Thursday, January 30, 2025
Homeಜಿಲ್ಲೆವಚನ ಸಾಹಿತ್ಯಕ್ಕೆ ಅಂಬಿಗರ ಚೌಡಯ್ಯರ ಕೊಡುಗೆ ಅಪಾರ: ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ

ವಚನ ಸಾಹಿತ್ಯಕ್ಕೆ ಅಂಬಿಗರ ಚೌಡಯ್ಯರ ಕೊಡುಗೆ ಅಪಾರ: ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ

ಜಿಲ್ಲಾಡಳಿತದಿಂದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ.

ಸಂವಿಧಾನ ಶಕ್ತಿ ನ್ಯೂಸ್’  ಚಿಕ್ಕಬಳ್ಳಾಪುರ : ಕರ್ನಾಟಕದ ಇತಿಹಾಸ ಮತ್ತು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ 12 ನೇ ಶತಮಾನ ಅತ್ಯಂತ ಮಹತ್ವದ ಘಟ್ಟವಾಗಿದ್ದು, ಸಮಾಜದಲ್ಲಿನ ಹಲವು ತಾರತಮ್ಯಗಳನ್ನು ಹೋಗಲಾಡಿಸಲು ಶಿವಶರಣರು ಕ್ರಾಂತಿಕಾರಿ ಹೋರಾಟಗಳನ್ನು ನಡೆಸಿದರು. 12 ನೇ ಶತಮಾನದ ಶಿವಶರಣರ ಚಿಂತನೆಗಳು ವಚನ ಸಾಹಿತ್ಯದ ಮೂಲಕ ನಮ್ಮೆಲ್ಲರಿಗೂ ಪ್ರೇರಣೆಯಾಗಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ತಿಳಿಸಿದರು.

ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮದಲ್ಲಿ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

12 ನೇ ಶತಮಾನದ ಶಿವ ಶರಣರು ಆಧ್ಯಾತ್ಮಿಕವಾಗಿ ಹೊಸ ಲೋಕವೊಂದನ್ನೇ ತೆರೆದಿಟ್ಟರು. ಹಲವು ತಾರತಮ್ಯಗಳ ವಿರುದ್ಧ ದನಿ ಎತ್ತುವ ಮೂಲಕ ಸಮಾಜದಲ್ಲಿನ ನಾನಾ ಅಂಕುಡೊಂಕುಗಳನ್ನು ತಿದ್ದಲು ಯತ್ನಿಸಿದರು. 800 ವರ್ಷಗಳ ಹಿಂದೆ ರಚನೆಯಾದ ಶಿವಶರಣರ ವಚನಗಳು ಸಾರ್ವಕಾಲಿಕ ಮತ್ತು ಸಾರ್ವತ್ರಿಕ. ಅಂಬಿಗರ ಚೌಡಯ್ಯನವರೂ ವಚನಸಾಹಿತ್ಯಕ್ಕೆ ತಮ್ಮದೇ ವಿಶಿಷ್ಟಕೊಡುಗೆ ನೀಡಿದ್ದಾರೆ. ಮನುಷ್ಯನ ಬದುಕಿನಲ್ಲಿ ಭಕ್ತಿ ಹೇಗಿರಬೇಕು ಹಾಗೂ ಮನುಷ್ಯ ಹೇಗೆ ಸಮಾಜದಲ್ಲಿ ಬದುಕಬೇಕು ಎಂಬುದನ್ನು ಅತ್ಯಂತ ಸರಳ,ಸುಂದರ ಭಾಷೆಯಲ್ಲಿ ಮನ ಮುಟ್ಟುವಂತೆ ಹೇಳಿದ್ದಾರೆ. ಅವರ ಚಿಂತನೆಗಳು ಇಂದಿಗೂ ಪ್ರಸ್ತುತ ಎಂದರು

ಅಂಬಿಗರ ಚೌಡಯ್ಯ ಅವರ ವಚನಗಳು ಒಂದು ಸಂಘ ಸಮುದಾಯಕ್ಕೆ ಸೀಮಿತವಲ್ಲ. ಅವರ ವಚನಗಳಲ್ಲಿ ಸಮಾನತೆ, ಸಾಮಾಜಿಕ ಸಾಮರಸ್ಯ ಅಡಗಿದ್ದು, ಪ್ರತಿಯೊಬ್ಬರೂ ಅವರ ಆದರ್ಶಗಳನ್ನು ಪಾಲಿಸಬೇಕು 12ನೇ ಶತಮಾನ ಎಂಬುದು ಕನ್ನಡ ನಾಡಿನ ಒಂದು ಸಾಹಿತ್ಯದ ಸುವರ್ಣ ಯುಗವಾಗಿದ್ದು, ಬಸವಣ್ಣನವರು ಸೇರಿದಂತೆ ಅನೇಕ ವಚನಕಾರರು ಸಾಮಾಜಿಕ ಕ್ರಾಂತಿಕಾರಿ ಬದಲಾವಣೆಗೆ ಶ್ರಮಿಸಿದರು. ನಾವು ಚಿಂತೆಯಲ್ಲೇ ಹುಟ್ಟಿ ಚಿಂತೆಯ ಜೊತೆಯಲ್ಲೇ ಹೋಗುತ್ತೇವೆ. ಈ ಹುಟ್ಟು ಸಾವಿನ ನಡುವೆ ಇರುವ ಸಮಯದಲ್ಲಿ ನಾವೆಲ್ಲರೂ ಕೂಡ ಒಂದು ಛಲದಿಂದ ಸಾಮಾಜಿಕ ಸುಧಾರಣೆಗಾಗಿ ಬದುಕಬೇಕು. ಸಾಧನೆ ಇಲ್ಲದಂತಹ ಸಾವು ಅದು ಸಾವಲ್ಲ ಎಂದು ಸಲಹೆ ನೀಡಿದರು.

ಉಪನ್ಯಾಸಕ ಬಿ.ವಿ ಪ್ರಕಾಶ್ ಅವರು ಮಾತನಾಡಿ, ಜಗತ್ತು ಕಂಡ ಶ್ರೇಷ್ಠ ದೇಶ ಭಾರತ. ಭಾರತ ಕಂಡ ಶ್ರೇಷ್ಠ ನಾಡು ನಮ್ಮ ಕನ್ನಡ ನಾಡು. ಈ ಕನ್ನಡ ನಾಡಿನ ಇತಿಹಾಸದಲ್ಲಿ ಸುವರ್ಣಾಕ್ಷದಲ್ಲಿ ಬರೆದಿರುವ ಒಂದು ಯುಗವೆಂದರೆ ಅದು 12ನೇ ಶತಮಾನ. ಇವತ್ತಿನ ಈ ಸಮಾಜಕ್ಕೆ ದಾರಿದೀಪವಾಗಿ ಅನೇಕ ವಚನಕಾರರ ಆದರ್ಶಗಳು ಜೀವಂತವಾಗಿವೆ. ಶಿವಶರಣರದಲ್ಲಿ ನಿಜಶರಣ ಎನಿಸಿಕೊಂಡ ಶ್ರೀ ಅಂಬಿಗರ ಚೌಡಯ್ಯ ತನ್ನ ಮಾತು ಮತ್ತು ಕೃತಿಗೂ ವ್ಯತ್ಯಾಸವಿಲ್ಲದಂತೆ ನಡೆದುಕೊಳ್ಳುವ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಯತ್ನಿಸಿದರು. ಶರಣರ ತತ್ವಸಿದ್ದಾಂತಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕು. ಅಂಬಿಗರ ಚೌಡಯ್ಯನವರು ಕೇವಲ ಒಂದು ಸಮಾಜಕ್ಕೆ ಮಾತ್ರ ಸೀಮಿತವಲ್ಲ, ಇಡೀ ಮನುಕುಲಕ್ಕೆ ದಾರಿ ದೀಪವಾಗಿದ್ದಾರೆ. ತಮ್ಮ ವಚನಗಳ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ವಿಶ್ವದಲ್ಲಿಯೇ ಭಾರತ ದೇಶವು ಹಲವಾರು ಮಹಾನ್ ವ್ಯಕ್ತಿಗಳು, ಚಿಂತಕರು, ಕ್ರಾಂತಿಕಾರರು ಹಾಗೂ ಸಾಧು ಸಂತರನ್ನು ಹೊಂದಿದ ಹೆಗ್ಗಳಿಕೆ ಪಡೆದಿದೆ. ಅಂತಹ ಮಹಾನ್ ಸಾಧಕರಿಂದ ಪ್ರತಿಯೊಬ್ಬರೂ ಪ್ರೇರೆಪಿತರಾಗಿ ಉತ್ತಮ ಶಿಕ್ಷಣ ಪಡೆದು ವಿಶ್ವದಲ್ಲಿಯೇ ನಮ್ಮ ದೇಶವನ್ನು ಜ್ಞಾನದ ಗುರು ಎಂದು ಹೆಸರಾಗುವಂತೆ ಶ್ರಮಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಸಮುದಾಯದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎನ್. ಭಾಸ್ಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್, ಜಿಲ್ಲಾ ಪಂಚಾಯತ್ ನ ಮುಖ್ಯ ಲೆಕ್ಕಾಧಿಕಾರಿ ಮುರುಗೇಶ್, ಸಮುದಾಯದ ಮುಖಂಡರಾದ ಕೆ.ಜಯರಾಮ್, ಆರ್.ಎ.ರವಿಕುಮಾರ್, ನರಸಿಂಹ, ಸುಬ್ರಮಣ್ಯಂ, ಜಿಲ್ಲಾ ಮಟ್ಟದ ಅಧಿಕಾರಿಗಳು, ಪದಾಧಿಕಾರಿಗಳು ಉಪಸ್ಥಿತರಿದ್ದರು.

Social Media Links
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!