ರಾಗಿ ಕಟಾವು ಯಂತ್ರದ ಮಾಲೀಕರ ವಿರುದ್ದ ಕ್ರಮಕ್ಕೆ ಒತ್ತಾಯ.
ಶಿಡ್ಲಘಟ್ಟ : ತಾಲ್ಲೂಕಿನಾದ್ಯಂತ ರಾಗಿ ಬೆಳೆ ಫಸಲು ಕಟಾವು ಹಂತಕ್ಕೆ ಬಂದಿದ್ದು, ರೈತರು ಬೆಳೆದಿರುವ ರಾಗಿ ಬೆಳೆಯನ್ನ ಕಟಾವು ಮಾಡಲು ರಾಗಿ ಕಟಾವು ಯಂತ್ರದ ಮಾಲೀಕರು ಸರ್ಕಾರದ/ ಜಿಲ್ಲಾಡಳಿತ ನಿಗಧಿಪಡಿಸಿರುವ ಧರಕ್ಕಿಂತ ಮಧ್ಯವರ್ತಿಗಳ ಮೂಲಕ ಹೆಚ್ಚು ಹಣವನ್ನು ವಸೂಲಿ ಮಾಡುತ್ತಿದ್ದಾರೆ. ಅಂತಹವರ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ( ಪುಟ್ಟಣ್ಣಯ್ಯ ಬಣ) ತಾಲ್ಲೂಕು ಅಧ್ಯಕ್ಷ ಶೆಟ್ಟಹಳ್ಳಿ ರವಿಪ್ರಕಾಶ್ ನೇತೃತ್ವದಲ್ಲಿ ಗುರುವಾರದಂದು ತಾಲ್ಲೂಕು ದಂಡಾಧಿಕಾರಿಗಳಿಗೆ ಮನವಿ ಪತ್ರವನ್ನ ಸಲ್ಲಿಸಲಾಯಿತು.
ರಾಗಿ ಕಟಾವು ಯಂತ್ರಕ್ಕೆ ಪರಿಷ್ಕೃತ ಧರ ಪ್ರತಿ ಗಂಟೆಗೆ 2700/- ರೂಗಳು ನಿಗಧಿ ಮಾಡಿ ರೈತರಿಗೆ ಹೆಚ್ಚು ಹೊರೆಯಾಗಬಾರದೆಂದು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರೂ ಸಹ ಇದನ್ನು ಉಲ್ಲಂಘಿಸಿ ಪ್ರತಿ ಗಂಟೆಗೆ 3500 ರಿಂದ 5000 ಸಾವಿರದವರೆಗೆ ರೈತರಿಂದ ರಾಗಿ ಕಟಾವು ಯಂತ್ರಗಳ ಮಾಲೀಕರು ಮತ್ತು ಮದ್ಯವರ್ತಿಗಳು ರೈತರಿಂದ ಹೆಚ್ಚು ಹಣ ಪಡೆಯುತ್ತಿದ್ದಾರೆ. ಆಯಾ ಹೋಬಳಿಯ ರಾಜಸ್ವ ನಿರೀಕ್ಷಕರ ಮೂಲಕ ವರದಿ ತರಿಸಿಕೊಂಡು ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ರಾಗಿ ಕಟಾವು ಯಂತ್ರದ ಮಾಲೀಕರು ಮತ್ತು ಮಧವರ್ತಿಗಳ ವಿರುದ್ದ ಕ್ರಮ ಜರುಗಿಸಿ ರೈತರಿಗೆ ಆಗುವ ಅನ್ಯಾಯವನ್ನು ತಪ್ಪಿಸಬೇಕು ಎಂದು ಒತ್ತಾಯಿ ತಾಲ್ಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ತಹಶೀಲ್ದಾರ್ ಅವರ ಅನುಪಸ್ಥಿತಿಯಲ್ಲಿ ಹಕ್ಕುದಾಖಲೆ ಶಿರಸ್ತೆದಾರ್ ಆಸೀಯಾ ಬೀ ಅವರು ರೈತರಿಂದ ಮನವಿ ಪತ್ರವನ್ನು ಸ್ವೀಕರಿಸಿದರು.
ಈ ಸಂಧರ್ಭದಲ್ಲಿ ರೈತ ಸಂಘದ ಜಿಲ್ಲಾ ಗೌರವಾಧ್ಯಕ್ಷ ಚನ್ನೇಗೌಡ, ಜಿಲ್ಲಾ ಉಪಾಧ್ಯಕ್ಷರಾದ ಕೆ.ಎಸ್ ಅರುಣ್ ಕುಮಾರ್,ತಾಲ್ಲೂಕು ಅಧ್ಯಕ್ಷ ಶೆಟ್ಟಿಹಳ್ಳಿ ರವಿಪ್ರಕಾಶ್, ತಾಲ್ಲೂಕು ಉಪಾಧ್ಯಕ್ಷ ಎನ್ ನಾಗರಾಜ್, ರೈತ ಮುಖಂಡರಾದ ವಿ. ನಾಗರಾಜ್, ದ್ಯಾವಪ್ಪ, ಬಿ.ಟಿ ನಾಗರಾಜ್, ಶ್ರೀಧರ್, ಶ್ರೀರಾಮ ಸೇರಿದಂತೆ ಇತರರು ಹಾಜರಿದ್ದರು.
ವರದಿ: ಕೋಟಹಳ್ಳಿ ಅನಿಲ್ ಕುಮಾರ್