“ಸಂವಿಧಾನ ಶಕ್ತಿ” ಸುದ್ದಿಯ ಫಲಶೃತಿ. ವರದಿಗೆ ಸಾರ್ವಜನಿಕರಿಂದ ಮೆಚ್ಚುಗೆ.
ಶಿಡ್ಲಘಟ್ಟ : ತಾಲ್ಲೂಕು ಆಡಳಿತ ಸೌಧದ ಪಕ್ಕದಲ್ಲೇ ಇರುವ ಐತಿಹಾಸಿಕ ಕಂದಾಯ ಭವನ ಕಟ್ಟಡದ ಸ್ವಚ್ಚತೆ ಮರಿಚೀಕೆಯಾಗಿ ಕಟ್ಟಡದ ಮೇಲೆ ಗಿಡ ಗಂಟಿಗಳು ಬೆಳೆದು ಆವರಣದಲ್ಲೆ ರಾಶಿ ರಾಶಿ ಕಸವಿತ್ತು. ಸ್ವಚ್ಚತೆ ಮಾಡದೇ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರು. ಈ ಕುರಿತು ಸಂವಿಧಾನ ಶಕ್ತಿ ಪತ್ರಿಕೆಯ ವೆಬ್ ನಲ್ಲಿ “ಸ್ವಚ್ಚತೆ ನಿರ್ವಹಣೆಯಿಲ್ಲದೆ ಸೊರಗುತ್ತಿರುವ ಕಂದಾಯ ಭವನ. ತಲೆ ಕೆಡಿಸಿಕೊಳ್ಳದ ತಾಲ್ಲೂಕು ಆಡಳಿತ.” ಎಂಬ ಶೀರ್ಷಿಕೆಯಡಿಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ಸುದ್ದಿ ಪ್ರಕಟವಾದ ಬೆನ್ನಲ್ಲೆ ವರದಿಗೆ ಎಚ್ಚೆತ್ತುಕೊಂಡ ತಾಲ್ಲೂಕು ಆಡಳಿತ ಶನಿವಾರದಂದು ಇಡೀ ಕಂದಾಯ ಭವನ ಕಟ್ಟಡವನ್ನು ಸಂಪೂರ್ಣವಾಗಿ ಸ್ವಚ್ಚಗೊಳಿಸಿದ್ದಾರೆ.
ಬೆಳ್ಳಂ ಬೆಳಗ್ಗೆ ರಾಜಸ್ವ ನಿರೀಕ್ಷಕ ಶಶಿಧರ್ ಅವರ ನೇತೃತ್ವದಲ್ಲಿ ಗ್ರಾಮ ಆಡಳಿತಾಧಿಕಾರಿಗಳು, ಗ್ರಾಮ ಸಹಾಯಕರ ತಂಡ ಸ್ವಚ್ಚತೆ ಕಾರ್ಯದಲ್ಲಿ ತೊಡಗಿಸಿಕೊಂಡು ಕಟ್ಟಡದ ಗೋಡೆಗಳ ಮೇಲೆ ಬೆಳೆದಿದ್ದ ಗಿಡಗಳು ಹಾಗೂ ಕಟ್ಟಡದ ಆವರಣದಲ್ಲಿ ಬೆಳೆದಿದ್ದ ಹುಲ್ಲು, ಕಸ ಕಡ್ಡಿ, ರಾಶಿ ರಾಶಿ ಕಾಗದ ಪತ್ರಗಳ ಕಸವನ್ನು ಸ್ವಚ್ಚಗೊಳಿಸಿ ಸುಮಾರು ಮೂರು ಟ್ರ್ಯಾಕ್ಟರ್ ಲೋಡ್ ಕಸವನ್ನು ತೆಗೆದಿದ್ದಾರೆ.
ಕಸವನ್ನು ನಗರಸಭೆ ಟ್ರ್ಯಾಕ್ಟರ್ ಸಾಗಾಣಿಕೆ ಮಾಡಿದೆ. ಸ್ವಚ್ಚತೆ ಪೂರ್ಣಗೊಂಡ ನಂತರ ಖುದ್ದು ತಹಶೀಲ್ದಾರ್ ಬಿ.ಎನ್ ಸ್ವಾಮಿ ಕಂದಾಯ ಭವನಕ್ಕೆ ಬೇಟಿ ನೀಡಿ ಪರಿಶೀಲಿಸಿದರು. ನಮಗೆ ಯಾವುದೇ ಪ್ರತ್ಯೇಕ ಅನುಧಾನ ಬರುವುದಿಲ್ಲ. ಸಿ ಎಸ್ ಆರ್ ಅನುಧಾನ ಬಂದಲ್ಲಿ ನವೀಕರಣಗೊಳಿಸಿ ಮೇಲ್ಚಾವಣಿ ದುರಸ್ಥಿ ಪಡಿಸಿದರೆ ಕಟ್ಟಡ ಮತ್ತಷ್ಟು ವರ್ಷಗಳ ಕಾಲ ಬಾಳಿಕೆ ಬರುತ್ತದೆ ಎಂದು ತಿಳಿಸಿದರು. ವರದಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಮಂಜುನಾಥ್, ನಗರಸಭೆ ಅಧ್ಯಕ್ಷ ಎಂ ವಿ ವೆಂಕಟಸ್ವಾಮಿ, ರಾಜಸ್ವ ನಿರೀಕ್ಷಕರಾದ ಶಶಿಧರ್, ವೇಣು, ತಾಲ್ಲೂಕು ಆಡಳಿತಾಧಿಕಾರಿ ಜಿ.ಎಚ್ ಚೇತನ್ ಕುಮಾರ್, ಇತರರು ಹಾಜರಿದ್ದರು.