ಶಿಡ್ಲಘಟ್ಟ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ತಾಲ್ಲೂಕಿನ ಚೀಮಂಗಲ ವಲಯದ ತಾಟಪರ್ತಿ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ನಿರ್ಮಾಣಕ್ಕೆ ಡಾ ಡಿ.ವೀರೇಂದ್ರ ಹೆಗ್ಗಡೆಯವರು ಮಂಜೂರು ಮಾಡಿದ್ದ ರೂ. 2 ಲಕ್ಷ ಮೊತ್ತದ ಮಂಜೂರಾತಿ ಪತ್ರವನ್ನು ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ಎಸ್ ಸುರೇಶ್ ಗೌಡ ವಿತರಿಸಿದರು.
ಮಂಜೂರಾತಿ ಪತ್ರ ವಿತರಿಸಿ ಮಾತನಾಡಿದ ಅವರು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಆರ್.ಬಿ.ಐ ನಿಯಮದ ಪ್ರಕಾರ ರಾಷ್ಟ್ರೀಕೃತ ಬ್ಯಾಂಕುಗಳ ಬಿ.ಸಿ.ಪ್ರತಿನಿಧಿಯಾಗಿ ಸ್ವ ಸಹಾಯ ಸಂಘದ ಸದಸ್ಯರುಗಳಿಗೆ ಬ್ಯಾಂಕಿನ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸುತ್ತಿದೆ. ಪೂಜ್ಯರು ರಾಜ್ಯದ ಉದ್ದಗಲಕ್ಕೂ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ಹಾಲಿನ ಡೈರಿ ಕಟ್ಟಡ ರಚನೆಗೆ ಅನುದಾನ, ದೇವಸ್ಥಾನ ಜೀರ್ಣೋದ್ಧಾರಕ್ಕೆ ಅನುದಾನ, ಸಮುದಾಯ ಭವನ ನಿರ್ಮಾಣಕ್ಕಾಗಿ ಅನುದಾನ, ಶಾಲಾ ಕಟ್ಟಡ ರಚನೆಗೆ ಅನುದಾನ, ಜ್ಞಾನದೀಪ ಶಿಕ್ಷಕರ ಒದಗಣೆ, ಸುಜ್ಞಾನನಿಧಿ ಶಿಷ್ಯ ವೇತನ ವಿತರಣೆ, ಜನಮಂಗಳ ಕಾರ್ಯಕ್ರಮದಡಿಯಲ್ಲಿ ವೈದ್ಯಕೀಯ ಸಲಕರಣೆಗಳ ವಿತರಣೆ ಮಾಡುವ ಮೂಲಕ ಸಮಾಜಮುಖಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಈ ಕಾರ್ಯಕ್ರಮಗಳನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮುನಿಕೃಷ್ಣಪ್ಪ ಅವರು ಮಾತನಾಡಿ ಧರ್ಮಸ್ಥಳ ಯೋಜನೆಯ ಮೂಲಕ ರಾಜ್ಯದ ಗ್ರಾಮ ಗ್ರಾಮಗಳಲ್ಲಿಯೂ ದೇವಸ್ಥಾನ ಜೀರ್ಣೋದ್ಧಾರ, ಸಮುದಾಯ ಭವನ ನಿರ್ಮಾಣ, ಹಾಲಿನ ಡೈರಿ ಕಟ್ಟಡ ರಚನೆ ಮುಂತಾದವುಗಳಿಗೆ ಅನುದಾನ ಒದಗಿಸುವ ಮೂಲಕ ಗ್ರಾಮಗಳ ಕಲ್ಯಾಣಕ್ಕಾಗಿ ಪೂಜ್ಯರು ಮಾಡುತ್ತಿರುವ ಕಾರ್ಯ ಶ್ಲಾಘನೀಯವಾದದ್ದು ಎಂದರು.
ಕಾರ್ಯಕ್ರಮದಲ್ಲಿ ಗ್ರಾಮಾಭಿವೃದ್ದಿ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಎಂ.ನಂಜಪ್ಪ ಸಂಘದ ನಿರ್ದೇಶಕರುಗಳಾದ ತಿಮ್ಮಕ್ಕ, ರತ್ನಮ್ಮ, ಹಾಗೂ ನರಸಿಂಹಯ್ಯ, ವಲಯದ ಮೇಲ್ವಿಚಾರಕಿ ಪಲ್ಲವಿ ಸೇವಾಪ್ರತಿನಿಧಿ ಮಂಜುಳಾ ಸೇರಿದಂತೆ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.