ಭಾರೀ ದಂಡ, ಸೈಲ್ ಪ್ರಮುಖ ಅಪರಾಧಿ ಎಂದು ಘೋಷಿಸಿದ ಕೋರ್ಟ್ .! ಶಾಸಕ ಸ್ಥಾನ ಅನರ್ಹವಾಗುವ ಭೀತಿ.!
ಬೆಂಗಳೂರು: ಬೇಲೆಕೇರಿ ಬಂದರಿನಿಂದ ಆದಿರು ಅಕ್ರಮ ಸಾಗಾಟ ವಿಶೇಷ ಸತೀಶ್ ಪ್ರಕರಣದ ಸಂಬಂಧ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯವು ಕಾರವಾರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಗೆ 7 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದೆ.
ಮೂರನೇ ಪ್ರಕರಣದಲ್ಲಿ ಈ ಶಿಕ್ಷೆ ಪ್ರಕಟಿಸಲಾಗಿದೆ. ಇದಲ್ಲದೆ ಉಳಿದ 5 ಪ್ರಕರಣಗಳಲ್ಲಿಯೂ ಶಿಕ್ಷೆ ಪ್ರಮಾಣ ಹಾಗೂ ದಂಡ ಪ್ರಕಟಿಸಲಾಗಿದೆ. ಒಟ್ಟಾರೆಯಾಗಿ ಒಳಸಂಚಿಗೆ 5 ವರ್ಷ, ವಂಚನೆಗೆ 7 ವರ್ಷ, ಕಳ್ಳತನಕ್ಕೆ 3 ವರ್ಷ ಜೈಲು ಶಿಕ್ಷೆಯನ್ನು ಶನಿವಾರ ಪ್ರಕಟಿಸಿದೆ. ಪ್ರಕರಣದವಾದ-ಪ್ರತಿವಾದ ಆಲಿಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅಕ್ಟೋಬರ್ 24 ರಂದು ಶಾಸಕ ಸತೀಶ್ ಸೈಲ್ ದೋಷಿ ಎಂದು ತೀರ್ಪು ನೀಡಿತು.
ಒಟ್ಟು 6 ಪ್ರಕರಣಗಳಲ್ಲಿ ಶಾಸಕ ಸತೀಶ್ ಸೈಲ್ ಹಾಗೂ ಅಂದಿನ ಬಂದರು ಅಧಿಕಾರಿಯಾಗಿದ್ದ ಮಹೇಶ್ ಬಿಳಿಯ ಸೇರಿದಂತೆ 7 ಜನರನ್ನು ದೋಷಿಗಳು ಎಂದು ಆದೇಶಿಸಿದ್ದ ನ್ಯಾಯಾಲಯ, ತೀರ್ಪನ್ನು ಶನಿವಾರಕ್ಕೆ ಕಾಯ್ದಿರಿಸಿತ್ತು.
ಅಕ್ರಮ ಗಣಿಗಾರಿಕೆ ತನಿಖೆ ವೇಳೆ ಈ ಪ್ರಕರಣವನ್ನು ಬೆಳಕಿಗೆ ತಂದಿದ್ದ ಅಂದಿನ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರು ಸಮಗ್ರ ತನಿಖೆ ನಡೆಸಿ, ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಅಪರಾಧಿಗಳಿಗೆ ವಂಚನೆ ಪ್ರಕರಣದಲ್ಲಿ 7 ವರ್ಷ, ಒಳಸಂಚು ಪ್ರಕರಣದಲ್ಲಿ 5 ವರ್ಷ ಮತ್ತು ಕಳ್ಳತನ ಪ್ರಕರಣದಲ್ಲಿ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಈಗಾಗಲೇ ಜೈಲಿನಲ್ಲಿ ಕಳೆದಿರುವ ಶಿಕ್ಷೆ ಪ್ರಮಾಣವನ್ನು ಹೊರತುಪಡಿಸಿ, ಉಳಿದ ಶಿಕ್ಷೆಯನ್ನು ಆರೋಪಿಗಳು ಅನುಭವಿಸಬೇಕಿದೆ.
40 ಕೋಟಿ ರೂಪಾಯಿ ದಂಡ : ಸತೀಶ್ ಸೈಲ್ ಜೊತೆಗೆ ಮಹೇಶ್ ಬಿಳಿಯೆ, ಲಕ್ಷ್ಮೀ ವೆಂಕಟೇಶ್ವರ ಮಿನರಲ್ಸ್, ಖಾರದಪುಡಿ ಮಹೇಶ್. ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪನಿಗೂ ಜೈಲು ಶಿಕ್ಷೆ ವಿಧಿಸಲಾಗಿದೆ. ಇದೇ ವೇಳೆ ಎಲ್ಲಾ ದೋಷಿತರ ವಿರುದ್ಧದ 6 ಪ್ರಕರಣಗಳ ಸಂಬಂಧ ಒಟ್ಟಾರೆ 40 ಕೋಟಿ ರೂ.ಗೂ (6 ಕೋಟಿ ರೂ., 9 ಕೋಟಿ ರೂ., 9 ಕೋಟಿ ರೂ., 9.52 ಕೋಟಿ ರೂ., 9.25 ಕೋಟಿ ರೂ. ಹಾಗೂ 90 ಲಕ್ಷ ರೂ.) ಅಧಿಕ ದಂಡವನ್ನು ಸಹ ನ್ಯಾಯಾಲಯ ವಿಧಿಸಿದೆ. ಜೊತೆಗೆ, ದಂಡದ ಹಣವನ್ನು ಜಪ್ತಿ ಮಾಡಿಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ಆದೇಶಿಸಿದೆ.
ಶಾಸಕ ಸ್ಥಾನ ಅನರ್ಹ : ನಿಯಮಗಳ ಪ್ರಕಾರ ಎರಡು ವರ್ಷಗಳಿಗಿಂತ ಹೆಚ್ಚಿನ ಜೈಲು ಶಿಕ್ಷೆ ವಿಧಿಸಿರುವುದರಿಂದ ಸತೀಶ್ ಸೈಲ್ ಶಾಸಕ ಸ್ಥಾನವೂ ಅನರ್ಹಗೊಳ್ಳಲಿದೆ. ಅದರಂತೆ ಸೈಲ್‌ಗೆ 7 ವರ್ಷದಷ್ಟು ಜೈಲು ಶಿಕ್ಷೆ ಆಗಿದೆ. ಹೀಗಾಗಿ ಶಾಸಕ ಸ್ಥಾನ ಅನರ್ಹಗೊಳ್ಳಲಿದೆ. ಒಂದು ವೇಳೆ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿ ಅಲ್ಲಿ ಶಿಕ್ಷೆಗೆ ತಡೆ ಸಿಕ್ಕರೆ ಅನರ್ಹತೆಯಿಂದ ಬಚಾವಾಗಬಹುದು.
ಇಡೀ ಪ್ರಕರಣದಿಂದ ಈಗ ಕಾರವಾರ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಪರಿಣಾಮಗಳು ಉಂಟಾಗಲಿದ್ದು ಸತೀಶ್ ಸೈಲ್ ಅವರಿಗೆ ಜನಪ್ರತಿನಿಧಿಗಳ ನ್ಯಾಯಾಲಯ ವಿಧಿಸಿದ ಶಿಕ್ಷೆಯನ್ನು ಹೈಕೋರ್ಟ್ ತಡೆಹಿಡಿಯದಿದ್ದರೆ ಸತೀಶ್ ಸೈಲ್ ತಮ್ಮ ಶಾಸಕತ್ವದಿಂದ ಅನರ್ಹಗೊಳ್ಳುವ ಭೀತಿಯನ್ನು ಎದುರಿಸುತ್ತಿದ್ದಾರೆ.
ಸತೀಶ್ ಸೈಲ್ ಅವರಿಗೆ ಈ ಪ್ರಕರಣದಲ್ಲಿ ಹೈಕೋರ್ಟ್ ಒಂದು ವೇಳೆ ಜಾಮೀನು ನೀಡಿದರೂ, ಶಿಕ್ಷೆಗೆ ತಡೆಯಾಜ್ಞೆ ನೀಡಬೇಕು. ಇಲ್ಲದಿದ್ದರೆ ಸತೀಶ್ ಅವರು ಜನ ಪ್ರತಿನಿಧಿಗಳ ಕಾಯ್ದೆ ಅಡಿಯಲ್ಲಿ ಅನರ್ಹರಾದರೆ ಆರು ತಿಂಗಳ ಒಳಗೆ ಕಾರವಾರ ವಿಧಾನಸಭೆಗೆ ಮತ್ತೊಮ್ಮೆ ಚುನಾವಣೆ ನಡೆಯಬೇಕಾಗಿ ಬರಬಹುದು.
ಹೈಕೋರ್ಟ್ ಮೇಲೆ ನಿಂತಿದೆ ಭವಿಷ್ಯ : ಹೀಗಾಗಿ ಇಂದು ತೀರ್ಪು ಪ್ರಕಟವಾಗಿದ್ದರೂ ಸತೀಶ ಸೈಲ್ ಅವರು ಹೈಕೋರ್ಟಿನಲ್ಲಿ ತೀರ್ಪನ್ನು ಪ್ರಶ್ನಿಸಿದ ನಂತರ ಹೈಕೋರ್ಟ್ ಯಾವ ತೀರ್ಮಾನಕ್ಕೆ ಬರುತ್ತದೆ ಎಂಬುದರ ಮೇಲೆ ಸತೀಶ್ ಸೈಲ್ ಅವರ ರಾಜಕೀಯ ಭವಿಷ್ಯ ಅಡಗಿದೆ.
ಏನಿದು ಪ್ರಕರಣ: ಹೊಸಪೇಟೆ, ಸಂಡೂರು, ಚಿತ್ರದುರ್ಗದ ಅರಣ್ಯ ಪ್ರದೇಶಗಳಿಂದ ಅಕ್ರಮವಾಗಿ ಭಾರಿ ಪ್ರಮಾಣದ ಕಬ್ಬಿಣದ ಅದಿರು ವಿದೇಶಕ್ಕೆ ರಫ್ತಾಗುತ್ತಿತ್ತು. 2010ರ ಮಾರ್ಚ್ .20 ರಂದು ಅರಣ್ಯ ಇಲಾಖೆ 350 ಕೋಟಿ ರೂ. ಮೌಲ್ಯದ ಬರೋಬ್ಬರಿ 8.5 ಲಕ್ಷ ಮೆಟ್ರಿಕ್ ಟನ್ ಅದಿರು ಮುಟ್ಟುಗೋಲು ಹಾಕಿಕೊಂಡಿತ್ತು. ಆದಿರನ್ನು ಕಾಯ್ದುಕೊಳ್ಳುವಂತೆ ಬೇಲೆಕೇರು ಬಂದರು ನಿರ್ವಹಿಸುತ್ತಿದ್ದ ಬಂದರು ಇಲಾಖೆಗೆ ಅರಣ್ಯ ಸೂಚನೆಯನ್ನು ನೀಡಿತ್ತು. ಕೆಲವು ತಿಂಗಳ ಬಳಿಕ ಅರಣ್ಯ ಇಲಾಖೆ ತಂಡ ಮರು ಪರಿಶೀಲಿಸಿದಾಗ ಬಂದರಿನಲ್ಲಿ ಕೇವಲ 2 ಲಕ್ಷ ಮೆಟ್ರಿಕ್ ಟನ್ ಅದಿರು ಮಾತ್ರ ಇತ್ತು. 250 ಕೋಟಿ ರೂ. ಆದಿರು ನಾಪತ್ತೆ ಬಗ್ಗೆ ಬಂದರು ಅಧಿಕಾರಿ, ಆದಿರು ಸಾಗಣೆ ಕಂಪನಿಗಳ ವಿರುದ್ಧ ಅರಣ್ಯ ಇಲಾಖೆಯು ದೂರು ನೀಡಿತ್ತು.
ಈ ಅಕ್ರಮವೆಸಗಿದ ಕಂಪೆನಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತರು ಸರ್ಕಾರಕ್ಕೆ ವರದಿ ಸಲ್ಲಿಸಿ ಒತ್ತಾಯ ಮಾಡಿದ್ದರು. ಆಗ ಹಗರಣ ಬೆಳಕಿಗೆ ಬಂದಿತ್ತು. 2010 ರ ಜೂ.23ರಂದು ಸರ್ಕಾರ ಪ್ರಕರಣವನ್ನು ಸಿಐಡಿಗೆ ಒಪ್ಪಿಸಿತ್ತು. 2011ರಲ್ಲಿ ಪ್ರಕರಣವನ್ನು ಸುಪ್ರೀಂಕೋರ್ಟ್ ಸಿಬಿಐಗೆ ವಹಿಸಿತ್ತು.
ಅಕ್ರಮ ಅದಿರು ಸಾಗಣೆ ಸುಪ್ರೀಂಕೋರ್ಟ್ 2009 ರಿಂದ ಮೇ 2010ರ ನಡುವೆ ರಾಜ್ಯದಲ್ಲಿನ ನಡೆದ ಅಕ್ರಮ ಗಣಿಗಾರಿಕೆ ಮತ್ತು ಆಕ್ರಮ ಆದಿರು ಸಾಗಣೆ ಕುರಿತು ತನಿಖೆ ನಡೆಸುವಂತೆ ಸೂಚಿಸಿತ್ತು. ಅದರಂತೆ ಸಿಬಿಐ 2013ರ ಸೆ.13 ರಂದು ಕೇಸ್ ದಾಖಲಿಸಿ ತನಿಖೆಕೈಗೊಂಡಿತ್ತು. ಸತೀಶ್ ಮಾಲಿಕತ್ವದ ಕಂಪನಿ ಸುಮಾರು 7.23 ಲಕ್ಷ ಟನ್ ಮೆಟ್ರಿಕ್ ಅದಿರನ್ನು ಬೇಲೆಕೇರಿ ಮೂಲಕ ವಿದೇಶಕ್ಕೆ ರಫ್ತು ಮಾಡಿರುವುದು ತನಿಖೆಯಲ್ಲಿ ಕಂಡುಬಂತು. ಬೇಲೆಕೇರಿ ಬಂದರಿನ ಮೂಲಕ ಸುಮಾರು 88.06 ಲಕ್ಷ ಮೆಟ್ರಿಕ್ ಟನ್ ಅದಿರನ್ನು 73 ರಫ್ತು ಕಂಪನಿಗಳ ಮೂಲಕ ವಿದೇಶಕ್ಕೆ ರವಾನೆ ಮಾಡಲಾಗಿತ್ತು ಎಂಬುದನ್ನು ಕೇಂದ್ರೀಯ ಸಮಿತಿ ಪ್ರಾಧಿಕಾರ (ಸಿಇಸಿ) ವರದಿಯಲ್ಲಿ ಉಲ್ಲೇಖ ಮಾಡಲಾಗಿತ್ತು.