ಚಿಕ್ಕಬಳ್ಳಾಪುರ : ವಾಯು ಮಾಲಿನ್ಯ ನಿಯಂತ್ರಣಕ್ಕಾಗಿ ಹಾಗೂ ನಿಷೇದಿತ ಪ್ಲಾಸ್ಟಿಕ್ ಬಳಸದೆ ಪರಿಸರ ಸ್ನೇಹಿ ಮಾರ್ಗೋಪಾಯಗಳ ಬಗ್ಗೆ ತಿಳಿದುಕೊಂಡು ಮತ್ತಿತರರಿಗೂ ಅರಿವು ಮೂಡಿಸಲು ಜಿಲ್ಲೆಯ ಸಮಸ್ತ ನಾಗರೀಕರು ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಿ ಎಂದು ಅಪರ ಜಿಲ್ಲಾಧಿಕಾರಿ ಡಾ.ಎನ್ ಭಾಸ್ಕರ್ ಅವರು ಮನವಿ ಮಾಡಿದರು.
ಜಿಲ್ಲಾಡಳಿತ,ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ, ಚಿಕ್ಕಬಳ್ಳಾಪುರ ವತಿಯಿಂದ ವಾಯು ಮಾಲಿನ್ಯ ನಿಯಂತ್ರಣ ಮಾಸಾಚರಣೆ ನವೆಂಬರ್ – 2024 ರ ಅಂಗವಾಗಿ ಗುರುವಾರ ನಗರದ ಸೆಂಟ್ ಜೋಸೆಫ್ ಕಾನ್ವೆಂಟ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ “ವಾಹನಗಳಿಂದಾಗುವ ವಾಯುಮಾಲಿನ್ಯದ ವಿರುದ್ಧ ಸಮರ ಕಾರ್ಯಕ್ರಮ”ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಅಂಗಡಿ, ಮುಂಗಟ್ಟುಗಳಿಗೆ,ಪ್ಲಾಸ್ಟಿಕ್ ಮಾರಟಗಾರರ ಮಳಿಗೆಗಳ ಮೇಲೆ ದಾಳಿ ನಡೆಸಿ ದಂಡ ವಿಧಿಸಲಾಗುತ್ತಿದೆ. ಸಾರ್ವಜನಿಕರು ಪ್ಲಾಸ್ಟಿಕ್ ವಸ್ತುಗಳನ್ನು ಬಳಸುವುದು ಕಡಿಮೆ ಮಾಡಬೇಕು, ನಿಷೇದಿತ ಪ್ಲಾಸ್ಟಿಕ್ ನ್ನು ಬಳಸಲೇ ಬಾರದು ಹಾಗೂ ನಿಮ್ಮ ನೆರೆ – ಹೊರೆಯವರಿಗೂ ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮದ ಕುರಿತು ಜಾಗೃತಿ ಮೂಡಿಸಬೇಕು ಎಂದರು.
ಪಠ್ಯ ಪುಸ್ತಕಗಳಲ್ಲಿ ವಾಯು ಮಾಲಿನ್ಯ, ಜಲ ಮಾಲಿನ್ಯ, ಮಣ್ಣಿನ ಮಾಲಿನ್ಯ, ಹಾಗೂ ಇತರೆ ಮಾಲಿನ್ಯಗಳ ಕುರಿತು ಹೆಚ್ಚಿನ ಪ್ರಮಾಣದಲ್ಲಿ ಮಾಹಿತಿ ಇದೆ ಅದನ್ನು ಅರ್ಥೈಸಿಕೊಂಡು ಇತರರಿಗೂ ಅರಿವು ಮೂಡಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಎ. ವಿವೇಕಾನಂದ ಅವರು ಮಾತನಾಡಿ 18 ವರ್ಷದೊಳಗಿನ ಮಕ್ಕಳು ವಾಹನ ಚಲಾಯಿಸುವಂತಿಲ್ಲ, ಅಂತಹ ಮಕ್ಕಳಿಗೆ ಪೋಷಕರು ವಾಹನ ಚಾಲನೆ ಮಾಡಲು ವಾಹನಗಳನ್ನು ನೀಡಬಾರದು.
ಜಿಲ್ಲೆಯಲ್ಲಿ ವಾಯು ಮಾಲಿನ್ಯದ ದುಷ್ಪರಿಣಾಮಗಳ ಕುರಿತು ತಿಳಸಲು ವಿವಿಧ ಶಾಲಾ ಕಾಲೇಜುಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.ಪರಿಸರ ಸ್ನೇಹಿ ಸಾರಿಗೆ, ಶಕ್ತಿ-ಸಮರ್ಥ ಮನೆಗಳು, ವಿದ್ಯುತ್ ಉತ್ಪಾದನೆ, ಉದ್ಯಮ ನಿಯಂತ್ರಣ, ಶುದ್ಧ ಇಂಧನ ಮತ್ತು ತಂತ್ರಜ್ಞಾನಗಳ ಬಳಕೆ ಮತ್ತು ಉತ್ತಮ ತ್ಯಾಜ್ಯ ನಿರ್ವಹಣೆಯನ್ನು ಬೆಂಬಲಿಸುವ ನೀತಿಗಳು ಮತ್ತು ಹೂಡಿಕೆಗಳು ವಾಯು ಮಾಲಿನ್ಯದ ಪ್ರಮುಖ ಮೂಲಗಳನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಲಿವೆ. ಯುವ ಸಮುದಾಯ ಮಾಲಿನ್ಯಗಳ ಬಗ್ಗೆ ಹೆಚ್ಚು ಅರಿವು ಹೊಂದಿರಬೇಕು. ಇಂದಿನ ಜನಾಂಗದಿಂದ ಮುಂದಿನ ಪೀಳಿಗೆಗೆ ಉತ್ತಮ ವಾತವರಣ ನೀಡುವ ಕಾರ್ಯವಾಗಬೇಕು ಜಿಲ್ಲೆಯಲ್ಲಿ ವಾಹನಗಳಿಂದ 24% ರಷ್ಟು ವಾಯು ಮಾಲಿನ್ಯ ಉಂಟಾಗಿದೆ ಇದು ಮುಂದಿನ ದಿನಗಳಲ್ಲಿ ತಗ್ಗಬೇಕು ಎಂದು ತಿಳಿಸಿದರು.
ಹಿರಿಯ ಮೋಟಾರ್ ವಾಹನ ನೀರಿಕ್ಷರಾದ ನಾಗರಾಜ್ ನಾಯಕ್ ಅವರು ಮಾತನಾಡಿ ವಾಯುಮಾಲಿನ್ಯವು ಹೃದಯರಕ್ತನಾಳದ ಕಾಯಿಲೆಗೆ ಮುಖ್ಯ ಕಾರಣವಾದ ಅಂಶವಾಗಿದೆ, ಹೃದ್ರೋಗ, ಮತ್ತು ಪಾರ್ಶ್ವವಾಯು, ಶ್ವಾಸಕೋಶದ ಕ್ಯಾನ್ಸರ್, ಕಡಿಮೆ ಉಸಿರಾಟದ ಸೋಂಕುಗಳು, ಟೈಪ್ 2 ಡಯಾಬಿಟಿಸ್ ಗೆ ಪೂರಕವಾಗಲಿದೆ ಎಂದರು.
ವಾಹನಗಳಿಗೆ ಪೆಟ್ರೋಲ್, ಡೀಸೆಲ್ ಬಳಸುವದರಿಂದ ಕಾರ್ಬನ್ ಡೈ ಆಕ್ಸೈಡ್ ಹೊಗೆಯಿಂದಾಗಿ ಪರಿಸರದ ಮೇಲೆ ಹೆಚ್ಚು ಕೆಟ್ಟ ಪರಿಣಾಮ ಉಂಟಾಗುತ್ತದೆ.ಆದ್ದರಿಂದ ಸಮೂಹ ಸಾರಿಗೆಯನ್ನು ಹೆಚ್ಚು ಬಳಸಬೇಕು. ಈ ಮಾಹೆಯಲ್ಲಿ ಮಂಜಿನ ವಾತವರಣ ಹೆಚ್ಚಾಗಿದ್ದು ವಾಹನಗಳನ್ನು ನಿಧಾನವಾಗಿ ಚಲಾಯಿಸಬೇಕು.ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ಮೂಲಕ ಪರಿಸರ ಮಾಲಿನ್ಯವನ್ನು ತಪ್ಪಿಸಬೇಕು ಎಂದು ತಿಳಿಸಿದರು.
ಈ ವೇಳೆ ವಾಯುಮಾಲಿನ್ಯ ನಿಯಂತ್ರಣ ಜಾಗೃತಿ ಮೂಡಿಸುವ ಕರಪತ್ರ ಹಾಗೂ ಭಿತ್ತಿ ಪತ್ರಗಳನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮೋಟಾರ್ ವಾಹನ ನಿರೀಕ್ಷಕರಾದ ಅರುಣಾ, ಸೆಂಟ್ ಜೋಸೆಫ್ ಕಾನ್ವೆಂಟ್ ಶಾಲೆಯ ಪ್ರಾಂಶುಪಾಲರು,ಹಾಗೂ ಬೋಧಕ, ಬೋಧಕೇತರ ವರ್ಗದವರು, ಪ್ರಾದೇಶಿಕ ಸಾರಿಗೆ ಇಲಾಖೆಯ ಆಡಳಿತ ಸಿಬ್ಬಂದಿಯವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.