ಸಾರ್ವಜನಿಕರ ಕುಂದುಕೊರತೆ ಸಭೆ. ಕಂದಾಯ ಇಲಾಖೆ -27, ನಗರಸಭೆ -3, ತಾ.ಪಂ. -6, ಆರೋಗ್ಯ ಇಲಾಖೆ -1 , ಅರಣ್ಯ ಇಲಾಖೆ 2 ವಿವಿಧ ಇಲಾಖೆಯ ಒಟ್ಟು 43 ಅರ್ಜಿಗಳು ಸ್ವೀಕಾರ.
ಲೋಕಾಯುಕ್ತರ ಕರ್ತವ್ಯ ನಿಷ್ಠೆ, ಪ್ರಾಮಾಣಿಕ ಕಾರ್ಯಕ್ಕೆ ಜನರಿಂದ ಮೆಚ್ಚುಗೆ.
ಶಿಡ್ಲಘಟ್ಟ : ಸಾರ್ವಜನಿಕರಿಗೆ ಕುಂದು ಕೊರತೆ ಸಭೆ ನಡೆಸುವುದರ ಉದ್ದೇಶ ಇಲಾಖೆಯ ಎಲ್ಲಾ ಅಧಿಕಾರಿಗಳು ಸಾರ್ವಜನಿಕರಿಗೆ ಹತ್ತಿರವಾಗಬೇಕು, ಜನರು ಸಮಸ್ಯೆಗಳನ್ನು ಧೈರ್ಯದಿಂದ ಅಧಿಕಾರಿಗಳಿಗೆ ಹೇಳಬೇಕು. ಅವು ಎಷ್ಟು ಸತ್ಯ, ಎಷ್ಟು ಸುಳ್ಳು ಎಂಬುದನ್ನು ಅಧಿಕಾರಿಗಳು ಪರಿಶೀಲಿಸಬೇಕು ಅಧಿಕಾರಿಗಳು, ನೌಕರರು ನಾವೆಲ್ಲರೂ ಸಾರ್ವಜನಿಕರ ಸೇವಕರು ಎಂದು ಲೋಕಾಯುಕ್ತ ಅಧೀಕ್ಷಕರಾದ ಆ್ಯಂಟೋನಿ ಜಾನ್ ಹೇಳಿದರು.
ಗುರುವಾರದಂದು ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಸಾರ್ವಜನಿಕರ ಕುಂದು ಕೊರತೆಗಳ ಸಭೆಯಲ್ಲಿ ಸಾರ್ವಜನಿಕರಿಂದ ವಿವಿಧ ಇಲಾಖೆಗಳ ಸಂಬಂಧಿಸಿದ ದೂರುಗಳು ಸ್ವೀಕರಿಸಿ ಮಾತನಾಡಿದರು.
ಸಾರ್ವಜನಿಕರು ಅಧಿಕಾರಿಗಳ ಬಳಿ ಬಂದಾಗ ಕೂಲಂಕುಶವಾಗಿ ಅವರ ಸಮಸ್ಯೆಯನ್ನು ಕೇಳಿಸಿಕೊಂಡು ಅದಕ್ಕೆ ಯಾವ ರೀತಿ ಪರಿಹಾರ ನೀಡಬೇಕು ಎಂಬುದನ್ನು ಅರಿತಾಗ ಸಾರ್ವಜನಿಕರ ಸಮಸ್ಯೆಗಳು 90ರಷ್ಟು ಪರಿಹಾರ ಸಿಗುತ್ತದೆ. ಸಾರ್ವಜನಿಕರ ಊರಿಗೆ ನಮ್ಮ ಹಂತದಲ್ಲಿ ಆಗುವ ಪರಿಹಾರವನ್ನು ನಾವೇ ಮಾಡಿ ಕಳಿಸಿಕೊಡಿ. ಒಂದು ವೇಳೆ ನಮ್ಮಲ್ಲಿ ಆಗದೆ ಇದ್ದಲ್ಲಿ ಅವರನ್ನು ಎಲ್ಲಿಗೆ ಕಳುಹಿಸಬೇಕು ಮತ್ತು ಯಾವ ಅಧಿಕಾರಿಗಳ ಬಳಿ ಕಳುಹಿಸಬೇಕು ಎಂಬುದನ್ನು ನೀವೇ ಮಾಹಿತಿ ನೀಡಿದರೆ ಅವರಿಗೆ ಮತ್ತಷ್ಟು ಅನುಕೂಲವಾಗಲಿದೆ. ಆಗ ಅಧಿಕಾರಿಗಳ ಮೇಲೆ ನಂಬಿಕೆ ವಿಶ್ವಾಸವು ಬೆಳೆಯುತ್ತದೆ ಎಂದರು.
ನಗರದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ ಸ್ವಚ್ಛತೆಯ ಬಗ್ಗೆ ಹಲವು ದೂರುಗಳು ನೀಡಿದ್ದರಿಂದ ಪೌರಾಯುಕ್ತರು ಸೇರಿದಂತೆ ಸಂಬಂಧಪಟ್ಟ ವಿಭಾಗದ ಅಧಿಕಾರಿಗಳನ್ನು ತೀವ್ರವಾಗಿ ತರಾಟೆ ತೆಗೆದುಕೊಂಡ ಸಾರ್ವಜನಿಕರಿಗೆ ಸ್ಪಂದಿಸಿ ತ್ವರಿತಗತವಾಗಿ ಕೆಲಸಗಳನ್ನು ನಿರ್ವಹಿಸಬೇಕೆಂದರು.
ಸಭೆಯಲ್ಲಿ 43 ಅರ್ಜಿಗಳು ಸ್ವೀಕರಿಸಿದ್ದು, ಆ ಪೈಕಿ 27 ಅರ್ಜಿಗಳು ಕಂದಾಯ ಇಲಾಖೆಗೆ ಸೇರಿದೆ. ಭೂಮಾಪನ ಇಲಾಖೆಯ 4, ತಾಲೂಕು ಪಂಚಾಯಿತಿ 6, ನಗರಸಭೆ 3, ಅರಣ್ಯ ಇಲಾಖೆ 2, ಆರೋಗ್ಯ ಇಲಾಖೆ 1, ಒಟ್ಟು 43 ಅರ್ಜಿಗಳು ಸ್ವೀಕರಿಸಿದ್ದು ಕೆಲವೊಂದು ಅರ್ಜಿಗಳು ಸ್ಥಳದಲ್ಲಿಯೇ ಬಗೆಹರಿಸಲಾಯಿತು.
ಲೋಕಾಯುಕ್ತ ಅಧಿಕಾರಿಗಳು ಸತತ ಆರು ಗಂಟೆಗಳ ಕಾಲ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಕೆಲವು ಸ್ಥಳದಲ್ಲಿ ಪರಿಹಾರ ನೀಡಿದರೆ, ಉಳಿದಂತಹ ಅರ್ಜಿಗಳಿಗೆ ಅಧಿಕಾರಿಗಳಿಗೆ ನೀಡಿ ತ್ವರಿತವಾಗಿ ಕಾರ್ಯ ನಿರ್ವಹಿಸಬೇಕು ಎಂದು ಎಚ್ಚರಿಸಿದರು.
ಲೋಕಾಯುಕ್ತ ಅಧಿಕಾರಿಗಳ ಕಾರ್ಯಕ್ಕೆ ಜನರಿಂದ ಮೆಚ್ಚುಗೆ: ಲೋಕಾಯುಕ್ತ ಅಧೀಕ್ಷಕರಾದ ಆಂಟೋನಿ ಜಾನ್ ಅವರ ಅಧ್ಯಕ್ಷತೆಯಲ್ಲಿ ಪ್ರಪ್ರಥಮವಾಗಿ ತಾಲ್ಲೂಕಿನಲ್ಲಿ ಸಾರ್ವಜನಿಕರ ಕುಂದು ಕೊರತೆಗಳ ಸಭೆ ನಡೆಸಿದ್ದು, ಬೆಳಗ್ಗೆ 11:00 ಸಂಜೆ 5:00 ಗಂಟೆಯವರೆಗೂ ಮದ್ಯಾಹ್ನದ ಊಟಕ್ಕೂ ಹೋಗದೆ ನಿರಂತರವಾಗಿ ಸಾರ್ವಜನಿಕರಿಂದ ಅಹವಾಲುಗಳು ಸ್ವೀಕರಿಸಿದರು. ಮೊದಲ ಬಾರಿಗೆ ಇಷ್ಟು ಪ್ರಮಾಣದಲ್ಲಿ ಲೋಕಾಯುಕ್ತರ ಸಭೆಗೆ ಹೆಚ್ಚು ಜನ ಬಂದು ಅಹವಾಲುಗಳು ಸಲ್ಲಿಸಿದ್ದು, ಇಂತಹ ಉತ್ತಮ ಅಧಿಕಾರಿಗಳಿಂದ ಭ್ರಷ್ಟಚಾರ ಕಡಿವಾಣ ಹಾಕಲು ಸಾಧ್ಯವೆಂದು ಜನರು ಲೋಕಾಯುಕ್ತ ಎಸ್ಪಿ ಆಂಟೋನಿ ಜಾನ್ ಅವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲ್ಲೂಕಿನಲ್ಲಿ ಇಂದು ನಡೆದ ಲೋಕಾಯುಕ್ತರ ಸಭೆಯಿಂದ ಜನರಲ್ಲಿ ಹೊಸ ಚೈತನ್ಯ, ವ್ಯವಸ್ಥೆಯ ಮೇಲೆ ಹೊಸ ನಂಬಿಕೆ ಉಮ್ಮಸ್ಸು ಬಂದಾಂತಾಗಿದೆ. ಅಧಿಕಾರಿಗಳಿಗಂತೂ ಬಿಸಿ ಮುಟ್ಟಿಸಿ ಚಳಿಬಿಡಿಸಿದ್ದಾರೆ ಬೆಳಗ್ಗೆಯಿಂದ ಸಂಜೆಯವರೆಗೆ ನಿರಂತರವಾಗಿ ಕೆಲಸ ಮಾಡಿ ಕರ್ತವ್ಯ ನಿಷ್ಠೆ ಮೆರೆದಿರುವ ಲೋಕಾಯುಕ್ತ ಅಧಿಕಾರಿಗಳಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.
ಈ ಸಂದರ್ಭದಲ್ಲಿ ಲೋಕಾಯುಕ್ತ ಡಿವೈಎಸ್ಪಿ ವೀರೇಂದ್ರಕುಮಾರ್,ತಹಶೀಲ್ದಾರ್ ಬಿ.ಎನ್ ಸ್ವಾಮಿ, ಸಿಬ್ಬಂದಿ ಮಾಳಪ್ಪ, ದೇವರಾಜು, ಲಿಂಗರಾಜು, ಸತೀಶ್, ಜಯಮ್ಮ ಸೇರಿದಂತೆ ತಾಲ್ಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ಕೋಟಹಳ್ಳಿ ಅನಿಲ್ ಕುಮಾರ್