Tuesday, January 14, 2025
Homeಜಿಲ್ಲೆಕೈಗಾರಿಕೆಗಳು ಅಭಿವೃದ್ಧಿಯಾದರೆ ದೇಶದ ಪ್ರಗತಿ ಸಾಧಿಸಬಹುದು: ಎನ್.ಎಚ್ ಶಿವಶಂಕರ್ ರೆಡ್ಡಿ

ಕೈಗಾರಿಕೆಗಳು ಅಭಿವೃದ್ಧಿಯಾದರೆ ದೇಶದ ಪ್ರಗತಿ ಸಾಧಿಸಬಹುದು: ಎನ್.ಎಚ್ ಶಿವಶಂಕರ್ ರೆಡ್ಡಿ

‘ಸಂವಿಧಾನ ಶಕ್ತಿ ನ್ಯೂಸ್’ ಚಿಕ್ಕಬಳ್ಳಾಪುರ : ಮಧ್ಯಮವರ್ಗದವರು, ಮಧ್ಯಮವರ್ಗದವರಿಗಿಂತ ಕಡಿಮೆ ಆರ್ಥಿಕ‌ ಆದಾಯ ಹೊಂದಿರುವವರುವ ಪ್ರಾರಂಭಿಸುವ ಮತ್ತು ನಡೆಸುವ ಉದ್ದಿಮೆಗಳು,ಕೈಗಾರಿಕೆಗಳಿಗೆ ವಿಧಿಸುವ ತೆರಿಗೆ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉತ್ತೇಜನಾಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ಮಾಜಿ ಕೃಷಿ ಸಚಿವ ಎನ್.ಹೆಚ್.ಶಿವಶಂಕರರೆಡ್ಡಿ ಸಲಹೆ ನೀಡಿದರು.

ಚಿಕ್ಕಬಳ್ಳಾಪುರ ನಗರದ ಹೊರವಲಯದಲ್ಲಿರುವ ಖಾಸಗಿ‌ ಹೋಟೆಲೊಂದರಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರ, ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ, ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸೂಕ್ಷ್ಮ, ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಂಸ್ಥೆ ಎಂಎಸ್ ಎಂಇ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಮತ್ತು ವೇಗಗೊಳಿಸುವ ಯೋಜನೆಯಡಿ ರಫ್ತು ಉತ್ತೇಜಿಸುವ ಕುರಿತು ಅರಿವು ಮೂಡಿಸುವ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಉದ್ದಿಮೆಗಳನ್ನು ಪ್ರಾರಂಭಿಸಲು ಸರ್ಕಾರ ಸಹಾಯಧನ ನೀಡುತ್ತದೆ. ಆದರೆ ಸಣ್ಣ ಮತ್ತು ಅತಿ ಸಣ್ಣ,ಮಧ್ಯಮ ವರ್ಗಗಳು ಆರಂಭಿಸುವ ಉದ್ದಿಮೆಗಳಿಗೆ ಪ್ರೋತ್ಸಾಹ ನೀಡಲು ತೆರಿಗೆ ವಿಚಾರದಲ್ಲಿ ಗಮನಹರಿಸಬೇಕು. ಉದ್ದಿಮೆಗಳ ಆರಂಭವೆಷ್ಟು ಮುಖ್ಯವೋ ನಂತರ ಮಾರುಕಟ್ಟೆ ಕೌಶಲ್ಯವೂ ಅಷ್ಟೆ ಮುಖ್ಯ ಎಂಬುದನ್ನು ಅರಿಯಬೇಕು. ಆರೋಗ್ಯ ಸಂರಕ್ಷಣೆ ಬಗ್ಗೆ ಹೆಚ್ಚಿನ ಜಾಗೃತಿ ಬಂದು ಸಿರಿಧಾನ್ಯಗಳಿಗೆ ಬಾರೀ ಬೇಡಿಕೆ ಬಂದಿದೆ. ಈ ನಿಟ್ಡಿನಲ್ಲಿ ಉದ್ದಿಮೆಗಳನ್ನು ಆರಂಭಿಸಿ ಸರ್ಕಾರದ ಪ್ರೋತ್ಸಾಹ ಧನ ಪಡೆಯಬೇಕು. ಗಾಂಧೀಜಿಯವರ ಗುಡಿ ಕೈಗಾರಿಕೆಗಳ ಆಶಯವನ್ನು ಅರ್ಥ ಮಾಡಿಕೊಳ್ಳಬೇಕು ಹಾಗೂ ಸರ್ ಎಂ ವಿಶ್ವೇಶ್ವರಯ್ಯ ಅವರು ಹೇಳಿದ ಕೈಗಾರಿಕೆ ಇಲ್ಲವೇ ನಾಶ ಎಂಬುದರ ಕಡೆಯೂ ಗಮನ ಹರಿಸಬೇಕೆಂದರು.

ಉದ್ದಿಮೆಗಳಲ್ಲಿ ಮಾಧ್ಯಮ ವರ್ಗದವರಿಗೆ ತೆರಿಗೆಯು ಕಡಿಮೆಯಾದರೆ ಮಧ್ಯಮ ವರ್ಗದವರು ಉದ್ದಿಮೆಯಲ್ಲಿ ಹೆಚ್ಚಿನ ಮಟ್ಟದಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಮಾಜಿ ಕೃಷಿ ಸಚಿವರು ತಿಳಿಸಿದರು.
ಕೈಗಾರಿಕೆಗಳು ಅಭಿವೃದ್ಧಿಯಾದರೆ ದೇಶದ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ. ಉದ್ದಿಮೆಗಳಲ್ಲಿ ಮಾರುಕಟ್ಟೆ ಜ್ಞಾನ ಬಹಳ ಮುಖ್ಯವಾಗುತ್ತದೆ. ಮಾರುಕಟ್ಟೆಯ ಕುರಿತು ಹೆಚ್ಚು ಅಧ್ಯಯನ ಮಾಡಬೇಕು. ಸರ್ಕಾರದ ಕೈಗಾರಿಕಾ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸಿ ಪ್ರೊತ್ಸಾಹ ನೀಡಬೇಕು. ಕೈಗಾರಿಕಾ ಉದ್ಯಮಿಗಳಿಗೆ ಸಾಲ ಸೌಲಭ್ಯಗಳನ್ನು ನೀಡಬೇಕು. ಉದ್ದಿಮೆದಾರರು ಸಹ ಸರ್ಕಾರ ನೀಡುವ ಎಲ್ಲ ಮೂಲಭೂತ ಸೌಕರ್ಯಗಳು ಹಾಗೂ ಸಾಲ ಸೌಲಭ್ಯವನ್ನು ಬಳಸಿಕೊಂಡು ಜಾಗತಿಕ ಮಟ್ಟದಲ್ಲಿ ಭಾರತ ರಫ್ತು ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಗತಿ ಸಾಧಿಸಬೇಕು ಎಂದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ವಿ.ಎನ್ ವೀರಭದ್ರಸ್ವಾಮಿ ಅವರು ಮಾತನಾಡಿ ಜಿಲ್ಲೆಯಲ್ಲಿನ ಕೈಗಾರಿಕಾ ವಲಯದಲ್ಲಿ ಒಂದು ವರ್ಷಕ್ಕೆ 323 ಕೋಟಿ ರೂ ವಹಿವಾಟು ನಡೆಯುತ್ತದೆ. ಸರ್ಕಾರದ ವತಿಯಿಂದ ಉದ್ದಿಮೆದಾರರಿಗೆ ಉತ್ತಮ ಪ್ರೋತ್ಸಾಹ ಹಾಗೂ ಸಹಕಾರ ನೀಡಲಾಗುತ್ತಿದೆ. ಉದ್ದಿಮೆದಾರರು ವಸ್ತುವಿನ ಗುಣಮಟ್ಟಕ್ಕೆ ಆದ್ಯತೆ ನೀಡಿದರೆ ಮಾರುಕಟ್ಟೆ ಸೃಷ್ಠಿಯಾಗುತ್ತದೆ. ಯುವ ಸಮುದಾಯ ಉದ್ಯೋಗಕ್ಕಾಗಿ ಅಂಬಲಿಸುವ ಬದಲಾಗಿ ಕೆಲಸ ನೀಡುವ ಉದ್ದಿಮೆದಾರರಾಗಲು ಮುಂದಾಗಬೇಕು. ಈ ನಿಟ್ಟಿನಲ್ಲಿ ಮಾಹಿತಿಯನ್ನು ಪಡೆಯಲು ಕೈಗಾರಿಕಾ ಇಲಾಖೆಯ ಜಿಲ್ಲಾ ಕಚೇರಿಗೆ ಸಂಪರ್ಕಿಸಬಹುದು ಅಥವಾ ಸರ್ಕಾರದ ವೆಬ್ ಸೈಟ್ ಗಳಲ್ಲಿ ಮಾಹಿತಿಯನ್ನು ಪಡೆಯಬಹುದು ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳು ಹಾಗೂ ವಿ.ಟಿ.ಪಿ.ಸಿ ರಪ್ತು ಸಲಹೆಗಾರರಾದ ವೀಣಾ ವೆಂಕಟೇಶ್ ಅವರು ಮಾತನಾಡಿ, ಉದ್ದಿಮೆದಾರರು ತಾವು ಉತ್ಪಾದಿಸುವ ಉತ್ಪನ್ನಗಳಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಯಾವ ರೀತಿ ಬೇಡಿಕೆ ಸೃಷ್ಠಿಸಿಕೊಳ್ಳಬೇಕು. ರಫ್ತು ಮಾಡಲು ಯಾವೆಲ್ಲ ನಿಯಮಗಳನ್ನು ಪಾಲಿಸಬೇಕು ಎಂಬುದರ ಕುರಿತು ವಿಸ್ತಾರವಾಗಿ ತಿಳಿಸಿಕೊಟ್ಟರು.

ಈ ಸಂರ್ದಭದಲ್ಲಿ ಸರ್. ಎಂ.ವಿ ಕೈಗಾರಿಕಾ ಸಂಘದ ಅಧ್ಯಕ್ಷ ಹೆಚ್.ಆರ್ ಗೋವಿಂದರಾಜು, ವಿ.ಟಿ.ಪಿ.ಸಿ ಸಹಾಯಕ ನಿರ್ದೇಶಕರಾದ ಎಲ್. ಜೈದೀಪ್, ಕಾಸಿಯಾ ಅಧ್ಯಕ್ಷ ಎಂ. ಜಿ ರಾಜ ಗೋಪಾಲ್, ಗ್ರಾಮೀಣ ಜಂಟಿ ಕಾರ್ಯದರ್ಶಿಗಳಾದ ಸತೀಶ್, ಉಪಾಧ್ಯಕ್ಷರಾದ ಬಿ .ಆರ್ ಗಣೇಶ್ ರಾವ್, ಗೌರವ ಪ್ರಧಾನ ಕಾರ್ಯದರ್ಶಿ ಸುರೇಶ್ ಎನ್.ಸಾಗರ್, ನಗರ ಜಂಟಿ ಕಾರ್ಯದರ್ಶಿಗಳಾದ ಜೆ.ಎಸ್ ಬಾಬು, ಖಜಾಂಚಿ ಹೆಚ್. ಮಂಜುನಾಥ್, ಚಿಕ್ಕಬಳ್ಳಾಪುರ ಜಿಲ್ಲಾಭಿವೃದ್ಧಿ ಉಪಸಮಿತಿ ಅಧ್ಯಕ್ಷ ಅನಿಲ್ ಕುಮಾರ್, ಲಿಡ್ ಬ್ಯಾಂಕ್ ನ ಮುಖ್ಯಸ್ಥರಾದ ನಾಗರಾಜು ಹಾಗೂ ಸರ್.ಎಂ.ವಿ ಕೈಗಾರಿಕಾ ಸಂಘದ ಸದ್ಯಸರು, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಉದ್ಯಮಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

Social Media Links
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!