ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುವಂತೆ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಸೋಮವಾರ ಲೋಕಾಯುಕ್ತಕ್ಕೆ ಮತ್ತೊಂದು ದೂರು ದಾಖಲಿಸಿದ್ದಾರೆ.
ಜತೆಗೆ ಲೋಕಾಯುಕ್ತ ಪೊಲೀಸರು ಏನೆಲ್ಲ ಅಂಶಗಳ ಆಧಾರದ ಮೇಲೆ ಸಿದ್ದರಾಮಯ್ಯ ಅವರನ್ನು ವಿಚಾರಣೆ ನಡೆಸಬಹುದು ಎಂದು ವಿಸ್ತ್ರತವಾಗಿ ದೂರಿನಲ್ಲಿ ಕೃಷ್ಣ ತಿಳಿಸಿದ್ದಾರೆ.ಮುಡಾ ಪ್ರಕರಣದ 1ನೇ ಆರೋಪಿ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು, ಪ್ರಚೋದನೆ ನೀಡುವ ಕೃತ್ಯದಲ್ಲಿ ನಿರಂತರವಾಗಿ ತೊಡಗಿದ್ದಾರೆ. ಆದ್ದರಿಂದ ಅವರನ್ನು ಶೀಘ್ರ ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಬೇಕು ಎಂದು ಲೋಕಾಯುಕ್ತ ಎಸ್ಪಿ ಉದೇಶ್ ಅವರಿಗೆ ದೂರು ನೀಡಿದ್ದಾರೆ. ಮೈಸೂರಿನ ದಿವಾನ್ಸ್ ರಸ್ತೆಯ ಲೋಕಾಯುಕ್ತ ಕಚೇರಿಯಲ್ಲಿ ಸೋಮವಾರ 25 ಪುಟಗಳ ದೂರು ನೀಡಿದ್ದಾರೆ. ಹೈಕೋರ್ಟ್‌ಗೆ ಸಿದ್ದರಾಮಯ್ಯ ಸಲ್ಲಿಸಿರುವ ರಿಟ್ ಅರ್ಜಿ ಆಧಾರದ ಮೇಲೆ ತನಿಖೆ ನಡೆಸಿದರೆ ಸಿದ್ದರಾಮಯ್ಯ ವಿರುದ್ಧದ ಆರೋಪ ಸಾಬೀತಾಗುತ್ತದೆ ಎಂದು ಅಭಿಪ್ರಾಯಪಟ್ಟಿರುವ ಸ್ನೇಹಮಯಿ ಕೃಷ್ಣ, ಏನೆಲ್ಲ ಅಂಶಗಳ ಸಿದ್ದರಾಮಯ್ಯ ಅವರನ್ನು ವಿಚಾರಣೆ ಮಾಡಬಹುದು ಎಂಬುವುದನ್ನು ವಿವರವಾದ ಪಟ್ಟಿ ನೀಡಿದ್ದಾರೆ.