ಚಿಕ್ಕಬಳ್ಳಾಪುರ ನಗರದಲ್ಲಿ ಕೊಟ್ಪ ದಾಳಿ 22 ಪ್ರಕರಣ ದಾಖಲು; ರೂ.2500 ದಂಡ ಸಂಗ್ರಹಣೆ.
ಚಿಕ್ಕಬಳ್ಳಾಪುರ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಮತ್ತು ತಾಲ್ಲೂಕು ತನಿಖಾದಳ ಚಿಕ್ಕಬಳ್ಳಾಪುರ ಇವರ ವತಿಯಿಂದ ತಂಬಾಕು ಮುಕ್ತ ಯುವ ಅಭಿಯಾನ 2.0 ಕಾರ್ಯಕ್ರಮದ ಪ್ರಯುಕ್ತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಮತ್ತು ಜಿಲ್ಲಾ ಸರ್ವೆಕ್ಷಣಾಧಿಕಾರಿಗಳ ಮುಂದಾಳತ್ವದಲ್ಲಿ ಕೋಟ್ಪಾದಾಳಿಯನ್ನು ಮಂಗಳವಾರ ಚಿಕ್ಕಬಳ್ಳಾಪುರ ನಗರದ ಬಿ.ಬಿ ರಸ್ತೆ, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ನಿಯಮಬಾಹಿರವಾಗಿ ತಂಬಾಕು ಪದಾರ್ಥಗಳ ಮಾರಾಟ ಮಾಡುತ್ತಿದ್ದ ಅಂಗಡಿ ಮಾಲೀಕರಿಗೆ ದಂಡ ವಿಧಿಸಲಾಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಶ್ ಕುಮಾರ್ ಅವರು ಮಾತನಾಡಿ, ತಂಬಾಕಿನಲ್ಲಿ 700 ವಿಷಯುಕ್ತ ರಾಸಾಯನಿಕಗಳಿದ್ದು, ತಂಬಾಕು ಉತ್ಪನ್ನಗಳ ಸೇವನೆಯಿಂದ ದೀರ್ಘಕಾಲದ ಆರೋಗ್ಯ ಸಂಬಂಧಿತ ಕಾಯಿಲೆಗಳು ಬರುತ್ತವೆ. ತಂಬಾಕು ಸೇವನೆಯನ್ನು ತ್ಯಜಿಸಿ ಆರೋಗ್ಯಯುತವಾಗಿ ಬಾಳಬೇಕೆಂದು ಸಲಹೆ ನೀಡಿದರು.
ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ. ಕೃಷ್ಣಪ್ರಸಾದ್ ಅವರು ಮಾತನಾಡಿ, ಸಾರ್ವಜನಿಕ ಪ್ರದೇಶದಲ್ಲಿ ಧೂಮಪಾನನ್ನು ನೀಷೇಧಿಸಿದ್ದು, ಉಲಂಘಿಸಿದಲ್ಲಿ ದಂಡವಿಧಿಸಲಾಗುವುದು. ಅಂಗಡಿ ಮಾಲೀಕರು ಕಡ್ಡಾಯವಾಗಿ ಧೂಮಪಾನ ನೀಷೇಧಿತ ವಲಯ ಎಂಬ ನಾಮಫಲಕನ್ನು ಅಳವಡಿಸಿರಬೇಕು. ಇಲ್ಲವಾದಲ್ಲಿ ಅಂಗಡಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ದಾಳಿ ಸಂದರ್ಭದಲ್ಲಿ ಒಟ್ಟು 22 ಪ್ರಕರಣಗಳಲ್ಲಿ 2500 ದಂಡ ವಿಧಿಸಿ ಸಂಗ್ರಹಣೆ ಮಾಡಲಾಗಿದೆ ಎಂದು ತಿಳಿಸಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಂಜುಳಾ ಅಂಗಡಿ ಮಾಲೀಕರಿಗೆ ಸ್ವಚ್ಚತೆ, ಆರೋಗ್ಯದ ಬಗ್ಗೆ ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಮಾಜ ಕಾರ್ಯಕರ್ತ ಮಂಜುನಾಥ, ತಾಲ್ಲೂಕ ಹಿರಿಯ ಆರೋಗ್ಯ ನೀರಿಕ್ಷಣಾಧಿಕಾರಿ ನಾರಯಣಸ್ವಾಮಿ ಮತ್ತು ಗಂಗಾಧರ್ ಪೊಲೀಸ್ ಸಿಬ್ಬಂದಿ ಹಾಜರಿದ್ದರು.