6150 ಷೇರು ದಾರರ ಪೈಕಿ 5226 ಷೇರುದಾರರು ಪಟ್ಟಿಯಿಂದ ಕೊಕ್, ಕೇವಲ 924 ಷೇರುದಾರರಿಗೆ ಮಾತ್ರ ಮತದಾನದ ಹಕ್ಕು.
ಮತದಾನದ ಹಕ್ಕು ಕೊಡಿ, ಇಲ್ಲವಾದರೆ ಷೇರು, ಠೇವಣಿ ಹಣ ವಾಪಸ್ ನೀಡುವಂತೆ ರೈತರ ಅಗ್ರಹ.
ಶಿಡ್ಲಘಟ್ಟ : ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ಚುನಾವಣೆ ಘೋಷಣೆಯಾಗಿದ್ದು, ಪಿಕಾರ್ಡ್ ಬ್ಯಾಂಕ್ ನಲ್ಲಿ ಸುಮಾರು 6150 ಷೇರುದಾರರು ಠೇವಣಿ ಇಟ್ಟು ಷೇರು ಹೊಂದಿದ್ದು, ಸರಿ ಸುಮಾರು 5226 ಷೇರುದಾರರನ್ನು ಮತದಾರರ ಪಟ್ಟಿಯಿಂದ ಕೈ ಬಿಟ್ಟಿರುವ ಹಿನ್ನೆಲೆ ಬ್ಯಾಂಕ್ ಆಡಳಿತ ಮಂಡಳಿಯ ಅಧಿಕಾರಿಗಳು ರೈತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ತಾಲ್ಲೂಕಿನ ವಿವಿಧ ರೈತ ಸಂಘಗಳು ಪ್ರತಿಭಟನೆ ನಡೆಸಿ ಷೇರು ಹೊಂದಿರುವವರಿಗೆ ಮತದಾನದ ಹಕ್ಕು ಕಲ್ಪಿಸಿಕೊಡಬೇಕು. ಇದು ರಾಜಕೀಯ ಹುನ್ನಾರದಿಂದ ಬ್ಯಾಂಕ್ ಅಧಿಕಾರಿಗಳು 6150 ಮಂದಿ ಷೇರುದಾರರ ಪೈಕಿ 924 ಮಂದಿಗೆ ಮಾತ್ರ ಮತದಾನದ ಹಕ್ಕು ನೀಡಿದ್ದಾರೆ. ಷೇರು ಹೊಂದಿರುವ ಎಲ್ಲರಿಗೂ ಮತದಾನದ ಹಕ್ಕು ನೀಡಬೇಕು ಇಲ್ಲವಾದರೆ ರೈತರು ಠೇವಣಿ ಮಾಡಿರುವ ಹಣ ಮತ್ತು ಷೇರು ಮೊತ್ತವನ್ನ ವಾಪಸ್ ಕೊಡಬೇಕಬೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ.
ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡರ ರೈತ ಸಂಘದ ನಿಯೋಗವು ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿ ಅವರು ಪಿಕಾರ್ಡ್ ಬ್ಯಾಂಕ್‍ನಲ್ಲಿ ಷೇರು ಹಾಗೂ ಠೇವಣಿ ಇರುವವರಿಗೂ ಮತದಾನದ ಹಕ್ಕನ್ನು ಕೊಟ್ಟಿಲ್ಲ. ಮತದಾರರ ಪಟ್ಟಿಯಿಂದ ಕೈ ಬಿಟ್ಟಿದ್ದಕ್ಕೆ ಮುಂಚಿತವಾಗಿ ಮಾಹಿತಿಯಾಗಲಿ, ನೊಟೀಸ್ ಆಗಲಿ ನೀಡಿಲ್ಲ. ಪಿಕಾರ್ಡ್ ಬ್ಯಾಂಕ್‍ನಲ್ಲಿ 6150 ಮಂದಿ ಷೇರುದಾರರು ಹಾಗೂ ಠೇವಣಿದಾರರು ಇದ್ದಾರೆ. ಆದರೆ ಈ ಪೈಕಿ ಕೇವಲ 924 ಮಂದಿಗೆ ಮಾತ್ರವೇ ಮತದಾನ ಮಾಡುವ ಹಕ್ಕು ನೀಡಿದ್ದು ಇನ್ನುಳಿದ 5226 ಮಂದಿನ್ನು ಮತದಾರರ ಪಟ್ಟಿಯಿಂದ ಕೈ ಬಿಡಲಾಗಿದೆ ಎಂದರು.
ಮತದಾರರ ಪಟ್ಟಿಯಿಂದ ಕೈ ಬಿಡುವಾಗ ಕನಿಷ್ಠ ನೊಟೀಸ್ ಕೂಡ ಕೊಟ್ಟಿಲ್ಲ. ಕಾರಣ ಕೇಳಿ ನೊಟೀಸ್ ಸಹ ನೀಡದೆ ಏಕಾ ಏಕಿ ಮತದಾರರ ಪಟ್ಟಿಯಿಂದ ರೈತರನ್ನು ಕೈಬಿಟ್ಟಿರುವುದರ ಹಿಂದೆ ರಾಜಕೀಯ ಹುನ್ನಾರ ನಡೆದಿದೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಹಿರಿಯ ಅಧಿಕಾರಿಗಳು ತನಿಖೆ ನಡೆಸಿ ರೈತರಿಗೆ ನೊಟೀಸ್ ನೀಡದೆ ಮತದಾರರ ಪಟ್ಟಿಯಿಂದ ಕೈ ಬಿಡಲು ಕಾರಣರಾದವರ ವಿರುದ್ದ ಕ್ರಮ ಕೈಗೊಳ್ಳಬೇಕು ಮತ್ತು ಷೇರುದಾರರ ಹಾಗೂ ಠೇವಣಿ ಇಟ್ಟಿರುವ ರೈತರಿಗೆ ಮತದಾನದ ಹಕ್ಕನ್ನು ನೀಡಬೇಕೆಂದು ಆಗ್ರಹಿಸಿದರು.
ಚಿಂತಾಮಣಿ ಉಪ ವಿಭಾಗದ ಡಿವೈಎಸ್ಪಿ ಮುರಳೀಧರ್ ಅವರ ಸಮ್ಮುಖದಲ್ಲಿ ಗುರುವಾರದಂದು ನಡೆದ ಸಭೆಯಲ್ಲಿ ಮಾತನಾಡಿದ ಅವರು ರೈತರು ನಮಗೆ ನೊಟೀಸ್ ನೀಡದೆ ಏಕಾ ಏಕಿ ನಮ್ಮ ಹೆಸರನ್ನು ಮತದಾರರ ಪಟ್ಟಿಯಿಂದ ಕೈ ಬಿಡಲಾಗಿದೆ ಎಂದು ದೂರಿದ್ದಾರೆ. ಆದರೆ ಬ್ಯಾಂಕ್ ಅಧಿಕಾರಿಗಳು ನೊಟೀಸ್ ನೀಡಿ ಸ್ವೀಕೃತಿ ಇಟ್ಟುಕೊಂಡಿದ್ದೇವೆ ಎನ್ನುತ್ತಾರೆ. ಹಾಗಾಗಿ ಇಲ್ಲಿ ಯಾರಿಗೂ ಗೊಂದಲಗಳು ಬೇಡ. ಇಂದು ಮದ್ಯಾಹ್ನದ ವೇಳೆಗೆ ಮತದಾರರ ಪಟ್ಟಿಯಿಂದ ಕೈ ಬಿಟ್ಟ ರೈತರಿಗೆ ನೊಟೀಸ್ ನೀಡಿ ಅವರ ಗಮನಕ್ಕೆ ತರಲಾಗಿದೆಯಾ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು, ಒಂದೊಮ್ಮೆ ನೊಟೀಸ್ ಕೊಟ್ಟಿಲ್ಲ ಎನ್ನುವುದಾದರೆ ಸಂಬಂಧಿಸಿದ ಅಧಿಕಾರಿ, ಸಿಬ್ಬಂದಿ ವಿರುದ್ದ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದರು.
ಇಂದು ಮದ್ಯಾಹ್ನ 12 ಗಂಟೆಗೆ ಪುನಃ ರೈತರು, ಬ್ಯಾಂಕ್ ಅಧಿಕಾರಿಗಳ ಸಭೆ ಕರೆದು ಸಭೆಯಲ್ಲಿ ಮತದಾರರ ಪಟ್ಟಿಯಿಂದ ಕೈ ಬಿಟ್ಟರುವ ಬಗ್ಗೆ ರೈತರಿಗೆ ಅಧಿಕಾರಿಗಳು ದಾಖಲೆ ಸಮೇತ ಮಾಹಿತಿ ನೀಡಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಪಿಕಾರ್ಡ್ ಬ್ಯಾಂಕ್‍ನ ವ್ಯವಸ್ಥಾಪಕ ಶ್ರೀನಾಥ್, ಸರ್ಕಲ್ ಇನ್ಸ್‍ಪೆಕ್ಟರ್, ರೈತ ಸಂಘದ ತಾಲೂಕು ಅಧ್ಯಕ್ಷ ತಾದೂರು ಮಂಜುನಾಥ್, ವೀರಾಪುರ ಮುನಿನಂಜಪ್ಪ, ವೇಣುಗೋಪಾಲ್, ಎ.ರಾಮಚಂದ್ರಪ್ಪ ಇನ್ನಿತರರು ಹಾಜರಿದ್ದರು.
ವರದಿ : ಕೋಟಹಳ್ಳಿ ಅನಿಲ್ ಕುಮಾರ್ ಕೆ.ಎ