ಚಿಕ್ಕಬಳ್ಳಾಪುರ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಹಾಗೂ ಕನ್ನಡ ರಥ ಯಾತ್ರೆಗೆ ವರ್ಷ ತುಂಬುತ್ತಿರುವ ಸಂಭ್ರಮದ ಹಿನ್ನೆಲೆಯಲ್ಲಿ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಯಾತ್ರೆಗೆ ಜಿಲ್ಲೆಯ ಗೌರಿಬಿದನೂರು ತಾಲೂಕಿನಲ್ಲಿ ಮಂಗಳವಾರ ಸ್ವಾಗತ ನೀಡಲಾಯಿತು.
ಗೌರಿಬಿದನೂರು ತಾಲ್ಲೂಕಿಗೆ ಆಗಮಿಸಿದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ರಥ ವನ್ನು ಮಂಗಳವಾರ ತಹಸೀಲ್ದಾರ್ ಮಹೇಶ್ ಪತ್ರಿ ಸ್ವಾಗತಿಸಿ ತಾಲೂಕಿನಾದ್ಯಂತ ಸಂಚರಿಸಲು ಚಾಲನೆ ನೀಡಿದರು.
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮಹತ್ವ ಹಾಗೂ ಕನ್ನಡದ ಬಗ್ಗೆ ಅಭಿಮಾನ ಮೂಡಿಸುವ ಸಂದೇಶವನ್ನು ಎಲ್ಲರಿಗೂ ತಲುಪಿಸಬೇಕು. ಆ ನಿಟ್ಟಿನಲ್ಲಿ ಸಾರ್ವಜನಿಕರು ಸಹಕಾರ ನೀಡಿ ರಥ ಯಾತ್ರೆಯನ್ನು ಯಶಸ್ವಿ ಮಾಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರೊ. ಕೋಡಿರಂಗಪ್ಪ, ಕನ್ನಡ ಪರ ಸಂಘ ಸಂಸ್ಥೆಗಳ ಮುಖಂಡರು, ಪದಾಧಿಕಾರಿಗಳು, ಕನ್ನಡ ಪ್ರೇಮಿಗಳು ಸ್ಥಳೀಯ ಜನಪ್ರತಿನಿಧಿಗಳು, ಕಲಾತಂಡಗಳು, ಶಾಲಾ ಮಕ್ಕಳು, ಸಾರ್ವಜನಿಕರು ಇದ್ದರು.