ನಟಿ ಪವಿತ್ರಾ ಗೌಡ ಸೇರಿ 13 ಮಂದಿ ಬಂಧಿಸಿದ ಪೊಲೀಸರು.
ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ (33) ಎಂಬುವವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ ವುಡ್ ನಟ ದರ್ಶನ್ ಸೇರಿ 13 ಮಂದಿಯನ್ನು ಪೊಲೀಸ್ ವಶಕ್ಕೆ ಪಡೆಯಲಾಗಿದೆ. ನಟ ದರ್ಶನ್ ಅವರಿಗೆ ಆತ್ಮೀಯರಾಗಿರುವ ನಟಿ ಪವಿತ್ರ ಗೌಡ ಅವರ ಫೋಟೋಗಳಿಗೆ ರೇಣುಕಾ ಸ್ವಾಮಿ ಸಾಮಾಜಿಕ ಚಾಲತಾಣದಲ್ಲಿ ಆಶ್ಲೀಲವಾಗಿ ಕಮೆಂಟ್ ಮಾಡುತ್ತಿದ್ದರು. ಇದಲ್ಲದೆ ಕೆಟ್ಟದಾಗಿ ಮೆಸೇಜ್ ಕಳಿಸುತ್ತಿದ್ದರು ಎನ್ನಲಾಗಿದೆ.
ಈ ಕಾರಣಕ್ಕೆ ನಟ ದರ್ಶನ್ ಸೂಚನೆ ಮೇರೆಗೆ ಅವರ ಗೆಳೆಯರು ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆದುಕೊಂಡು ಬಂದಿದ್ದರು. ಬೆಂಗಳೂರಿಗೆ ಕರೆದುಕೊಂಡು ಬಂದು ಜೂನ್ 8 ರಂದು ಕಾಮಾಕ್ಷಿಪಾಳ್ಯದಲ್ಲಿರುವ ವಿನಯ್ ಎನ್ನುವವರ ಶೆಡ್ ಗೆ ಕರೆತಂದು ಬಲವಾದ ಆಯುಧದಿಂದ ರೇಣುಕಾ ಸ್ವಾಮಿಗೆ ಹೊಡೆದು ಕೊಲೆ ಮಾಡಿದ್ದು, ಮೃತದೇಹವನ್ನು ಮೋರಿಗೆ ಎಸೆಯಲಾಗಿತ್ತು. ಘಟನೆ ಸಂದರ್ಭದಲ್ಲಿ ದರ್ಶನ್ ಅವರು ಸ್ಥಳದಲ್ಲೇ ಇದ್ದರು ಎಂದು ಆರೋಪಿಸಲಾಗಿದೆ.
ಪ್ರಕರಣದಲ್ಲಿ ಮೂವರು ಮೊದಲು ಠಾಣೆಗೆ ಬಂದು ನಾವೇ ಕೊಲೆ ಮಾಡಿದ್ದೇವೆ. ಹಣಕಾಸಿನ ವಿಚಾರಕ್ಕೆ ಗಲಾಟೆಯಾಗಿ, ಕೊಲೆ ಮಾಡಿದ್ದೇವೆಂದು ಹೇಳಿಕೊಂಡಿದ್ದರು. ಆದರೆ, ಪೊಲೀಸರಿಗೆ ಈ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು, ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಬಳಿಕ, ಘಟನೆ ಹಿಂದಿನ ಕಾರಣ ಗೊತ್ತಾಗಿದೆ ಎಂದು ಹೇಳಲಾಗಿದೆ. ಘಟನೆ ಸಂಬಂಧ ರೇಣುಕಾಸ್ವಾಮಿ ಪೋಷಕರು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದರ್ಶನ್, ಸ್ನೇಹಿತ್, ವಿ.ವಿನಯ್, ದರ್ಶನ್ ಮ್ಯಾನೇಜರ್ ಆರ್.ನಾಗರಾಜು, ಎಂ.ಲಕ್ಷ್ಮಣ್,ಎಸ್.ಪ್ರದೋಶ್, ಕೆ.ಪವನ್, ದೀಪಕ್ ಕುಮಾರ್, ನಂದೀತ್, ಕಾರ್ತಿಕ್, ನಿಖಿಲ್ ನಾಯಕ್, ಕೇಶವ ಮೂರ್ತಿ, ರಾಘವೇಂದ್ರ ಅಲಿಯಾಸ್ ರಾಘು, ಪವಿತ್ರಾ, ಗೌಡ ಬಂಧಿತ ಆರೋಪಿಗಳಾಗಿದ್ದಾರೆ.
ಆರು ದಿನಗಳು ಪೊಲೀಸ್ ಕಸ್ಟಡಿಗೆ ಆರೋಪಿಗಳನ್ನು ಮಂಗಳವಾರ ಸಂಜೆ ಕೋರಮಂಗಲದ 24ನೇ ಎಸಿಎಂಎಂ ಕೋರ್ಟ್‌ನ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಬಳಿಕ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಲು ನ್ಯಾಯಾಧೀಶರು ಆದೇಶಿಸಿದರು. ಪೊಲೀಸರ ಪರ ಸರ್ಕಾರಿ ಅಭಿಯೋಜಕ ವಾದ ಮಂಡಿಸಿ, ಸಾಕ್ಷ್ಯಗಳ ನಾಶ ಆಗಿರುವುದರಿಂದ ಎ2 ದರ್ಶನ್ ಅವರನ್ನು 14 ದಿನ ಕಸ್ಟಡಿಗೆ ನೀಡುವಂತೆ ಕೋರಿದರು. ಈ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ದರ್ಶನ್ ಪರ ವಕೀಲ, ಈಗಾಗಲೇ ದರ್ಶನ್ ಮೊಬೈಲ್ ಸೀಜ್ ಆಗಿದೆ, ದರ್ಶನ್ ಅವರ ತೇಜೋವಧೆ ಮಾಡಲು ಈ ರೀತಿ ಮಾಡಲಾಗುತ್ತಿದೆ ಹೇಳಿದರು. ಆರೋಪಿಗಳನ್ನು ಕಸ್ಟಡಿಗೆ ನೀಡಲು ಸರ್ಕಾರಿ ಅಭಿಯೋಜಕ ಕೋರಿದರೆ, ದರ್ಶನ್ ಪರ ವಕೀಲ ಅವರಿಗೆ ಕಿರುಕುಳ ನೀಡಬಾರದು, ನ್ಯಾಯಾಂಗ ಬಂಧನಕ್ಕೆ ನೀಡಬೇಕು ಎಂದು ಮನವಿ ಮಾಡಿದರು. ವಾದ- ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಧೀಶರು ಪೊಲೀಸ್ ಕಸ್ಟಡಿಗೆ ನೀಡಲು ಸೂಚಿಸಿದರು. ಇದಕ್ಕೂ ಮುನ್ನ ದರ್ಶನ್ ಸೇರಿದಂತೆ ಎಲ್ಕಾ 13 ಮಂದಿಯನ್ನು ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ನಡೆಸಲಾಯಿತು. ನಟ ದರ್ಶನ್, ಪವಿತ್ರಾ ಗೌಡ ಸೇರಿ ಇತರ ಆರೋಪಿಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಯಾರಿಗೂ ಗಂಭೀರ ಆರೋಗ್ಯ ಸಮಸ್ಯೆ ಇಲ್ಲ. ಎಲ್ಲರೂ ಆರೋಗ್ಯವಾಗಿದ್ದಾರೆ ಎಂದು ಬೌರಿಂಗ್ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಇದೇ ವೇಳೆ ರೇಣುಕಾಸ್ವಾಮಿ ಕೊಲೆ ನಡೆದ ಸ್ಥಳಕ್ಕೆ ಪೊಲೀಸರು, ಎಫ್‌ಎಸ್ಎಲ್ ತಂಡ ಭೇಟಿ ನೀಡಿ ಪರಿಶೀಲಿಸಿದೆ. ಈ ವೇಳೆ ಕೆಲ ವಸ್ತುಗಳನ್ನು ಎಫ್‌ಎಸ್‌ಎಲ್ ತಂಡ ಸಂಗ್ರಹಿಸಿದೆ. ವಸ್ತುಗಳನ್ನು ಸೀಜ್ ಮಾಡಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಪವಿತ್ರಾ ಗೌಡ ಅವರಿಗೆ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಮಾಡುತ್ತಿದ್ದರು. ಈ ಕಾರಣಕ್ಕೆ ದರ್ಶನ್ ಕಡೆಯವರು ರೇಣುಕಾಸ್ವಾಮಿಯ ಅವರನ್ನು ಕರೆಸಿ ಎಚ್ಚರಿಕೆ ನೀಡಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಕೊಲೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಸ್ವತಃ ಅನುಗ್ರಹ ಅಪಾರ್ಟ್‌ಮೆಂಟ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಸೆಕ್ಯುರಿಟಿ ಗಾರ್ಡ್ ಗಸ್ತು ತಿರುಗುತ್ತಿದ್ದಾಗ 35 ವರ್ಷದ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿತ್ತು. ಕೂಡಲೇ ಅವರು ಕಾಮಾಕ್ಷಿಪಾಳ್ಯ ಪೊಲೀಸರಿಗೆ ತಿಳಿಸುತ್ತಾರೆ.
ಪೊಲೀಸರು ಕೊಲೆಯಾದ ವ್ಯಕ್ತಿ ಮೂಲ ಪತ್ತೆ ಹಚ್ಚಲು ಆರಂಭಿಸುತ್ತಾರೆ. ತನಿಖೆಯ ವೇಳೆ ಪತ್ತೆಯಾದ ಶವ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯದ್ದು ಎನ್ನುವುದು ಗೊತ್ತಾಗುತ್ತದೆ. ನಂತರ ಫೋನ್ ಕರೆ, ಸಿಸಿಟಿವಿ ಇತ್ಯಾದಿ ತಾಂತ್ರಿಕ ಸಾಕ್ಷ್ಯಗಳನ್ನು ಕಲೆ ಹಾಕಿ ಆರೋಪಿಗಳನ್ನು ಬಂಧನ ಮಾಡಿದಾಗ ಈ ಪ್ರಕರಣದ ಮಾಹಿತಿ ಒಂದೊಂದಾಗಿ ಈಗ ಬೆಳಕಿಗೆ ಬರುತ್ತಿದೆ.
ಔಷಧ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದಲೇ ಅಪಹರಣ ಮಾಡಿ ಬೆಂಗಳೂರಿಗೆ ಕರೆ ತಂದು ದರ್ಶನ್ ಟೀಂ ಕೊಲೆ ಮಾಡಿದೆ ಎನ್ನಲಾಗಿದೆ. ಆರ್ ಆರ್ ನಗರದ ವಿನಯ್ ಶೆಡ್‌ನಲ್ಲಿ ರೇಣುಕಾ ಸ್ವಾಮಿ ಕೊಲೆ ಮಾಡಿದ್ದಾರೆ. ಕೊಲೆ ನಂತರ ಆಟೋ ಹಾಗೂ ಸ್ಕಾರ್ಪಿಯೋ ಕಾರಿನಲ್ಲಿ ಮೃತದೇಹ ರವಾನೆ ಮಾಡಿದ್ದಾರೆ. ಬಡ್ಡಿ ಕಟ್ಟಲು ಸಾಧ್ಯವಾಗದಕ್ಕೆ ವಿನಯ್ ಆಟೋವನ್ನು ವಶಕ್ಕೆ ಪಡೆದಿದ್ದ. ಈ ಆಟೋದಲ್ಲಿ ಶವವನ್ನು ರವಾನಿ ಮಾಡಿ ರಾಜಕಾಲುವೆಗೆ ಎಸೆದಿದ್ದಾರೆ.
ಪವಿತ್ರಾ ಗೌಡಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಹಿನ್ನೆಲೆಯಲ್ಲಿ ರೇಣುಕಾಸ್ವಾಮಿ ಜೊತೆ ಸಂಪರ್ಕ ಸಾಧಿಸಲು ಹುಡುಗಿ ಹೆಸರಿನಲ್ಲಿ ಫೇಕ್ ಖಾತೆಯನ್ನು ದರ್ಶನ್ ತಂಡ ತೆರೆದಿತ್ತು. ಈ ಖಾತೆಯ ಮೂಲಕ ರೇಣುಕಾಸ್ವಾಮಿಯ ಜೊತೆ ಸಂವಹನ ಮಾಡಲಾಗುತ್ತಿತ್ತು. ಶನಿವಾರ ಮಾತನಾಡಲು ಮನೆಯಿಂದ ಹೊರಗಡೆ ಬಾ ಎಂದು ಖಾತೆಯಿಂದ ಮಸೇಜ್ ಕಳುಹಿಸಲಾಗಿತ್ತು. ಈ ಮಸೇಜ್‌ಗೆ ಒಪ್ಪಿ ಆತನ ಮನೆಯಿಂದ ಹೊರಗೆ ಬಂದಿದ್ದ. ಚಿತ್ರದುರ್ಗದಲ್ಲಿರುವ ಅಭಿಮಾನಿಗಳ ನೇತೃತ್ವದಲ್ಲಿ ಅಪಹರಣ ಮಾಡಿ ಬೆಂಗಳೂರಿಗೆ ಕರೆ ತರಲಾಗಿತ್ತು. ಹಲ್ಲೆ ನಡೆಸುವ ಸಂದರ್ಭದಲ್ಲಿ ದರ್ಶನ್ ಮತ್ತು ಪವಿತ್ರಾ ಗೌಡ ಸ್ಥಳದಲ್ಲಿ ಇದ್ದರು. ದರ್ಶನ್ ಹೊಡೆದ ಬಳಿಕ ರೇಣುಕಾಸ್ವಾಮಿ ಸಾವನ್ನಪ್ಪಿದ್ದಾನೆ ಎಂದು ಉಳಿದ ಆರೋಪಿಗಳು ತಪ್ರೊಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಈಗ ಮೈಸೂರಿನಲ್ಲಿದ್ದ ದರ್ಶನ್ ಅವರನ್ನು ಬಂಧಿಸಿ ಕರೆ ತಂದಿದ್ದಾರೆ