ಚಿಂತಾಮಣಿ : ತಾಲ್ಲೂಕಿನ ಕೈವಾರ ಗ್ರಾಮದಲ್ಲಿ ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿ ಮನೆಯಲ್ಲಿ ಸುಮಾರು 67 ವರ್ಷದ ಮಹಿಳೆ ಲಲಿತಮ್ಮ ಎಂಬುವರ ಕತ್ತನ್ನು ಕೊಯ್ದು ಆಕೆಯ ಕತ್ತಿನಲ್ಲಿದ್ದ ಚಿನ್ನದ ಸರ ಕದ್ದು ಪರಾರಿಯಾಗಿದ್ದ ಅರೋಪಿಯನ್ನು ಚಿಂತಾಮಣಿ ಗ್ರಾಮಾಂತರ ಠಾಣೆಯ ಪೊಲೀಸರು ಕೊಲೆಯಾದ ಆರು ದಿನಗಳಲ್ಲಿ ಪತ್ತೆಹಚ್ಚಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾ ಎಸ್.ಪಿ. ಕುಶಲ್ ಚೌಕ್ಸೆ ಮತ್ತು ಅಡಿಷನಲ್ ಎಸ್‌ಪಿ ರಜಾಕ್ ಇಮಾಮ್ ಖಾಸಿಮ್ ರವರು ಚಿಂತಾಮಣಿ ಉಪ ವಿಭಾಗದ ಡಿವೈಎಸ್‌ಪಿ ಪಿ.ಮುರಳೀಧರ್‌ರವರ ನೇತೃತ್ವದಲ್ಲಿ ಚಿಂತಾಮಣಿ ಗ್ರಾಮಾಂತರ ಠಾಣೆಯ ಪೊಲಿಸ್ ಇನ್ಸ್ಪೆಕ್ಟರ್ ಶಿವರಾಜ್ ಸೇರಿದಂತೆ 20ಕ್ಕೂ ಹೆಚ್ಚು ಮಂದಿಯ ತಂಡವನ್ನು ರಚಿಸಿ ಕೊಲೆ ಅರೋಪಿಗೆ ಬಲೆ ಬೀಸಿದ್ದರು.
ಅರೋಪಿಯ ಪತ್ತೆ ಬಗ್ಗೆ ಪತ್ರಿಕಾಗೋಷ್ಟಿ ನಡೆಸಿದ ಎಸ್.ಪಿ. ಕುಶಲ್ ಚೌಕ್ಸೆರವರು ಕೈವಾರ ಸೇರಿದಂತೆ ಇತರೆಡೆ ಸಿಸಿ ಕ್ಯಾಮರಾಗಳ ಪರಿಶೀಲನೆ ಮತ್ತು ಮೊಬೈಲ್ ಟವರ್ ಲೊಕೇಷನ್‌ಗಳ ಮೊರೆ ಹೋದ ನಮ್ಮ ಅಪರಾದ ದಳದ ತಂಡ ಸಿಸಿ ಕ್ಯಾಮರಾಗಳ ಪೊಟೇಜ್‌ಗಳನ್ನು ಸಂಗ್ರಹಿಸಿ ತಾಂತ್ರಿಕ ಮತ್ತು ವೈಜ್ಞಾನಿಕ ತನಿಖಾ ಪದ್ದತಿಗಳನ್ನು ಅಳವಡಿಸಿ ಅರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವಿವರಿಸಿದರು.
ಬಂಧಿತ ಆರೋಪಿಯನ್ನು ಶಿಡ್ಲಘಟ್ಟ ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮದ 30 ವರ್ಷದ ಟಿ.ಎಸ್. ದೇವರಾಜ್ ಬಿನ್ ಶ್ರೀನಿವಾಸಪ್ಪ ಎಂದು ಗುರುತಿಸಲಾಗಿದೆ, ಕೊಲೆ ಮಾಡಿದ ಅರೋಪಿಯಿಂದ ದ್ವಿಚಕ್ರ ವಾಹನ ಮತ್ತು 3ಲಕ್ಷ ರೂ ಬೆಲೆ ಬಾಳುವ ಮೃತರ ಬಂಗಾರದ ಕತ್ತಿನ ಸರ ಹಾಗೂ ಕತ್ತಿನ ಸರ ಮಾರಾಟ ದಿಂದ ಅರೋಪಿಗೆ ಬಂದಿದ್ದ 90 ಸಾವಿರ ರೂಗಳನ್ನು ಅಮಾನತ್ತುಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಸಹ ಯಶಸ್ವಿಯಾಗಿದ್ದಾರೆ ಎಂದು ವಿವರಿಸಿದರು.
ಕೈವಾರದ ನಿವೃತ್ತ ಸೆಕ್ರೆಟರಿ ಲೇಟ್ ಗೋವಿಂದಪ್ಪನವರ ಪತ್ನಿ 70 ವರ್ಷದ ಲಲಿತಮ್ಮ ಮತ್ತು ಕೊಲೆ ಮಾಡಿದ ಅರೋಪಿ ದೇವರಾಜ್ ರವರು ಸಂಬಂಧಿಕರಾಗಿದ್ದು ಅವರ ನಡುವೆ ಹಣದ ಲೇವಾದೇವಿ ಇದ್ದು ಲಲಿತಮ್ಮ ಒಬ್ಬಳೇ ಮನೆಯಲ್ಲಿರುವುದನ್ನು ತಿಳಿದ ಅರೋಪಿ ಆಗಸ್ಟ್ 5 ರಂದು ಸೋಮವಾರ ಮದ್ಯಾಹ್ನ ಮನೆಗೆ ಬಂದವನು ಮತ್ತಷ್ಟು ಸಾಲ ಕೇಳಿದ್ದಾನೆ, ಹಳೆಯ ಸಾಲ ವಾಪಸ್ಸು ನೀಡದೆ ಮತ್ತೆ ಸಾಲಕ್ಕೆ ಬಂದಿರುವ ಬಗ್ಗೆ ಲಲಿತಮ್ಮ ತಗಾದೆ ತೆಗೆದಾಗ ಕುಪಿತಗೊಂಡ ಆರೋಪಿ ವೃದ್ಧೆಯ ಕೆನ್ನಗೆ ಬಾರಿಸಿದ್ದಾನೆ.
ಕೆನ್ನೆಗೆ ಬಾರಿಸಿದ ಹಿನ್ನೆಲೆಯಲ್ಲಿ ಆಕೆ ಕೆಳಕ್ಕೆ ಬಿದ್ದು ಹೋಗಿದ್ದಾಳೆ, ಎಚ್ಚರಗೊಂಡರೆ ತಾನು ಹಲ್ಲೆ ಮಾಡಿರುವ ವಿಷಯ ಬಹಿರಂಗವಾಗುವ ಭಯದಿಂದ ಆಕೆಯನ್ನು ಕೊಲೆ ಮಾಡಿ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಎತ್ತಿಕೊಂಡು ಪರಾರಿಯಾಗುವ ಮೂಲಕ ಚಿನ್ನದ ಸರಕ್ಕೆ ಕೊಲೆಯಾಗಿದೆ ಎಂದು ಬಿಂಬಿಸಲು ಹೋಗಿರುವುದಾಗಿ ಅರೊಪಿ ದೇವರಾಜ್ ಪೊಲೀಸರ ವಿಚಾರಣೆಯಲ್ಲಿ ಬಹಿರಂಗ ಪಡಿಸಿದ್ದಾನೆ.
ಮಗ ನೀಡಿದ ದೂರಿನ ಮೇಲೆ ಪ್ರಕರಣ ದಾಖಲು ಮಾಡಿಕೊಂಡ ಚಿಂತಾಮಣಿ ಗ್ರಾಮಾಂತರ ಠಾಣೆಯ ಪೊಲೀಸರು ಒಂದು ವಾರದೊಳಗೆ ಅರೋಪಿಯನ್ನು ಬಂಧಿಸಿದ ಗ್ರಾಮಾಂತರ ಠಾಣೆಯ ಪೊಲೀಸ್ ಅಧಿಕಾರಿಗಳ ಮತ್ತು ತಂಡವನ್ನು ಚಿಕ್ಕಬಳ್ಳಾಪುರ ಜಿಲ್ಲಾ ರಕ್ಷಣಾಧಿಕಾರಿ ಕುಶಲ್ ಚೌಕ್ಸೆ ಅಭಿನಂಧಿಸಿ ಪ್ರಶಂಸನಾ ಪತ್ರ ಸಹ ನೀಡಿದ್ದಾರೆ.