ಅಹಮದಾಬಾದ್: ಕಲಬುರಗಿ-ಬೆಂಗಳೂರು ಮತ್ತು ತಿರುವನಂತಪುರಂನಿಂದ ಮಂಗಳೂರುವರೆಗೆ ವಿಸ್ತರಿಸಿದ ರೈಲು ಸೇರಿದಂತೆ 10 ಹೊಸ ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಚಾಲನೆ ನೀಡಿದರು. ಜೊತೆಗೆ ದೇಶದ ವಿವಿಧ ಭಾಗಗಳಲ್ಲಿನ 85 ಸಾವಿರ ಕೋಟಿ ರೂಪಾಯಿಗಳ ರೈಲ್ವೆ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು.
ಬಳಿಕ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ನಾನು ನನ್ನ ಜೀವನವನ್ನು ರೈಲ್ವೆ ಹಳಿಗಳ ಮೇಲೆ ಪ್ರಾರಂಭಿಸಿದೆ. ಹಾಗಾಗಿ ನಮ್ಮ ರೈಲ್ವೆ ಸಂಪರ್ಕ ಎಷ್ಟು ಕೆಟ್ಟದಾಗಿದೆ ಎಂದು ನನಗೆ ಚೆನ್ನಾಗಿ ತಿಳಿದಿದೆ. ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರವು ರೈಲ್ವೆ ಅಭಿವೃದ್ಧಿಗೆ ಹಿಂದಿನ ಸರ್ಕಾರಕ್ಕಿಂತಲೂ 6 ಪಟ್ಟು ಹೆಚ್ಚು ಹಣವನ್ನು ಖರ್ಚು ಮಾಡಿದೆ ಎಂದು ಹೇಳಿದರು.
ಈ ಹಿಂದೆ ಮಂಡಿಸಲಾಗುತ್ತಿದ್ದ ಪ್ರತ್ಯೇಕ ರೈಲ್ವೆ ಬಜೆಟ್ ಅನ್ನು ನಾವು ನಿಲ್ಲಿಸಿದೆವು. ಅದನ್ನು ಕೇಂದ್ರ ಬಜೆಟ್‌ನಲ್ಲಿ ಸೇರಿಸಿದೆವು. ಇದರಿಂದ ಸರ್ಕಾರದ ಹಣವನ್ನು ರೈಲ್ವೆ ಅಭಿವೃದ್ಧಿಗೆ ಬಳಸಬಹುದಾಗಿದೆ. ನಾವು ಮಾಡುವ ಅಭಿವೃದ್ಧಿ ಕೆಲಸಗಳು ಚುನಾವಣೆ ಗೆಲ್ಲಲು ಮಾತ್ರ ಅಲ್ಲ, ರಾಷ್ಟ್ರದ ಪ್ರಗತಿಯ ದೃಷ್ಟಿಕೋನ ಹೊಂದಿರುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.
10 ವಂದೇ ಭಾರತ್ ರೈಲಿಗೆ ಚಾಲನೆ: ಕಲಬುರಗಿ-ಬೆಂಗಳೂರು, ಅಹಮದಾಬಾದ್ -ಮುಂಬೈ ಸೆಂಟ್ರಲ್, ಸಿಕಂದರಾಬಾದ್ -ವಿಶಾಖಪಟ್ಟಣಂ, ಮೈಸೂರು-ಡಾ ಎಂಜಿಆರ್ ಸೆಂಟ್ರಲ್ (ಚೆನ್ನೈ), ಪಾಟ್ನಾ-ಲಖನೌ, ನ್ಯೂ ಜಲಪೈಗುರಿ-ಪಾಟ್ನಾ, ಪುರಿ-ವಿಶಾಖಪಟ್ಟಣಂ, ಲಖನೌ-ಡೆಹ್ರಾಡೂನ್, ರಾಂಚಿ-ವಾರಣಾಸಿ ಮತ್ತು ಖಜುರಾಹೊ ದೆಹಲಿ (ನಿಜಾಮುದ್ದೀನ್) ನಡುವಿನ 10 ಹೊಸ ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ಚಾಲನೆ ನೀಡಿದರು.
ಜೊತೆಗೆ ಅಹಮದಾಬಾದ್-ಜಾಮ್‌ನಗರ ವಂದೇ ಭಾರತ್ ರೈಲನ್ನು ದ್ವಾರಕಾವರೆಗೆ, ಅಜ್ಜರ್ -ದೆಹಲಿ ಸರೈ ರೋಹಿಲ್ಲಾ ರೈಲನ್ನು ಚಂಡೀಗಢದವರೆಗೆ, ಗೋರಖ್‌ಪುರ-ಲಖನೌ ವಂದೇ ಭಾರತ್ ಅನ್ನು ಪ್ರಯಾಗರಾಜ್‌ವರೆಗೆ ಮತ್ತು ತಿರುವನಂತಪುರಂ-ಕಾಸರಗೋಡು ವಂದೇ ಭಾರತ್ ಅನ್ನು ಮಂಗಳೂರಿನವರೆಗೆ ವಿಸ್ತರಿಸಿದ 4 ವಂದೇ ಭಾರತ್ ರೈಲುಗಳಿಗೆ ಇದೇ ವೇಳೆ ಮೋದಿ ಚಾಲನೆ ನೀಡಿದರು.