ಗೌರಿಬಿದನೂರು : ನಗರದ ಹೊರವಲಯದಲ್ಲಿರುವ ಪ್ರತಿಷ್ಟಿತ ಲೀಡರ್ಸ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಸೋಮವಾರ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲಾಗಿತ್ತು.
ಈ ವೇಳೆ ಶಾಲೆಯ ಪುಟಾಣಿ ಮಕ್ಕಳು ಶ್ರೀಕೃಷ್ಣ, ರಾಧೆ, ರುಷ್ಮಣಿ ವೇಷದಾರಿಗಳಾಗಿ ಬಂದು ನಿಜವಾದ ಶ್ರೀಕೃಷ್ಣ, ರಾಧೆ ಮತ್ತು ರುಕ್ಚ್ಮಿಣಿಯರನ್ನೇ ನಾಚಿಸುವಂತಹ ದೈವೀಸ್ವರೂಪರಾಗಿದ್ದರು.
ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಮುಖ್ಯಸ್ಥರದಾ ಬಿ.ಎಲ್.ಶಿವರಾಮರೆಡ್ಡಿ ಮಾತನಾಡಿ, ಪೋಷಕರ ಮತ್ತು ಶಿಕ್ಷಕರ ಪಾಲಿಗೆ ಈ ಮಕ್ಕಳೇ ನಿಜವಾದ ದೇವರುಗಳು. ಇವರಲ್ಲಿನ ಮುಗ್ಧತೆ, ಪ್ರೀತಿ, ವಿಶ್ವಾಸ, ವಿನಯತೆಗಳು ಎಲ್ಲರನ್ನೂ ಮೂಕವಿಸ್ಮಿತರನ್ನಾಗಿ ಮಾಡುತ್ತವೆ. ಬಾಲ್ಯದ ಹಂತದಲ್ಲಿಯೇ ಮಕ್ಕಳಿಗೆ ಅವರ ಕಲಿಕಾ ದಾಹಕ್ಕೆ ತಕ್ಕಂತೆ ಶಿಕ್ಷಣ ಕೊಡಿಸಿದಲ್ಲಿ ಭವಿಷ್ಯದ ನಕ್ಷತ್ರಗಳಾಗಿ ಸಮಾಜದಲ್ಲಿ ಮಿಂಚುತ್ತಾರೆ. ಸಾಧಕರಾಗಿ ಈ ದೇಶದ ಕೀರ್ತಿಯನ್ನು ಹೆಚ್ಚಿಸಿ ಪೋಷಕರು ಬದುಕಿಗೆ ಸಾರ್ಥಕತೆ ನೀಡುತ್ತಾರೆ. ಇಂತಹ ದೈವೀಸ್ವರೂಪ ಮಕ್ಕಳ ಭವಿಷ್ಯವನ್ನು ತಿದ್ದುವ ಜವಾಬ್ದಾರಿ ನಮ್ಮ ಶಾಲೆಗೆ ದೊರೆತಿರುವುದು ನಿಜಕ್ಕೂ ಅದೃಷ್ಟವಾಗಿದೆ ಎಂದು ಹೇಳಿದರು.
ಶಾಲೆಯ ಆಡಳಿತಾಧಿಕಾರಿ ಚಂದನ್ ಮಾತನಾಡಿ, ಗ್ರಾಮೀಣ ಭಾಗದಲ್ಲಿನ ಮಕ್ಕಳಿಗೆ ಮೌಲ್ಯಾಧಾರಿತ ಮತ್ತು ಗುಣಮಟ್ಟದ ಶಿಕ್ಷಣವನ್ನು ನೀಡುವ ಸಲುವಾಗಿ ಒಂದೂವರೆ ದಶಕದ ಹಿಂದೆ ಆರಂಭವಾದ ಈ ವಿದ್ಯಾಸಂಸ್ಥೆಯು ಪ್ರತೀ ವರ್ಷ ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ಆಸರೆಯಾಗಿದೆ. ಇಂತಹ ಸಂಸ್ಥೆಯ ಮೇಲೆ ನಂಭಿಕೆ ಮತ್ತು ವಿಶ್ವಾಸವನ್ನಿಟ್ಟಿರುವ ಪೋಷಕರು ತಮ್ಮ ಮಕ್ಕಳ ಸಾಧನೆಯ ಬಗ್ಗೆ ನಿರೀಕ್ಷಿಸುತ್ತಿದ್ದಾರೆ. ನಿಮ್ಮೆಲ್ಲರ ನಿರೀಕ್ಷೆಗೂ ಮೀರಿದ ಮಟ್ಟದಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿ ಹೊಂದುವ ಭರವಸೆಯನ್ನು ನಾವು ಕೊಡಲಿದ್ದೇವೆ. ನಿಮ್ಮೆಲ್ಲರ ಸಹಕಾರದಿಂದ ಮುಂದಿನ ದಿನಗಳಲ್ಲಿ ಲೀಡರ್ ಸಂಸ್ಥೆ ಮತ್ತಷ್ಟು ಮೌಲ್ಯಾಧಾರಿತವಾಗಿ ರೂಪುಗೊಳ್ಳಲಿದೆ ಎಂದು ಹೇಳಿದರು.
ವಿದ್ಯಾ ಸಂಸ್ಥೆಯ ಶೈಕ್ಷಣಿಕ ವಿಭಾಗದ ನಿರ್ದೇಶಕರು ಮತ್ತು ಪ್ರಾಂಶುಪಾಲರಾದ ಐ.ನಾಗೇಶ್ವರರಾವ್ ಮಾತನಾಡಿ, ಪ್ರತೀ ಮಕ್ಕಳಲ್ಲಿ ಅಗಾಧವಾದ ಸುಪ್ತ ಪ್ರತಿಭೆ ಅಡಗಿದ್ದು ಅದನ್ನು ಹೊರತರಲು ಶಾಲೆಯಲ್ಲಿನ ಇಂತಹ ಕಾರ್ಯಕ್ರಮಗಳು ಉತ್ತಮ ವೇದಿಕೆಗಳಾಗಿವೆ. ಪೋಷಕರು ಮಕ್ಕಳಿಗೆ ಶೈಕ್ಷಣಿಕ ಪ್ರಗತಿಯ ಜೊತೆಗೆ ಇಂತಹ ಕಲೆ, ಸಾಹಿತ್ಯ, ನೃತ್ಯ ಸೇರಿದಂತೆ ಇತರ ಕಲಿಕೆಯನ್ನು ಪ್ರೋತ್ಸಾಹಿಸಬೇಕಾಗಿದೆ. ಇದರಿಂದಾಗಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲೆಯ ಕಾರ್ಯದರ್ಶಿ ಬಿ.ಎನ್.ನರಸಿಂಹಮೂರ್ತಿ, ಪೋಷಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.