ಖಾಸಗಿ ಶಾಲೆಗಳ ದಾಖಲಾತಿ ಶುಲ್ಕದ ವಿವರ ಮಾಹಿತಿ ಲಭ್ಯವಿಲ್ಲವೆಂಬ ಉಡಾಫೆ ಹೇಳಿಕೆ : ಬಿ.ಇ.ಓ ನರೇಂದ್ರ ಕುಮಾರ್ .
ಶಿಡ್ಲಘಟ್ಟ : ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ತಾಲ್ಲೂಕಿನ ಬಹುತೇಕ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಕಳೆದ ಸಾಲಿಗಿಂತ ಈ ಬಾರಿ ಅಂದರೆ 2024-25 ನೇ ಸಾಲಿನಲ್ಲಿ ಶೇಕಡಾ 30% ರಷ್ಟು ಶಾಲಾ ದಾಖಲಾತಿ ಶುಲ್ಕ ಹೆಚ್ಚಿಗೆ ಮಾಡಲಾಗಿದೆಯೆಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಸರ್ಕಾರದ ಆದೇಶದಂತೆ ಖಾಸಗಿ ಶಾಲೆಗಳಲ್ಲಿ ಸಾರ್ವಜನಿಕರಿಗೆ ಎದ್ದುಕಾಣುವ ರೀತಿಯಲ್ಲಿ ಶಾಲಾ ಶುಲ್ಕದ ವಿವರ ನಾಮಫಲಕದಲ್ಲಿ ಅಳವಡಿಸಬೇಕಾಗಿರುತ್ತದೆ. ಈ ನಿಯಮವನ್ನ ಯಾವ ಶಾಲೆಗಳು ಪಾಲಿಸುತ್ತಿವೆ ಎಂಬುವುದೇ ದೊಡ್ಡ ಪ್ರಶ್ನೆಯಾಗಿದೆ.? ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳು ಶಿಕ್ಷಣವನ್ನೇ ವ್ಯಾಪಾರ ಮಾಡಿಕೊಂಡಿರುವ ಇಂತಹ ಕಾಲಘಟ್ಟದಲ್ಲಿ ತಾಲ್ಲೂಕು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಅದರಲ್ಲೂ ಇಲಾಖೆಯ ಮುಖ್ಯಸ್ಥರಾದ ಕ್ಷೇತ್ರ ಶಿಕ್ಷಣಾಧಿಕಾರಿ ಈ ಬಗ್ಗೆ ಗಮನಹರಿಸಿ ಯಾವ ಯಾವ ಶಾಲೆಗಳಲ್ಲಿ ಎಷ್ಟೆಷ್ಟು ಶುಲ್ಕವಿದೆ. ಖಾಸಗಿ ಶಾಲೆಗಳು ಸರ್ಕಾರದ ನಿಯಮಗಳು ಪಾಲಿಸುತ್ತಿವೆಯಾ ಎಂದು ಪರಿಶೀಲಿಸಬೇಕಾಗಿರುತ್ತದೆ. ತಾಲ್ಲೂಕಿನ ಸರ್ಕಾರಿ ಶಾಲೆಗಳು ಸೇರಿದಂತೆ ಖಾಸಗಿ ಶಾಲೆಗಳ ಸಂಪೂರ್ಣ ವಿವರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಬಳಿ ಎಲ್ಲಾ ಮಾಹಿತಿ ಇರಬೇಕು ಅಲ್ಲವೇ.? ವಿಪರ್ಯಾಸವೆಂದರೆ ತಾಲ್ಲೂಕಿನ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಬಳಿ ಖಾಸಗಿ ಶಾಲೆಗಳ ಶುಲ್ಕದ ವಿವರ ಇಲ್ಲವಂತೆ.! ಇದನ್ನ ನಾವು ಹೇಳುತ್ತಿಲ್ಲ. ಸ್ವತಃ ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರಕುಮಾರ್ ಅವರೇ ಹೇಳಿದ್ದಾರೆ. ಖಾಸಗಿ ಶಾಲೆಗಳ ದಾಖಲಾತಿ ಶುಲ್ಕದ ವಿವರದ ಕುರಿತು ಮಾಹಿತಿ ಪಡೆಯಲು ಪತ್ರಕರ್ತರು ಬೇಟಿ ಮಾಡಿದ ಸಂದರ್ಭದಲ್ಲಿ ಪ್ರತಿಕ್ರಯಿಸಿ ಶಾಲಾ ಶುಲ್ಕದ ವಿವರ ನಮ್ಮ ಇಟ್ಟುಕೊಂಡಿರುವುದಿಲ್ಲ. ಅದು ವೆಬ್ ಸೈಟ್ ನಲ್ಲಿ ಸಿಗುತ್ತದೆ ಅಥವಾ ಶಾಲೆಗಳ ನಾಮಫಲಕದಲ್ಲಿ ಹಾಕಿರುತ್ತಾರೆ. ಎರಡು ಕಡೆ ನೋಡಕೊಳ್ಳಬಹುದು ಎಂದು ಉಡಾಫೆ ಉತ್ತರವನ್ನ ನೀಡಿದರು.
ತಮ್ಮ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಶಾಲೆಗಳ ಮಾಹಿತಿಯೇ ಇಲ್ಲವೆಂದರೆ ಯಾವ ರೀತಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆಂದು ತಮ್ಮ ಊಹೆಗೆ ಬಿಟ್ಟಿದ್ದು. ಅದೆಷ್ಟೋ ಪೋಷಕರಿಗೆ ಯಾವ ಶಾಲೆಯಲ್ಲಿ ಎಷ್ಟು ಶುಲ್ಕವಿದೆ ಸರ್ಕಾರದ ನಿಯಮದಂತೆ ಎಷ್ಟು ಶುಲ್ಕ ಕಟ್ಟಬೇಕು ಎಂಬ ಮಾಹಿತಿ ಇಲ್ಲ. ಜೊತೆಗೆ ವೆಬ್ ಸೈಟ್ ನಲ್ಲಿ ನೋಡುವಷ್ಟು ಅರಿವು ಪೋಷಕರಿಗೆ ಮಾಹಿತಿ ಇಲ್ಲದೆ ಇರುವುದರಿಂದ ಖಾಸಗಿ ಶಾಲೆಗಳು ಹೇಳುವಷ್ಠು ಶುಲ್ಕವನ್ನ ಕಟ್ಟಿ ತಮ್ಮ ಮಕ್ಕಳನ್ನು ಶಾಲೆಗೆ ದಾಖಲು ಮಾಡಿ ಬರುವಂತಾಗಿದೆ.
ಶಾಲಾ ಶುಲ್ಕದ ಜೊತೆಗೆ ಪಠ್ಯ ಪುಸ್ತಕ, ಸಮವಸ್ತ್ರ, ಬಸ್ ಶುಲ್ಕವೆಂದು ಖಾಸಗಿ ಶಾಲೆಗಳು ಪೋಷಕರ ಬಳಿ ದುಪ್ಪಟ್ಟು ಹಣ ವಸೂಲಿ ಮಾಡುತ್ತಿವೆ. ಆದರೆ ಇದನ್ನ ಪ್ರಶ್ನೆ ಮಾಡುವವರು ಇಲ್ಲದಂತಾಗಿದೆ. ಇನ್ನೂ ಇಲಾಖೆಯ ಜವಬ್ದಾರಿಯನ್ನ ಹೊಂದಿರುವ ಕ್ಷೇತ್ರ ಶಿಕ್ಷಣಾಧಿಕಾರಿ ತಲೆ ಕೆಡಿಸಿಕೊಳ್ಳದೇ ತಮ್ಮ ಕರ್ತವ್ಯವನ್ನೆ ಮರೆತಂತೆ ಕಾಣುತ್ತಿದೆ. ಜವಬ್ದಾರಿಯುತ ಸ್ಥಾನದಲ್ಲಿರುವ ಅಧಿಕಾರಿ ಉಢಾಪೆ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಇಲಾಖೆಯ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಗಮನಹರಿಸಿ ಖಾಸಗಿ ಶಾಲೆಗಳ ಶಾಲಾ ದಾಖಲಾತಿ ಶುಲ್ಕದ ವಿವರ ಪ್ರಚುರ ಪಡಿಸುವುದರ ಜೊತೆಗೆ ಪೋಷಕರಿಂದ ದುಪ್ಪಟ್ಟು ಹಣ ಸುಲಿಗೆಗೆ ಬ್ರೇಕ್ ಹಾಕಬೇಕಾಗಿದೆ.!
” ನಮ್ಮ ಬಳಿ ಮಾಹಿತಿ ಇಲ್ಲ ವೆಬ್ ಸೈಟ್ ನಲ್ಲೆ ಮಾಹಿತಿ ಸಿಗುತ್ತದೆ ಅಥವಾ ಖಾಸಗಿ ಶಾಲೆಗಳ ನಾಮಫಲಕದಲ್ಲಿ ಅಳವಡಿಸಿರುತ್ತಾರೆ. ನಿಗಧಿತ ಶುಲ್ಕದಿಂದ ಹೆಚ್ಚಿನ ಹಣ ವಸೂಲಿ ಮಾಡಿದ್ದಲ್ಲಿ ಪೋಷಕರು ದೂರು ಕೊಟ್ಟಲ್ಲಿ ಕ್ರಮ ಕೈಗೊಳ್ಳಲಾಗುವುದು.” – ನರೇಂದ್ರ ಕುಮಾರ್
ಕ್ಷೇತ್ರ ಶಿಕ್ಷಣಾಧಿಕಾರಿ. ಶಿಡ್ಲಘಟ್ಟ.
“ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದ ಕೊರತೆಯಿಂದ ಇದನ್ನೆ ಬಂಡವಾಳ ಮಾಡಿಕೊಂಡಿರುವ ಖಾಸಗಿ ಶಾಲೆಗಳಲ್ಲಿ ಶಿಕ್ಷಣವನ್ನ ವ್ಯಾಪಾರ ಮಾಡಿಕೊಂಡು ಪೋಷಕರಿಂದ ದುಪ್ಪಟ್ಟು ಹಣ ವಸೂಲಿ ಮಾಡಲಾಗುತ್ತಿದೆ. ಇನ್ನೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಈಕಡೆ ಗಮನಕೊಡುತ್ತಿಲ್ಲ. ಬಂದ ಪುಟ ಹೋದ ಪುಟ ಎಂಬಂತೆ ಅಡ್ಜೆಸ್ಟ್ ಮೆಂಟ್ ಮಾಡಿಕೊಂಡು ಹೋಗುತ್ತಿರುವಂತಿದೆ. ಇನ್ನಾದರೂ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕಾಗಿದೆ.”-ಹೆಸರನ್ನು ಹೇಳಲು ಇಚ್ಚಿಸದ ಪೋಷಕರು.
ವಿಶೇಷ ವರದಿ: ಕೋಟಹಳ್ಳಿ ಅನಿಲ್‌ಕುಮಾರ್