ಮುಂಬೈ: ದೇಶ ಕಂಡ ಅಪ್ರತಿಮ ಉದ್ಯಮಿ ರತನ್ ಟಾಟಾ ತಮ್ಮ 86 ನೇ ವಯಸ್ಸಿನಲ್ಲಿ ವಯೋ ಸಹಜ ಕಾಯಿಲೆಯಿಂದ ವಿಧಿವಶರಾಗಿದ್ದಾರೆ. ಸೋಮವಾರದಂದು ಮುಂಬೈನ ಬ್ರೀಚ್ ಕ್ಯಾಂಡಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಬುಧವಾರ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ.
ಟಾಟಾ ಸಂಸ್ಥೆಯ ಮೂಲಕ ಲಕ್ಷಾಂತರ ಜನರಿಗೆ ಉದ್ಯೋಗವಕಾಶ ಕಲ್ಪಿಸಿಕೊಟ್ಟಿದ್ದಾರೆ. 1937ರಲ್ಲಿ ಜನಿಸಿದ ರತನ್ ಟಾಟಾ ತಮ್ಮ ಪೋಷಕರು 1948ರಲ್ಲಿ ಬೇರೆ ಬೇರೆಯಾದ ಬಳಿಕ ಅಜ್ಜಿ ನವಾಜ್‌ಭಾಯಿ ಟಾಟಾ ಅವರ ಜೊತೆಯಲ್ಲಿ ತಮ್ಮ ಬಾಲ್ಯವನ್ನು ಕಳೆದಿದ್ದರು. ಕಾರ್ನೆಲ್ ವಿವಿಯಿಂದ ವಾಸ್ತುಶಿಲ್ಪ ಪದವಿ ಪಡೆದಿದ್ದ ಅವರು, ಮುಂದೆ ಹಾರ್ವರ್ಡ್ ವಿವಿಯಲ್ಲಿ ಮ್ಯಾನೇಜ್‌ಮೆಂಟ್ ಕೋರ್ಸ್ ಪೂರ್ಣಗೊಳಿಸಿದ್ದರು.
ತಮ್ಮ ಮುತ್ತಜ್ಜ ಸ್ಥಾಪಿಸಿದ್ದ ಟಾಟಾ ಗ್ರೂಪ್‌ನ ಜವಾಬ್ದಾರಿಯನ್ನು ರತನ್ ಟಾಟಾ ಅವರು 1991ರಲ್ಲಿ ವಹಿಸಿಕೊಂಡಿದ್ದರು. ಸುಮಾರು 100 ವರ್ಷಗಳ ಹಿಂದೆ ಆರಂಭವಾದ ಈ ಸಂಸ್ಥೆಯನ್ನು ಅವರು 2012ರವರೆಗೆ ಸಮರ್ಥವಾಗಿ ಮುನ್ನಡೆಸಿದ್ದರು.
ದೇಶದ ಅತ್ಯಂತ ಪ್ರತಿಷ್ಠಿತ ಹಾಗೂ ಬೃಹತ್ ಉದ್ಯಮಗಳಲ್ಲಿ ಒಂದಾದ ಟಾಟಾ ಸನ್ಸ್‌ನ ಅಧ್ಯಕ್ಷರಾಗಿದ್ದ ರತನ್ ಟಾಟಾ ಅವರು ವಯೋಸಹಜ ಅನಾರೋಗ್ಯ ಸಮಸ್ಯೆಯಿಂದ ಬುಧವಾರ ರಾತ್ರಿ ನಿಧನರಾದರು.
ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪತಿಮುರ್ಮು, ವಿಪಕ್ಷ ನಾಯಕ ರಾಹುಲ್ ಗಾಂಧಿ, ಮಹಾರಾಷ್ಟ್ರ ಸಿಎಂ. ಏಕನಾಥ್ ಶಿಂದೆ, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಸೇರಿದಂತೆ ದೇಶದ ಗಣ್ಯರು, ರಾಜಕೀಯ ನಾಯಕರು, ಉದ್ಯಮಿಗಳು ಸಂತಾಪ ಸೂಚಿಸಿ ಕಂಬನಿ ಮಿಡಿದಿದ್ದಾರೆ.
ರತನ್ ಟಾಟಾ ಅವರು ದೂರದೃಷ್ಟಿಯುಳ್ಳ ಉದ್ಯಮಿ ನಾಯಕರಾಗಿದ್ದರು. ಅವರೊಬ್ಬರ ಅಸಾಧಾರಣ ಮನುಷ್ಯ. ಭಾರತದ ಅತ್ಯಂತ ಹಳೆಯ ಮತ್ತು ಪ್ರತಿಷ್ಠಿತ ಉದ್ಯಮ ಸಂಸ್ಥೆಗೆ ಸ್ಥಿರ ನಾಯಕತ್ವವನ್ನು ಒದಗಿಸಿದ್ದರು. ಅವರ ಕೊಡುಗೆಯು ಆಡಳಿತ ಮಂಡಳಿಯನ್ನು ಮೀರಿದ್ದಾಗಿತ್ತು. ಅವರ ನಮ್ರತೆ, ದಯೆ ಮತ್ತು ಸಮಾಜವನ್ನು ಉತ್ತಮಗೊಳಿಸುವ ಅಚಲವಾದ ಬದ್ಧತೆಗಾಗಿ ಅಸಂಖ್ಯಾತ ಜನರು ಅವರನ್ನು ಪ್ರೀತಿಸುತ್ತಿದ್ದರು,” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.