ಕನ್ನಡ ನಾಡು, ನುಡಿ, ಜಲ, ಭಾಷೆ ನಮ್ಮ ಹೆಮ್ಮೆ, ಕನ್ನಡದ ಪ್ರೀತಿ ಹೃದಯದಲ್ಲಿದೆ.
ಶಿಡ್ಲಘಟ್ಟ : ತಾಲ್ಲೂಕಿನ ಹರಳಹಳ್ಳಿ ಗ್ರಾಮದಲ್ಲಿ ಶ್ರೀ ಭುವನೇಶ್ವರಿ ಕನ್ನಡ ಯುವಕರ ಸಂಘದ ವತಿಯಿಂದ ಊರಿನ ಗ್ರಾಮಸ್ಥರು, ಯುವಕರು, ಕನ್ನಡ ಪ್ರೇಮಿಗಳು ಆಯೋಜಿಸಿದ್ದ 69 ನೇ ವರ್ಷದ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಸಂಭ್ರಮದಿಂದ ಆಚರಣೆ ಮಾಡಿದರು.
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಕೆ.ಎಂ.ಎಫ್. ನಿವೃತ್ತ ವ್ಯವಸ್ಥಾಪಕರಾದ ಡಾ ಹೆಚ್ ಚನ್ನೇಗೌಡ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು. ಕನ್ನಡ ತಾಯಿ ಭುವನೇಶ್ವರಿ ಭಾವಚಿತ್ರ ಹಾಗೂ ಕರ್ನಾಟಕ ರತ್ನ ದಿವಂಗತ ಡಾ. ಪುನೀತ್ ರಾಜ್ ಕುಮಾರ್ ರವರ ಪುಣ್ಯ ಸ್ಮರಣೆಯ ಪ್ರಯುಕ್ತ ಭಾವಚಿತ್ರಕ್ಕೆ ಪುಷ್ಪಮಾಲೆ ಹಾಕಿ ನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಜಾನಪದ ಕಲಾವಿದ ದೇವರಮಳ್ಳೂರು ಮಹೇಶ್ ಕನ್ನಡ ಗೀತೆಗಳು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಮೆರಗು ನೀಡಿದರು.
ಕನ್ನಡ ರಾಜ್ಯೋತ್ಸವ ಪ್ರಯುಕ್ತ ಏರ್ಪಡಿಸಲಾಗಿದ್ದ ವಿವಿಧ ಕ್ರಿಡೆಗಳಲ್ಲಿ ವಿಜೇತರಾದ ಶಾಲಾ ವಿದ್ಯಾರ್ಥಿಗಳಿಗೆ ಹೆಚ್.ಆರ್ ಚೌಡಯ್ಯ ಅವರಿಂದ ಬಹುಮಾನ ವಿತರಣೆ ಮಾಡಲಾಯಿತು.
ಭುವನೇಶ್ವರಿ ಕನ್ನಡ ಯುವಕರ ಸಂಘದ ಯುವ ನಾಯಕ ಶ್ರೀನಾಥ್ ಮತ್ತು ಅವರ ತಂಡ ಊರಿನಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಚರಿಸಿದ್ದಾರೆ. ಪತ್ರಿಕೆಯೊಂದಿಗೆ ಮಾತನಾಡಿದ ಅವರು ನಾಡು, ನುಡಿ, ಜಲ, ಭಾಷೆಯ ಮೇಲೆ ಕನ್ನಡಿಗರಾದ ನಮಗೆ ಪ್ರೀತಿ ಇದೆ. ನಮ್ಮ ಭಾಷೆ ನಮ್ಮ ಹೆಮ್ಮೆ ಊರಿನ ಹಿರಿಯರು, ಎಲ್ಲರ ಸಹಕಾರದಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಿದ್ದೇವೆ. ಎಲ್ಲಾದರೂ ಇರು ಎಂತಾದರೂ ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಎಂಬುವುದು ನಮ್ಮ ಹೃದಯಲ್ಲಿದೆ ಎಂದು ಸಂತಸ ವ್ಯಕ್ತಪಡಿಸಿದರು. ಹರಳಹಳ್ಳಿ ಶ್ರೀ ಭುವನೇಶ್ವರಿ ಯುವಕರ ಸಂಘದಿಂದ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಚರಣೆ ಮಾಡುವುದು ತುಂಬಾ ಖುಷಿಯ ವಿಚಾರವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಾನಪದ ಪರಿಷತ್ ತಾಲ್ಲೂಕು ಅಧ್ಯಕ್ಷ ತ್ಯಾಗರಾಜ್, ಹರಳಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಹೆಚ್.ಎಂ. ಪಟಾಲಪ್ಪ, ಗ್ರಾ.ಪಂ. ಸದಸ್ಯ ಆರ್. ಮುನಿಯಪ್ಪ, ಹರಳಹಳ್ಳಿ ಹೆಚ್ ಎಂ. ನಂದಕುಮಾರ್, ಶಶಿಕುಮಾರ್, ಊರಿನ ಗ್ರಾಮಸ್ಥರು, ಯುವಕರು, ಶಾಲಾ ಮಕ್ಕಳು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
ವರದಿ : ಕೋಟಹಳ್ಳಿ ಅನಿಲ್ ಕುಮಾರ್ ಕೆ.ಎ