ಪುಟ್ಟಪರ್ತಿ (ಆಂಧ್ರಪ್ರದೇಶ): ಶೆಡ್‌ನಲ್ಲಿದ್ದ ಕರ್ನಾಟಕದ ಬಳ್ಳಾರಿಯ ವಲಸಿಗ ಕೂಲಿ ಕಾರ್ಮಿಕ ಅತ್ತೆ, ಸೊಸೆಗೆ ಆರು ಮಂದಿ ದುಷ್ಕರ್ಮಿಗಳು ಚಾಕು ತೋರಿಸಿ, ಬೆದರಿಸಿ ಸಾಮೂಹಿಕ ಅತ್ಯಾಚಾರ ನಡೆಸಿರುವ ಹೀನ ಕೃತ್ಯ ಶ್ರೀ ಸತ್ಯಸಾಯಿ ಜಿಲ್ಲೆಯಲ್ಲಿ ನಡೆದಿದೆ.
ಬಳ್ಳಾರಿ ಕುಟುಂಬವೊಂದು ಕಟ್ಟಡ ನಿರ್ಮಾಣದ ಕೂಲಿ ಅರಸಿ ಪುಟ್ಟಪರ್ತಿಗೆ ವಲಸೆ ಬಂದಿತ್ತು. ಪತಿ-ಪತ್ನಿ, ಮಗ ಸೊಸೆ ಕಳೆದ ಐದು ತಿಂಗಳ ಹಿಂದೆ ಇಲ್ಲಿನ ಪೇಪರ್ ಮಿಲ್ ನಿರ್ಮಾಣ ಕಾರ್ಯದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಮಿಲ್ ಪಕ್ಕದಲ್ಲಿಯೇ ತಾತ್ಕಾಲಿಕ ಶೆಡ್ಡೊಂದನ್ನು ಹಾಕಿಕೊಂಡು ಜೀವನ ಮಾಡುತ್ತಿದ್ದರು. ಎಂದಿನಂತೆ ಶುಕ್ರವಾರ ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ಬಂದು ಅತ್ತೆ- ಸೊಸೆ ಶೆಡ್‌ನಲ್ಲಿ ಮಲಗಿದ್ದರೆ, ಅಪ್ಪ ಮತ್ತು ಮಗ ಶೆಡ್ ಹೊರಗೆ ಮಲಗಿದ್ದಾರೆ. ಈ ವೇಳೆ ಎರಡು ದ್ವಿಚಕ್ರ ವಾಹನದಲ್ಲಿ ಕೆಲವು ದುಷ್ಕರ್ಮಿಗಳು ಬಂದಿದ್ದಾರೆ. ಶೆಡ್ ಮುಂದೆ ದಾಂಧಲೆ ಮಾಡುತ್ತಿದ್ದರಿಂದ ಎಚ್ಚರಗೊಂಡ ತಂದೆ ಮಗ ಯಾರು ನೀವು ಎಂದು ವಿಚಾರಿಸಿದಾಗ ಚಾಕು ತೋರಿಸಿ ಬೆದರಿಸಿದ್ದಾರೆ. ಬಳಿಕ ಶೆಡ್ ಒಳಗೆ ಮಲಗಿದ್ದ ಅತ್ತೆ ಸೊಸೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ವಾಹನದಲ್ಲಿ ಹೊರಟು ಹೋಗಿದ್ದಾರೆ. ಈ ಸಂಬಂಧ ಸಂತ್ರಸ್ತರು ಚಿಲಮತ್ತೂರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಂತ್ರಸ್ತ ಮಹಿಳೆಯರನ್ನು ಹಿಂದುಪುರಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕೃತ್ಯಕ್ಕೆ ಮುನ್ನ ದರೋಡೆ : ಘಟನೆ ಗಮನಿಸಿದರೆ ಆರೋಪಿಗಳು ಕೃತ್ಯಕ್ಕೆ ಮುನ್ನ ದರೋಡೆ ನಡೆಸಿದಂತೆ ಕಂಡುಬಂದಿದೆ. ಗ್ರಾಮದ ಹೊರಗೆ ಕುಟುಂಬ ಒಂದೇ ಪೇಪರ್ ಮಿಲ್ ಬಳಿ ಇರುವುದನ್ನು ತಂಡ ತಿಳಿದು ಮೊದಲಿಗೆ ಗ್ಯಾಂಗ್ ಮಿಲ್ ಬಳಿಯ ಸಿಸಿಟಿವಿ ನಾಶ ಪಡೆಸಿದೆ. ಬಳಿಕ ಸಂತ್ರಸ್ತ ಮಹಿಳೆಯರಿಗೆ ಬೆದರಿಕೆ ಹಾಕಿ ದೌರ್ಜನ್ಯ ಎಸಗಿದ್ದಾರೆ. ಸಿಸಿಟಿವಿ ಹಾನಿ ಮಾಡುವಾಗ ಆರೋಪಿಗಳ ಕೃತ್ಯ ರೆಕಾರ್ಡ್ ಆಗಿದ್ದು, ಅದರ ಆಧಾರದ ಮೇಲೆ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಗಾಂಜಾ ಸೇವಿಸಿ ಅಥವಾ ಕಳ್ಳತನದಂತಹ ಕೃತ್ಯ ಎಸಗಿದ ಬಳಿಕ ಈ ಅಮಾನವೀಯ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂಬ ನಿಟ್ಟಿನಲ್ಲೂ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.
ಸಿಎಂ ನಾಯ್ಡು ಕಳವಳ : ಘಟನೆಗೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತೀವ್ರವಾಗಿ ಕಳವಳ ವ್ಯಕ್ತಪಡಿಸಿ ಜಿಲ್ಲಾ ಎಸ್ಪಿ ರತ್ನ ಜೊತೆ ಮಾತನಾಡಿ ಮಾಹಿತಿ ಪಡೆದಿದ್ದಾರೆ. ವಿಶೇಷ ತಂಡಗಳನ್ನು ರಚಿಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತ ಮಹಿಳೆಯರಿಗೆ ಉತ್ತಮ ವೈದ್ಯಕೀಯ ಸೇವೆ ನೀಡುವಂತೆ ಗೃಹ ಸಚಿವೆ ವಂಗಲಪುಡಿ ಅನಿತಾ ಅವರು ಸೂಚನೆ ನೀಡಿದ್ದಾರೆ.