ಶಿಡ್ಲಘಟ್ಟ : ಸರ್ಕಾರಿ ಕೆಲಸ ದೇವರ ಕೆಲಸ ಜನ ಸೇವೆಯೇ ಜನಾರ್ದನ ಸೇವೆ. ಸರ್ಕಾರಿ ಕಛೇರಿಯಲ್ಲಿ ಜವಬ್ದಾರಿಯುತ ಸ್ಥಾನದಲ್ಲಿ ಕುಳಿತು ಜನ ಸೇವೆ ಮಾಡಬೇಕಿದ್ದ ಅಧಿಕಾರಿಗಳು ಸರ್ಕಾರದ ಆದೇಶ ನೀತಿ ನಿಯಮಗಳು ಗಾಳಿಗೆ ತೂರಿ ನೀತಿ ಸಂಹಿತೆ ಉಲ್ಲಂಘಿಸಿ ಕರ್ತವ್ಯದ ಸಮಯದಲ್ಲೆ ಬರ್ತಡೇ ಪಾರ್ಟಿ ಆಚರಿಸಿಕೊಂಡು ಮಹಿಳಾ ಅಧಿಕಾರಿಗೆ ಕೇಕ್ ತಿನ್ನಿಸುತ್ತಿರುವ ಪೊಟೋಸ್ ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆ ಮತ್ತು ಟೀಕೆಗೆ ಗುರಿಯಾಗಿದೆ.
ಶಿಡ್ಲಘಟ್ಟ ತಾಲ್ಲೂಕು ಆಡಳಿತ ಸೌಧದಲ್ಲಿರುವ ಆಹಾರ ಇಲಾಖೆಯ ಕಛೇರಿಯಲ್ಲೆ ಆಹಾರ ನಿರೀಕ್ಷಕ ಪ್ರಕಾಶ್ ಅವರು ತಮ್ಮ ಬರ್ತಡೇಯನ್ನು ತಮ್ಮ ಸಿಬ್ಬಂದಿ ಹಾಗೂ ಇತರರೊಂದಿಗೆ ಆಚರಿಸಿಕೊಂಡು ಆಹಾರ ಶಾಖೆಯ ಶಿರಸ್ತೆದಾರ್ ಧನಲಕ್ಷ್ಮೀ ಅವರಿಗೆ ರೀತಿಯಲ್ಲಿ ಕೇಕ್ ತಿನ್ನಿಸುತ್ತಿರುವ ಪೊಟೋಸ್ ಎಲ್ಲಡೆ ಹರಿದಾಡುತ್ತಿವೆ. ಇವರನ್ನು ಹೇಳೋರು ಕೇಳೋರು ಯಾರೂ ಇಲ್ಲವಾ ಅಥವಾ ಸರ್ಕಾರಿ ಕಛೇರಿಯಲ್ಲಿ ಈ ರೀತಿ ಮೋಜು ಮಸ್ತು ಮಾಡುವುದು ಸರಿಯೇ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ರೈತ ಸಂಘ ಅಕ್ಷೇಪ: ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್ ಪತ್ರಿಕೆಯೊಂದಿಗೆ ಮಾತನಾಡಿ ಸರ್ಕಾರಿ ಕಛೇರಿಯಲ್ಲಿ ಸರ್ಕಾರದ ಕರ್ತವ್ಯ ನಿರ್ವಹಣೆಯ ಸಮಯದಲ್ಲಿ ಯಾವ ಸರ್ಕಾರಿ ಅಧಿಕಾರಿಯು ಅವರ ಸ್ವಂತ ಜನ್ಮ ಆಚರಣೆ ಮಾಡಬಾರೆಂಬ ಆದೇಶವಿದ್ದರೂ ಜೊತೆಗೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗಲೇ ತಾಲ್ಲೂಕು ಆಹಾರ ನೀರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಕಾಶ್ ಅವರು ಕಛೇರಿಯ ಸಿಬ್ಬಂದಿಗಳು ಸೇರಿದಂತೆ ಹೊರಗಿನವರನ್ನ ಸೇರಿಸಿಕೊಂಡು ಕೇಕ್ ಕತ್ತರಿಸಿ ಬರ್ತಡೇ ಕಾರ್ಯಕ್ರಮವನ್ನು ಮಾಡಿದ್ದಾರೆ, ಇದು ಎಷ್ಟರ ಮಟ್ಟಿಗೆ ಸರಿಯಿದೆ. ಪ್ರಕಾಶ್ ಅವರು ಇದಕ್ಕೂ ಮೊದಲು ಇಲ್ಲೆ ಎಸ್.ಡಿ.ಎ ಆಗಿ ಕೆಲಸ ಮಾಡಿದ್ದು, ಆನಂತರ ಆಹಾರ ನಿರೀಕ್ಷಕರಾಗಿ ಕರ್ತವ್ಯದಿಂದ ಅಮಾನತ್ತು ಆಗಿದ್ದರು.
ಚಿಂತಾಮಣಿಗೆ ತಾಲ್ಲೂಕಿಗೆ ವರ್ಗಾವಣೆಯಾದ ಬಳಿಕ ಅಲ್ಲಿಯೂ ಇಲಾಖೆಯಿಂದ ಅಮಾನತ್ತು ಆಗಿ ಅಲ್ಲಿಂದ ಬೇರೆ ಕಡೆ ವರ್ಗಾವಣೆಯಾಗಿದ್ದರು. ಪ್ರಸ್ತುತ ಪುನಃ ಶಿಡ್ಲಘಟ್ಟ ತಾಲ್ಲೂಕು ಆಹಾರ ಇಲಾಖೆಗೆ ನೀರೀಕ್ಷಕರಾಗಿ ಬಂದಿದ್ದು, ಬರ್ತಡೇ ಪಾರ್ಟಿ ಆಚರಿಸುವ ಮೂಲಕ ಸುದ್ದಿಯಾಗಿದ್ದಾರೆ. ಈ ಕಾರ್ಯಕ್ರಮ ಗಮನಿಸಿದ ಸಾರ್ವಜನಿಕ ವ್ಯಕ್ತಿಯೊಬ್ಬರು ಈ ಹಿಂದೆ ಚಿಂತಾಮಣಿ ತಾಲ್ಲೂಕು ತಹಶೀಲ್ದಾರ್ ಸರ್ಕಾರಿ ಕಛೇರಿಯಲ್ಲಿ ಬರ್ತಡೇ ಪಾರ್ಟಿ ಮಾಡಿಕೊಂಡಿದ್ದ ಪರಿಣಾಮ ಚಿಂತಾಮಣಿ ತಹಶೀಲ್ದಾರ್ ಅಮಾನತ್ತು ಆಗಿದ್ದರು ಎಂದು ಕೇಳಿದಂತಹ ಸಂದರ್ಭದಲ್ಲಿ ಹೇ ಹೋಗಯ್ಯ ನಾನು ಇಲ್ಲಿ 15 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ನನ್ನ ವಿರುದ್ದ ಯಾರು ಕ್ರಮ ಕೈಗೊಳ್ಳುತ್ತಾರೆಂದು ದರ್ಪತೋರಿದ್ದಾರೆ ಎನ್ನಲಾಗಿದೆ.
ಸರ್ಕಾರಿ ಆದೇಶ ಉಲ್ಲಂಘನೆ ಹಾಗೂ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಸರ್ಕಾರಿ ಕಛೇರಿಯಲ್ಲಿ ರಾಜಾ ರೋಷವಾಗಿ ಹುಟ್ಟು ಹಬ್ಬ ಆಚರಸಿಕೊಂಡಿರುವ ಆಹಾರ ನಿರೀಕ್ಷಕ ಪ್ರಕಾಶ್ ಮೇಲೆ ಜಿಲ್ಲಾಧಿಕಾರಿಗಳು ಕಾನೂನು ರೀತ್ಯಾ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಅಂತೂ ಆಹಾರ ನಿರೀಕ್ಷಕನ ಬರ್ತಡೇ ಪೊಟೋಸ್ ವೈರಲ್ ಆಗಿದ್ದು, ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೋ ಇಲ್ಲವೋ ಎಂದು ಕಾದು ನೋಡಬೇಕಿದೆ..