ಚಿಕ್ಕಬಳ್ಳಾಪುರ: ಭಾರತೀಯ ಸಮಾಜದಲ್ಲಿ ಸ್ವಾತಂತ್ರ್ಯ, ಸಮಾನತೆ, ಶಿಕ್ಷಣ ಮತ್ತು ಸ್ವಾಭಿಮಾನಕ್ಕಾಗಿ ಹೋರಾಟ ಮಾಡಿದ ಅಪ್ರತಿಮ ಹೋರಾಟಗಾರ ಹಾಗೂ ಪ್ರಖರ ಪಾಂಡಿತ್ಯವನ್ನು ಹೊಂದಿದ್ದ ಶ್ರೇಷ್ಠ ಸಾಮಾಜಿಕ ವಿಜ್ಞಾನಿ ಡಾ.ಬಿ.ಆರ್ .ಅಂಬೇಡ್ಕರ್ ಅವರು ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ತಿಳಿಸಿದರು.
ಚಿಕ್ಕಬಳ್ಳಾಪುರ ನಗರದ ಜೈ ಭೀಮ್ ಮೆಮೋರಿಯಲ್ ಪದವಿ ಕಾಲೇಜು ಹಾಸ್ಟೆಲ್ ಆವರಣದಲ್ಲಿ ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಇಂದು ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ,ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 68 ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ತತ್ವ ಚಿಂತನೆಗಳ ಬೆಳಕಿನಲ್ಲಿ ಇಂದು ದೇಶ ಸಮರ್ಥವಾಗಿ ಮುಂದುವರೆಯುತ್ತಿದೆ. ಅಪಾರ ಜ್ಞಾನ,ಪಾಂಡಿತ್ಯವನ್ನು ಹೊಂದಿದ್ದ ಅಂಬೇಡ್ಕರ್ ಅವರು ಜಗತ್ತಿನ ಅಪ್ರತಿಮ ಜ್ಞಾನಿಗಳು ಮತ್ತು ಹೋರಾಟಗಾರರ ಪೈಕಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ದೇಶದ ಸರ್ವರ ಏಳ್ಗೆಯಲ್ಲಿ ಅಂಬೇಡ್ಕರ್ ಅವರ ಪಾತ್ರ ಮತ್ತು ಪ್ರಭಾವ ಮಹತ್ವದ್ದಾಗಿದೆ. ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಲು ಶ್ರಮಿಸಿದ ಮೇರು ವ್ಯಕ್ತಿತ್ವ ಅಂಬೇಡ್ಕರ್. ಇಂದಿನ ವಿದ್ಯಾರ್ಥಿಗಳು, ಯುವಪೀಳಿಗೆ ಅವರನ್ನು ಗಂಭೀರವಾಗಿ ಅಧ್ಯಯನ ಮಾಡುವ ಜೊತೆಗೆ ಅರ್ಥ ಮಾಡಿಕೊಂಡು ಅವರ ಚಿಂತನೆಗಳ ಬೆಳಕಿನಲ್ಲಿ ಸಾಗಬೇಕು, ದೇಶವನ್ನು ಮತ್ತಷ್ಟು ಸದೃಢಗೊಳಿಸಲು ಮುಂದಾಗಬೇಕು. ಅರ್ಥವ್ಯವಸ್ಥೆಯೂ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಪರಿಣಿತರಾಗಿದ್ದ ಅಂಬೇಡ್ಕರ್ ಅವರು ದೇಶಕ್ಕೆ ಮತ್ತು ಸಮಾಜಕ್ಕೆ ನೀಡಿರುವ ಕೊಡುಗೆ ಅಪಾರ. ಕಾನೂನು ಸಚಿವರಾಗಿದ್ದಾಗ ಹಿಂದೂ ಕೋಡ್ ಬಿಲ್ ತರಲು ಯತ್ನಿಸಿದ್ದರು ಅದು ಅಂದೆ ಜಾರಿಯಾಗಿದ್ದರೆ ಮಹಿಳೆಯರ ಸ್ಥಿತಿ ಗತಿ ಮತ್ತಷ್ಟು ಉತ್ತಮ ವಾಗಿರುತ್ತಿತ್ತು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಅಂಬೇಡ್ಕರ್ ಅವರ ಕುರಿತು ಉಪನ್ಯಾಸ ನೀಡಿದ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಕೋಡಿರಂಗಪ್ಪ, ಮಾತನಾಡಿ ಅಂಬೇಡ್ಕರ್ ಅವರು ಶೋಷಿತ,ಅಸಹಾಯಕ ಮತ್ತು ದುರ್ಬಲ ವರ್ಗಗಳನ್ನು ಅಸಮಾನತೆಯ ವ್ಯವಸ್ಥೆಯಿಂದ ಬಿಡುಗಡೆಗೊಳಿಸಲು ಹೋರಾಟ ಮಾಡಿದರು. ಮಹಿಳೆಯರ ಸ್ವಾತಂತ್ರ್ಯ, ಸ್ವಾಭಿಮಾನದ ಬದುಕಿಗಾಗಿ ದುಡಿದರು. ಅಂಬೇಡ್ಕರ್ ಈ ದೇಶದಲ್ಲಿ ಮಾತ್ರವಲ್ಲದೇ ಇಡೀ ಜಗತ್ತಿನಲ್ಲಿ ಹೋರಾಟದ ಮೂಲಕ ಸಂಚಲನ ಮೂಡಿಸಿದ ತಾಯಿ ಮನಸ್ಸಿನ ನಾಯಕ ಎಂದರು.
ಜಗತ್ತಿನ ಅತ್ಯುನ್ನತ ಜ್ಞಾನಿಗಳಲ್ಲಿ ಅಗ್ರಗಣ್ಯರಾಗಿರುವ ಡಾ.ಬಿ.ಆರ್ ಅಂಬೇಡ್ಕರ್ ಅವರ ಜ್ಞಾನದ ಫಲದಿಂದಾಗಿ ಈ ದಿನ ನಾವು ವಿವಿಧ ಸ್ತರಗಳ ಹುದ್ದೆಗಳಲ್ಲಿದ್ದೇವೆ,ಎಲ್ಲ ಕ್ಷೇತ್ರಗಳಲ್ಲಿ ಸುಧಾರಣೆ ಆಗಿದೆ.ಅಂಬೇಡ್ಕರ್ ಅವರ ಬಾಲ್ಯ ಶಿಕ್ಷಣದ ವ್ಯವಸ್ಥೆ ಈಗಿನ ಸೌಲತ್ತುಗಳನ್ನು ಆಗ ಹೊಂದಿರಲಿಲ್ಲ. ಏಪ್ರಿಲ್ 14 ಡಾ. ಬಿ. ಆರ್ ಅಂಬೇಡ್ಕರ್ ಅವರು ಹುಟ್ಟಿದ ದಿನವಾಗಿದೆ. 1956 ಡಿಸೆಂಬರ್ 6ರಂದು ಇಹಲೋಕವನ್ನು ತ್ಯಜಿಸಿದ ದಿನವಾಗಿದೆ. ಜಗತ್ತಿನಲ್ಲಿ ಸಂಚಲನ ಉಂಟುಮಾಡಿರುವಂತಹ ದೊಡ್ಡ ಶಕ್ತಿ ಡಾ.ಬಿ.ಆರ್ ಅಂಬೇಡ್ಕರ್. ಅವರು ಪರೀಕ್ಷೆಗೋಸ್ಕರ ಇತಿಹಾಸವನ್ನು ಓದಲಿಲ್ಲ ಭಾರತದ ಇತಿಹಾಸವನ್ನು ಬದಲಾಯಿಸಲು ಓದಿದರು. ದೇಶದ ಪ್ರಜೆಗಳಾಗಿ ಅಂಬೇಡ್ಕರ್ ಬಗ್ಗೆ, ಬಸವಣ್ಣ, ಬುದ್ಫನ ಬಗ್ಗೆ ತಿಳಿದುಕೊಳ್ಳಬೇಕು. ಅಂದಿನ ಸಮಾಜ ಸರ್ವರ ಅಕ್ಷರ ಸಂಸ್ಕೃತಿಗೆ ವಿರುದ್ದವಾಗಿತ್ತು ಮೌಡ್ಯದ ವಿಕೃತಿಗಳನ್ನು ಪರಿವರ್ತನೆ ಮಾಡಿದ ಮಹಾ ಸುಧಾರಕ ಅಂಬೇಡ್ಕರ್ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ ನಿಟ್ಟಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ, ನಗರ ಸಭೆಯ ಅಧ್ಯಕ್ಷ ಎ.ಗಜೇಂದ್ರ, ನಗರ ಸಭೆಯ ಉಪಾಧ್ಯಕ್ಷ ನಾಗರಾಜು, ಅಪರ ಜಿಲ್ಲಾಧಿಕಾರಿ ಡಾ. ಭಾಸ್ಕರ್, ಜಿಲ್ಲಾ ಉಪವಿಭಾಗಾಧಿಕಾರಿ ಡಿ.ಎಚ್ ಅಶ್ವಿನ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರ ತೇಜಾನಂದರೆಡ್ಡಿ, ಉಪ ಪೊಲೀಸ್ ವರಿಷ್ಟಾಧಿಕಾರಿ ಶಿವ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶೇಷಾದ್ರಿ, ದಲಿತ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು, ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ಇದ್ದರು.
ಕಾರ್ಯಕ್ರಮದಲ್ಲಿ ಆನಂದ್, ಛಲಪತಿ, ನಟರಾಜ್, ರತ್ನಮ್ಮ ಮತ್ತು ಗಾನ ಅಶ್ವಥ್ ರವರು ಗಾಯನ ಮಾಡಿದ ಕ್ರಾಂತಿ ಗೀತೆಗಳು ಜನರ ಮನ ಮೆಚ್ಚುಗೆಗೆ ಪಾತ್ರವಾದವು.