ಚಿಕ್ಕಬಳ್ಳಾಪುರ : ಬಾಗೇಪಲ್ಲಿ ನಗರಕ್ಕೆ ಸಾಕಾಗುವಷ್ಟು ಕುಡಿಯುವ ನೀರು ಚಿತ್ರಾವತಿ ಜಲಾಶಯದಿಂದ ಲಭ್ಯವಾಗುವುದರಿಂದ ಬಾಗೇಪಲ್ಲಿ ನಗರದ ಎಲ್ಲಾ ವಾರ್ಡ್ ಗಳಿಗೆ ಪೈಪ್ ಲೈನ್ ಅಳವಡಿಸಿ ನೀರು ಪೂರೈಕೆ ಮಾಡಲು ಅಗತ್ಯ ಕ್ರಮವಹಿಸಿ ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ನಡೆದ ಜಿಲ್ಲಾ ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಪ್ರಗತಿ ಪರಿಶೀಲನೆ ನಡೆಸಿದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದರು. ಬಾಗೇಪಲ್ಲಿ ನಗರಕ್ಕೆ ನೀರು ಜಲಾಶಯದಿಂದ ಲಭ್ಯವಿದ್ದರೂ ಸಮರ್ಪಕವಾಗಿ ನೀರು ನೀಡಲು ಸಾಧ್ಯವಾಗದಿದ್ದರೆ ಆಡಳಿತ ವರ್ಗದ ಲೋಪವಾಗುತ್ತದೆ. 15ನೇ ಹಣಕಾಸು ನಿಧಿಯ ಅನುದಾನದಲ್ಲಿ ಅವಕಾಶ ಮಾಡಿಕೊಂಡು ನೀರು ಪೂರೈಸಲು ಕ್ರಮ ವಹಿಸಿ ಎಂದು ಸೂಚಿಸಿದರು.
ಜಿಲ್ಲೆಯ ನಗರ ಆಡಳಿತ ಸಂಸ್ಥೆಗಳಾದ ನಗರಸಭೆ, ಪಟ್ಟಣ ಪಂಚಾಯ್ತಿ ಮತ್ತು ಪುರಸಭೆ ವ್ಯಾಪ್ತಿಯಲ್ಲಿ ತೆರಿಗೆ ಹಾಗೂ ಕರ ವಸೂಲಿ ಸಮರ್ಪಕವಾಗಿ ಆಗುತ್ತಿಲ್ಲ. ಜಿಲ್ಲೆಯಲ್ಲಿ ನಗರ ಆಡಳಿತ ಸಂಸ್ಥೆ ವ್ಯಾಪ್ತಿಯ ಶಿಡ್ಲಘಟ್ಟದಲ್ಲಿ 4 ಲಕ್ಷ, ಗುಡಿಬಂಡೆಯಲ್ಲಿ 2.5 ಲಕ್ಷ, ಬಾಗೇಪಲ್ಲಿಯಲ್ಲಿ 3.5 ಲಕ್ಷ, ಗೌರಿಬಿದನೂರಿನಲ್ಲಿ 40 ಲಕ್ಷ, ಚಿಕ್ಕಬಳ್ಳಾಪುರದಲ್ಲಿ 1.5 ಕೋಟಿ ಹಾಗೂ ಚಿಂತಾಮಣಿ ನಗರಸಭೆ ವ್ಯಾಪ್ತಿಯಲ್ಲಿ 2.5 ಕೋಟಿ ಕರವಸೂಲಿ ಮಾಡಿ ಪ್ರಸ್ತುತ ಖಾತೆಗಳಲ್ಲಿಡಲಾಗಿದೆ. ಶಿಡ್ಲಘಟ್ಟ, ಬಾಗೇಪಲ್ಲಿ ಹಾಗೂ ಗುಡಿಬಂಡೆ ನಗರ ಆಡಳಿತ ಸಂಸ್ಥೆಗಳು ಸೇರಿದಂತೆ ಜಿಲ್ಲೆಯಲ್ಲಿ ಎಲ್ಲಾ ನಗರ ಆಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕರ ವಸೂಲಿ ಸಮರ್ಪಕವಾಗಿ ನಿರ್ವಹಿಸಲು ಮುಂದಿನ ಒಂದು ತಿಂಗಳಲ್ಲಿ ನಿಗದಿತ ಗುರಿ ನೀಡಿ ಬಿಲ್ ಕಲೆಕ್ಟರ್ ಹಾಗೂ ಇತರೆ ಸಿಬ್ಬಂದಿಗೆ ಚುರುಕು ಮುಟ್ಟಿಸಬೇಕು. ಸರಿಯಾಗಿ ಕೆಲಸ ನಿರ್ವಹಿಸದ ಸಿಬ್ಬಂದಿಯನ್ನು ಮುಂದಿನ ವರ್ಷದ ಜನವರಿಯಲ್ಲಿ ಬೇರೆಡೆ ವರ್ಗಾಯಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಗ್ರಾಮೀಣ ಪ್ರದೇಶದ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರನ್ನು ಪೂರೈಸುವ ಜಲಜೀವನ್ ಮಿಷನ್ ಯೋಜನೆ ಕೇಂದ್ರ ಸರ್ಕಾರದ ಯೋಜನೆಯಾದರೂ ಕೇಂದ್ರ ಸರ್ಕಾರ ಶೇ.45 ಹಾಗೂ ರಾಜ್ಯ ಸರ್ಕಾರ ಶೇ.55 ರಷ್ಟು ಅನುದಾನದ ನೀಡುತ್ತಿದೆ. ಈ ಯೋಜನೆ ಜಿಲ್ಲೆಯಲ್ಲಿ ಪ್ರಗತಿಯಲ್ಲಿದ್ದು, ಎಲ್ಲಾ ಗ್ರಾಮಗಳ ಟೆಂಡರ್ ಕರೆಯಲಾಗಿದೆ. ಗುತ್ತಿಗೆದಾರರು ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸದೆ ಆದಷ್ಟು ಬೇಗ ಸಾರ್ವಜನಿಕರಿಗೆ ತೊಂದರೆಯಾಗದಂತೆ ಪೂರ್ಣಗೊಳಿಸಬೇಕು.ಜಿಲ್ಲೆಯ 1640 ಗ್ರಾಮಗಳಲ್ಲಿಯೂ ಜಲಜೀವನ್ ಮಿಷನ್ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಎಲ್ಲಾ ಗ್ರಾಮಗಳಲ್ಲೂ ಕಾಮಗಾರಿ ಪ್ರಾರಂಭವಾಗಿದ್ದು, ಇನ್ನು 134 ಗ್ರಾಮಗಳಲ್ಲಿ ಮಾತ್ರ ಕಾಮಗಾರಿ ಆರಂಭವಾಗಬೇಕಾಗಿದೆ. ನಮ್ಮ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಈ ಯೋಜನೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹೆಚ್ಚಿನ ಜವಾಬ್ದಾರಿಯನ್ನು ವಹಿಸುತ್ತಿದೆ ಎಂದು ತಿಳಿಸಿದರು.
ಜಿಲ್ಲೆ ನಗರ ಮತ್ತು ಪಟ್ಟಣ ಪ್ರದೇಶಗಳ ಕುಡಿಯುವ ನೀರಿನ ಕೊರತೆಯನ್ನು ನೀಗಿಸಲು ಕೆರೆಗಳ ನೀರನ್ನು ಶುದ್ಧೀಕರಿಸಿ ಪೂರೈಸುವ ಉದ್ದೇಶವಿದ್ದು, ಗೌರಿಬಿದನೂರು ತಾಲ್ಲೂಕು ವಾಟದ ಹೊಸಹಳ್ಳಿ ಕೆರೆಯ ನೀರನ್ನು ಪೂರೈಸುವ 69 ಕೋಟಿ ರೂಪಾಯಿ ಯೋಜನೆ ಸಿದ್ದವಾಗಿದೆ. ಜಿಲ್ಲೆಯ ಇತರೆ ತಾಲ್ಲೂಕುಗಳ ಕೆರೆಗಳ ನೀರನ್ನು ಕುಡಿಯುವ ನೀರಿಗೆ ಬಳಸಿಕೊಳ್ಳಲು ಯೋಜನೆಗಳನ್ನು ಸಿದ್ಧಪಡಿಸಲಾಗಿದೆ. ವಿಧಾನಸಭೆಯ ಅಧಿವೇಶನದ ನಂತರ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಗುವುದು. ಜೊತೆಗೆ ಚಿಕ್ಕಬಳ್ಳಾಪುರ ನಗರಕ್ಕೆ ಕುಡಿಯುವ ನೀರನ್ನು ಪೂರೈಸುತ್ತಿರುವ ಜಕ್ಕಲಮಡುಗು ಜಲಾಶಯದ ಸಂಗ್ರಹಣಾ ಸಾಮರ್ಥ್ಯವನ್ನು ವಿಸ್ತರಿಸುವ ಚಿಂತನೆಯೂ ಸರ್ಕಾರದ ಮುಂದಿದೆ. ಒಂದು ವೇಳೆ ಇದು ತಾಂತ್ರಿಕ ಕಾರಣಗಳಿಂದ ಸಾಧ್ಯವಾಗದಿದ್ದಲ್ಲಿ ಹೆಚ್.ಎನ್ ವ್ಯಾಲಿ ನೀರಿನ ಮಾರ್ಗ ತಪ್ಪಿಸಿ ಶ್ರೀನಿವಾಸಸಾಗರ ಕೆರೆಯ ನೀರನ್ನು ನಗರಕ್ಕೆ ತರುವ ಸಾಧ್ಯತೆಯ ವಿಚಾರವನ್ನು ಪರಿಶೀಲಿಸಲಾಗುವುದು. ಸದ್ಯ ಈ ಕೆರೆಗೆ ಹೆಚ್.ಎನ್ ವ್ಯಾಲಿ ನೀರು ಹರಿಯುತ್ತಿದ್ದು, ಅದನ್ನು ಬೇರೆ ಕಡೆಗೆ ತಿರುಗಿಸುವ ಚಿಂತನೆಯೂ ಇದೆ ಎಂದರು.
ಮಳೆಯಿಂದ ಬೆಳೆ ಹಾನಿಯ ನಷ್ಟ ಪರಿಹಾರವಾಗಿ 1.4 ಲಕ್ಷ ರೂಪಾಯಿಗಳನ್ನ 10 ಜನ ರೈತರಿಗೆ ಇತ್ತೀಚಿಗೆ ನೀಡಲಾಗಿದೆ. ಅಕ್ಟೋಬರ್ ಮಾಹೆಯಲ್ಲಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದು ಜಡಿ ಮಳೆಯಿಂದಾಗಿ ರಾಗಿ ಬೆಳೆಯು ಹೆಚ್ಚು ಹಾನಿಗೆ ಒಳಪಟ್ಟಿದೆ. ಈ ಕುರಿತು ಪರಿಶೀಲನೆ ಮಾಡಿ ಪರಿಹಾರ ನೀಡಲು ಕ್ರಮ ವಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಡಿಸೆಂಬರ್ ಮಾಹೆಯವರಗೆ ಜಿಲ್ಲೆಯಲ್ಲಿ ಒಟ್ಟು 87.06 ಹೆಕ್ಟರ್ ನಷ್ಟು ಬೆಳೆಗಳು ಹಾನಿಯಾಗಿದ್ದು 139 ಜನ ರೈತರು ನಷ್ಟ ಅನುಭವಿಸಿದ್ದಾರೆ. ಇವರಿಗೆ ಪರಿಹಾರ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎನ್ ರವಿಕುಮಾರ್, ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ ನಿಟ್ಟಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್, ಅಪರ ಜಿಲ್ಲಾಧಿಕಾರಿ ಡಾ. ಭಾಸ್ಕರ್, ಜಿಲ್ಲಾ ಉಪವಿಭಾಗಾಧಿಕಾರಿ ಡಿ.ಎಚ್ ಅಶ್ವಿನ್, ಭೂ ಅಭಿವೃದ್ಧಿ ಬ್ಯಾಂಕ್ ನ ಸೊಣ್ಣೇಗೌಡ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಅತಿಕ್ ಪಾಷಾ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.