ ಗಳಲ್ಲಿ ಇದುವರೆವಿಗೂ ಯಾವುದೇ ಹಣ ಸಾಗಾಣಿಕೆ ಪ್ರಕರಣಗಳು ಪತ್ತೆಯಾಗಿಲ್ಲ. ಜಪ್ತಿ ಪ್ರಕರಣಗಳು ಸಹಾ ದಾಖಲಾಗಿರುವುದಿಲ್ಲ ಎಂದು ಸ್ಪಷ್ಟಪಡಿಸಿ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಸ್ವೀಪ್ ಸಮಿತಿಯ ಅಧ್ಯಕ್ಷರು ಹಾಗೂ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಜಿ. ಮುನಿರಾಜು, ನಗರಸಭೆ ಪೌರಾಯುಕ್ತ ಗೋಪಾಲ್ ಜಾದವ್ ಹಾಜರಿದ್ದರು.
ವರದಿ: ಕೋಟಹಳ್ಳಿ ಅನಿಲ್ ಕುಮಾರ್ ಕೆ.ಎ